ಫೆಬ್ರವರಿ 10ರಿಂದ ವಿಧಾನಮಂಡಲ‌ ಅಧಿವೇಶನ ಆರಂಭ: 17ರಂದು ರಾಜ್ಯ ಬಜೆಟ್ ಮಂಡನೆ

ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನವನ್ನು ಫೆಬ್ರವರಿ 10ರಿಂದ ನಡೆಸಲು ಶುಕ್ರವಾರ ನಡೆದ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ. ಹಾಗೂ ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜ್ಯದ್‌ ಬಜೆಟ್‌ ಮಂಡಿಸಲಿದ್ದಾರೆ.
ಸಂಪುಟ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಅವರು, ಫೆಬ್ರವರಿ 10ರಂದು ರಾಜ್ಯಪಾಲರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಫೆಬ್ರವರಿ16ರ ವರೆಗೂ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ. ಫೆಬ್ರವರಿ 17ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ ಬಜೆಟ್ ಮಂಡಿಸುವ ಸಾಧ್ಯತೆ ಇದೆ’ ಎಂದು ತಿಳಿಸಿದರು.
ಅಧಿವೇಶನದ ಕೊನೆಯ ದಿನವನ್ನು ನಿರ್ಧರಿಸಿಲ್ಲ. ವಿಧಾನಮಂಡಲದ ಉಭಯ ಸದನಗಳ ಕಲಾಪ ಸಲಹಾ ಸಮಿತಿಗಳ ಸಭೆ ನಡೆಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಲೋಕೋಪಯೋಗಿ ಇಲಾಖೆ ಮೂಲಕ ₹600 ಕೋಟಿ ವೆಚ್ಚದಲ್ಲಿ 100 ಡಾ.ಬಿ.ಆರ್. ಅಂಬೇಡ್ಕರ್ ವಸತಿ ನಿಲಯಗಳ ನಿರ್ಮಾಣ, ಉತ್ತರ ಕನ್ನಡ ಜಿಲ್ಲೆಯ ಜಾಲಿ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೂಂಜಾಲಕಟ್ಟೆ, ಉಡುಪಿ‌ ಜಿಲ್ಲೆಯ ಕುಂದಾಪುರ ತಾಲೂಕಿನ ವಡ್ಡರ್ಸೆ ಹಾಗೂ ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಹಿರೇಶಕುನ ಗ್ರಾಮದಲ್ಲಿ ಒಟ್ಟು ₹72 ಕೋಟಿ ವೆಚ್ಚದಲ್ಲಿ ನಾರಾಯಣ ಗುರು ವಸತಿ ಶಾಲೆ ನಿರ್ಮಾಣಕ್ಕೆ ಒಪ್ಪಿಗದ ನೀಡಲಾಗಿದೆ ಎಂದರು.
ನಗರ ಪ್ರದೇಶಗಳಲ್ಲಿ 117 ಆರೋಗ್ಯ ಕೇಂದ್ರಗಳನ್ನು ನಮ್ಮ ಕ್ಲಿನಿಕ್ ಗಳಾಗಿ ಪರಿವರ್ತಿಸುವುದು, ಗ್ರಾಮೀಣ ಪ್ರದೇಶದ 847 ಉಪ‌ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಪ್ರಸ್ತಾವಕ್ಕೆ ಒಪ್ಪಿಗೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.
ಅಲ್ಲದೆ, ಬೆಂಗಳೂರು ನಗರದ ಕಲಾಸಿಪಾಳ್ಯದಲ್ಲಿ ನೂತನ ಬಸ್ ನಿಲ್ದಾಣಕ್ಕೆ 63 ಕೋಟಿ ರೂ. ಅನುದಾನಕ್ಕೆ ಅನುಮೋದನೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕ್ಷತ್ರಿಯ ಮರಾಠ ಯುವ ವೇದಿಕೆಗೆ ಶಾಲಾ ಕಟ್ಟಡಕ್ಕಾಗಿ 2 ಎಕರೆ ಜಮೀನು ನೀಡಲು ಅನುಮೋದನೆ, ಕಿತ್ತೂರು ತಾಲೂಕು 50 ಹಾಸಿಗೆಯ ಆಸ್ಪತ್ರೆಯನ್ನು 100 ಹಾಸಿಗೆಗೆ ಮೇಲ್ದರ್ಜೆಗೇರಿಸಲು ನಿರ್ಧಾರ, ತರೀಕೆರೆ ತಾಲ್ಲೂಕು ಕಲ್ಲತ್ತಿ ಡ್ಯಾಮ್‌ಗೆ 20 ಕೋಟಿ ಅನುದಾನ ಮೀಸಲು ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಬೆಂಗಳೂರಿನಲ್ಲಿ ಭಾರೀ ಮಳೆ : ತಾಪಮಾನ ದಿಢೀರ್‌ ಕುಸಿತ

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement