ಹಿಂದಿನ ಸರ್ಕಾರಗಳಿಂದ ಬಂಜಾರ ಸಮುದಾಯದ ನಿರ್ಲಕ್ಷ್ಯ, ಆದ್ರೆ ನಾವು ಅವರಿಗೆ ಈಗ ಹಕ್ಕು ಕೊಟ್ಟಿದ್ದೇವೆ: ಪ್ರಧಾನಿ ಮೋದಿ

ಕಲಬುರಗಿ: ಹಿಂದಿನ ಸರ್ಕಾರ ಬಂಜಾರ ಸಮುದಾಯವನ್ನು (Banjara Community) ನಿರ್ಲಕ್ಷ್ಯ ಮಾಡಿತ್ತು. ಆದರೆ ನಮ್ಮ ಸರ್ಕಾರ ಅವರಿಗೆ ಹಕ್ಕು ಪತ್ರ ನೀಡುವ ಮೂಲ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಡಬಲ್‌ ಎಂಜಿನ್‌ ಸರ್ಕಾರ ಜನರ ಕಲ್ಯಾಣಕ್ಕೆ ಬದ್ಧವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಕಲಬುರಗಿಯ ಮಳಖೇಡದಲ್ಲಿ ವಿಜಯಪುರ, ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಗಳ ತಾಂಡಾಗಳಲ್ಲಿ ವಾಸವಾಗಿರುವ 51 ಸಾವಿರ ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಂಜಾರ ನಗಾರಿ ಬಾರಿಸುವ ಮೂಲಕ ಉದ್ಘಾಟಿಸಿದ ಅವರು ನಂತರ ಸಾಂಕೇತಿಕವಾಗಿ 5 ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸಿದರು. ಈ ವೇಳೆ ಮೋದಿಯವರಿಗೆ ಲಂಬಾಣಿ ಶಾಲು ಹೊದೆಸಿ, ಅನುಭವ ಮಂಟಪದ ಚಿತ್ರ ನೀಡಿ ಗೌರವಿಸಲಾಯಿತು.
ಆರಂಭದಲ್ಲಿ ಲಂಬಾಣಿ ಭಾಷೆಯಲ್ಲಿ ಮಾತನಾಡಿದ ಮೋದಿ ಬಳಿಕ ಹಿಂದಿಯಲ್ಲಿ ಭಾಷಣ ಮುಂದುವರಿಸಿದರು. ಸಂತ ಸೇವಾಲಾಲ್ ಮಹಾರಾಜರು ಮತ್ತು ಗಾಣಗಾಪುರದ ಗುರು ದತ್ತಾತ್ರೇಯರಿಗೆ ನಮಿಸಿ ತಮ್ಮ ಮಾತು ಆರಂಭಿಸಿದರು. ಈ ಸಮುದಾಯವರು ಹಕ್ಕುಗಳಿಗಾಗಿ ಬಹಳ ಸಂಘರ್ಷ ನಡೆಸುತ್ತಿದ್ದರು. ಹಿಂದಿನ ಸರ್ಕಾರಗಳು ಕೇವಲ ವೋಟ್‌ ಬ್ಯಾಂಕ್‌ ರಾಜಕಾರಣ ಮಾತ್ರ ಮಾಡುತ್ತಿದ್ದವು. 30 ವರ್ಷಗಳ ಹಿಂದೆಯೇ ತMಡಾಗಳ ಜನರಿಗೆ ಹಕ್ಕು ಪತ್ರ ನೀಡಬೇಕಿತ್ತು. ತಾಂಡಾ ನಿವಾಸಿಗಳನ್ನು 30 ವರ್ಷ ಕಾಯಿಸಿದ್ದಾರೆ. ಆದರೆ ಬಿಜೆಪಿ ಸರ್ಕಾರವು ಹಕ್ಕು ಪತ್ರಗಳನ್ನು ನೀಡಿ ಅವರಿಗೆ ಒಂದು ಹಕ್ಕು ನೀಡಿದೆ ಎಂದರು.
ಇಂದು, ಗುರುವಾರ ಈ ವೇದಿಕೆಯಲ್ಲಿ ನನ್ನಿಂದ ಹಕ್ಕು ಪತ್ರ ಪಡೆದ ತಾಯಿ ನನಗೆ ಆಶೀರ್ವಾದ ಮಾಡಿದ್ದಾರೆ. ಅವರ ಆಶೀರ್ವಾದ ದೇಶಸೇವೆ ಮಾಡಲು ನಮಗೆ ಇನ್ನಷ್ಟು ಶಕ್ತಿ ಕೊಟ್ಟಿದೆ, ನೀವು ನಿಶ್ಚಿಂತೆಯಿಂದಿರಿ, ನಿಮ್ಮ ಮಗನಾದ ನಾನು ದೆಹಲಿಯಲ್ಲಿ ಕೂತಿದ್ದೇನೆ. ಬಂಜಾರ ಸಮುದಾಯದ ಅಭಿವೃದ್ಧಿ ನಾವು ಪಣ ತೊಟ್ಟಿದ್ದೇವೆ ಎಂದು ಹೇಳಿದರು.
ಜಗಜ್ಯೋತಿ ಬಸವಣ್ಣ ಅವರನ್ನೂ ಈ ವೇಳೆ ನೆನಪಿಸಿಕೊಂಡ ಪ್ರಧಾನಿ ಮೋದಿ, ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್, ಸಬ್‌ ಕಾ ಪ್ರಯಾಸ್ ಎಂಬ ಮಂತ್ರವನ್ನು ಅಣ್ಣ ಬಸವಣ್ಣನವರು ತಿಳಿಸಿಕೊಟ್ಟಿದ್ದಾರೆ. ಅವರ ಅವತ್ತಿನ ಸಂಸತ್ ಇಂದಿಗೂ ಮಾದರಿಯಾಗಿದೆ. ಸಮಾಜದಲ್ಲಿ ಅವರು ಅಂದು ಹೊಸ ಬದಲಾವಣೆಯನ್ನೇ ಮಾಡಿದರು. ಅನುಭವ ಮಂಟಪದ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿದರು ಎಂದು ಹೇಳಿದರು.
ಬಂಜಾರ ಸಮುದಾಯದ ಸಹೋದರ ಸಹೋದರಿಯರು ರಾಷ್ಟ್ರದ ಅಭಿವೃದ್ಧಿಗೆ ಸಾಕಷ್ಟು ಕೊಡುಗೆ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರವು ದೇಶಾದ್ಯಂತ ಹಳ್ಳಿಗಳಲ್ಲಿರುವ ಗ್ರಾಮೀಣ ಮನೆಗಳಿಗೆ ಹಕ್ಕು ಪತ್ರ ನೀಡುತ್ತಿದೆ. ಈಗ ಬಂಜಾರ ಸಮುದಾಯ ಈ ಸೌಲಭ್ಯವನ್ನು ಪಡೆಯುತ್ತಿದೆ ಎಂದರು.
ಈ ಹಿಂದೆ ಕಲಬುರಗಿ ಬಂದಿದ್ದ ಘಟನೆಯನ್ನು ನೆನಪಿಸಿದ ಪ್ರಧಾನಿ ಮೋದಿ, 1994ರಲ್ಲಿ ನಾನು ರಾಜಕೀಯ ಸಮಾವೇಶ ನಡೆಸಲು ಕಲಬುರಗಿಗೆ ಬಂದಿದ್ದೆ. ಆಗ ನೀವೆಲ್ಲ ನನಗೆ ಆಶೀರ್ವಾದ ಮಾಡಿದ್ದೀರಿ ಎಂದರು.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement