ಹೆಲಿಕಾಪ್ಟರ್ ದುರಂತ :‌ ಉಕ್ರೇನ್‌ ಸಚಿವ, ಮೂವರು ಮಕ್ಕಳು ಸೇರಿ 18 ಜನರು ಸಾವು

ಕೀವ್:‌ ಹೆಲಿಕಾಪ್ಟರ್‌ ಅಪಘಾತದಲ್ಲಿ ಉಕ್ರೇನ್‌ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ, ಮೂವರು ಮಕ್ಕಳು ಸೇರಿದಂತೆ ಒಟ್ಟು 18 ಜನರು ಮೃತಪಟ್ಟಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.
ಯುದ್ಧಪೀಡಿತ ಉಕ್ರೇನ್‌ ರಾಜಧಾನಿ ಕೀವ್‌ನ ಹೊರಭಾಗದಲ್ಲಿರುವ ಶಿಶುವಿಹಾರದ ಮೇಲೆ ಈ ಹೆಲಿಕಾಪ್ಟರ್‌ ಅಪ್ಪಳಿಸಿದ್ದು, ಉಕ್ರೇನ್‌ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಮತ್ತು ಉಪ ಸಚಿವ ಯೆವ್ಗೆನಿ ಯೆನಿನ್ ಸೇರಿದಂತೆ ಒಟ್ಟು 18 ಜನರು ಮೃತಪಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರಾಜ್ಯ ತುರ್ತು ಸೇವೆಯ ಹೆಲಿಕಾಪ್ಟರ್ ಬ್ರೋವರಿಯಲ್ಲಿ ಅಪಘಾತಕ್ಕೀಡಾಯಿತು. ಈ ಅಪಘಾತದಲ್ಲಿ ಆಂತರಿಕ ಸಚಿವ ಡೆನಿಸ್ ಮೊನಾಸ್ಟಿರ್ಸ್ಕಿ ಮತ್ತು ಉಪ ಸಚಿವ ಯೆವ್ಗೆನಿ ಯೆನಿನ್ ಸಾವಿಗೀಡಾಗಿದ್ದಾರೆ..” ಎಂದು ಉಕ್ರೇನ್‌ನ ಪೊಲೀಸ್ ಸೇವೆಯ ಮುಖ್ಯಸ್ಥ ಇಗೊರ್ ಕ್ಲೈಮೆಂಕೊ ತಿಳಿಸಿದ್ದಾರೆ.
ಈ ಅಪಘಾತದಲ್ಲಿ ಶಿಶುವಿಹಾರದ ಮೂವರು ಮಕ್ಕಳೂ ಅಸುನೀಗಿದ್ದಾರೆ ಎಂದು ತಿಳಿಸಿದ್ದಾರೆ. ಅಲ್ಲದೇ 15 ಮಕ್ಕಳು ಸೇರಿದಂತೆ ಒಟ್ಟು 29 ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ ಎಂದು ಕೀವ್ ಪ್ರಾಂತ್ಯದ ಗವರ್ನರ್ ಒಲೆಕ್ಸಿ ಕುಲೆಬಾ, ಮಾಹಿತಿ ನೀಡಿದ್ದಾರೆ.
ಅಪಘಾತ ಸಂಭವಿಸುತ್ತಿದ್ದಂತೇ ಹೆಲಿಕಾಪ್ಟರ್‌ಗೆ ಬೆಂಕಿ ಹೊತ್ತುಕೊಂಡಿದ್ದು, ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರಾದರೂ, ಅಷ್ಟರಲ್ಲಾಗಲೇ ಹೆಲಿಕಾಪ್ಟರ್‌ನಲ್ಲಿದ್ದವರೆಲ್ಲ ಮೃತಪಟ್ಟಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ವೃತ್ತಿಯಿಂದ ವಕೀಲರಾಗಿದ್ದ ಡೆನಿಸ್ ಮೊನಾಸ್ಟಿರ್ಸ್ಕಿ, ಜುಲೈ, 2021ರಲ್ಲಿ ಉಕ್ರೇನ್‌ನ ಆಂತರಿಕ ಸಚಿವರಾಗಿ ನೇಮಕಗೊಂಡಿದ್ದರು.
ಅಪಘಾತಕ್ಕೆ ಕಾರಣವೇನು ಎಂಬುದು ತನಿಖೆಯಿಂದ ತಿಳಿದು ಬರಲಿದ್ದು, ಅತ್ಯಂತ ಹಳೆಯದಾಗಿದ್ದ ಈ ಹೆಲಿಕಾಪ್ಟರ್‌ನ್ನು ಏಕೆ ಬಳಸಲಾಯಿತು ಎಂಬುದು ಗೊತ್ತಾಗಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement