ಎಸ್‌ಎಸ್‌ಸಿ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ

ಬೆಂಗಳೂರು: ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್‌ಸಿ) 2023ರ ಏಪ್ರಿಲ್‌ನಲ್ಲಿ ನಡೆಸುವ 11,409 ಹುದ್ದೆಗಳಿಗೆ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿದೆ.
ಕನ್ನಡ ಸೇರಿದಂತೆ ಒಟ್ಟು 13 ಪ್ರಾದೇಶಿಕ ಭಾಷೆಗಳಲ್ಲಿ ಅಭ್ಯರ್ಥಿಗಳು ಪರೀಕ್ಷೆಗಳನ್ನು ಬರೆಯವುದಕ್ಕೆ ಅವಕಾಶ ಕಲ್ಪಿಸಲಾಗಿದೆ. 11,409 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ರಾಜ್ಯದ ಅಭ್ಯರ್ಥಿಗಳು ಕನ್ನಡವನ್ನು ಆಯ್ಕೆ ಮಾಡಿಕೊಳ್ಳಲು 08 ಕೋಡ್‌ ಬಳಸಬಹುದು.
ಕಂಪ್ಯೂಟರ್‌ ಆಧಾರಿತ ಪರೀಕ್ಷೆಯು (ಪತ್ರಿಕೆ ಒಂದು) ವಸ್ತುನಿಷ್ಠ ಮಾದರಿಯ ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪತ್ರಿಕೆಯನ್ನು ಅಭ್ಯರ್ಥಿಗಳು ತಮಗೆ ಅನುಕೂಲವಾಗುವ ಇಂಗ್ಲಿಷ್‌ ಅಥವಾ ಹಿಂದಿಯಲ್ಲೇ ಬರೆಯಬಹುದು. ಎರಡನೇ ಪತ್ರಿಕೆಯನ್ನು ಅಭ್ಯರ್ಥಿಗಳು ಕನ್ನಡ ಸೇರಿದಂತೆ ಸೂಚಿತ 15 ಭಾಷೆಯಲ್ಲಿ ಬರೆಯಬಹುದು. 50 ಅಂಕಗಳಿಗೆ ವಿವರಣಾತ್ಮಕ ಅಥವಾ ಪ್ರಬಂಧ ಮಾದರಿಯಲ್ಲಿ ಉತ್ತರಿಸಬೇಕಾಗುತ್ತದೆ (45 ನಿಮಿಷಗಳ ಅವಕಾಶ).
ಫೆಬ್ರವರಿ 17 ಅರ್ಜಿ ಸಲ್ಲಿಸಲು ಕೊನೆಯ ದಿನ. ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಯಲಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಸಹಾಯವಾಣಿ 08025502520, 9483862020, ವೆಬ್‌ಸೈಟ್‌ https://ssc.nic.in ಸಂಪರ್ಕಿಸಬಹುದು.
ಎಸ್‌ಎಸ್‌ಸಿ ಪರೀಕ್ಷೆಗಳನ್ನು ಇದುವರೆಗೂ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶವಿತ್ತು. ಇದರಿಂದ ಹಿಂದಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದರು. ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದು ಸ್ವಾಗತಾರ್ಹ. ಕನ್ನಡದಲ್ಲಿ ಪರೀಕ್ಷೆ ಬರೆಯುವ ಅವಕಾಶಕ್ಕಾಗಿ ಪರಿಷತ್ತು ನಿರಂತರ ಹೋರಾಟ ನಡೆಸುತ್ತ ಬಂದಿದ್ದು, ಪರಿಷತ್ತಿನ ಕಾನೂನು ಹೋರಾಟಕ್ಕೆ ಸಂದ ಜಯವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು ಸ್ವಾಗತಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ​​ ಜೋಶಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಎಸ್ ಎಸ್ ಎಲ್ ಸಿ ಪರೀಕ್ಷೆ ವಿದ್ಯಾರ್ಥಿಗಳ ಮಾರಾಮಾರಿ : ಚಾಕು ಇರಿತ

ಕೇಂದ್ರ ಸರ್ಕಾರದಲ್ಲಿ ಉದ್ಯೋಗ ಪಡೆಯಲು ಬಯಸುವ ಕನ್ನಡಿಗರಿಗೆ, ಅದರಲ್ಲೂ ವಿಶೇಷವಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ನೇಮಕಾತಿ ಪರೀಕ್ಷೆ ಬರೆಯುವ ಸಂದರ್ಭದಲ್ಲಿ ಇಂಗ್ಲಿಷ್‌ ಅಥವಾ ಹಿಂದಿ ಭಾಷೆಯಲ್ಲಿ ಪರೀಕ್ಷೆ ಬರೆಯುವುದು ಕಷ್ಟವಾಗುತ್ತದೆ. ಸಾಕಷ್ಟು ಜನರಿಗೆ ಇಂಗ್ಲಿಷ್‌ ಹಾಗೂ ಹಿಂದಿ ಭಾಷೆಯೂ ಗೊತ್ತಿಲ್ಲದವರಿಗೆ ನಿಜಕ್ಕೂ ತೊಂದರೆಯಾಗುತ್ತಿದೆ ಎನ್ನುವ ಸಂಗತಿಯನ್ನು ಕನ್ನಡ ಸಾಹಿತ್ಯ ಪರಿಷತ್ತು ಕಳೆದ 1 ವರ್ಷದಿಂದ ನಿರಂತರ ಕೇಂದ್ರ ಸರಕಾರದ ಸಿಬ್ಬಂದಿ ನೇಮಕಾತಿ ಆಯೋಗ (ಎಸ್ಎಸ್‌ಸಿ) ಅಧಿಕಾರಿಗಳಿಗೆ ಮನದಟ್ಟು ಮಾಡುತ್ತಲೇ ಬಂದಿತ್ತು. ಇದರ ಜೊತೆಗೆ ಕಳೆದ ವರ್ಷ ಎಸ್ಎಸ್ಸಿಗೆ ಪರಿಷತ್ತು ಕಾನೂನು ನೋಟಿಸ್ ನೀಡುವ ಮೂಲಕ ಎಚ್ಚರಿಕೆ ನೀಡುವುದರ ಜೊತೆಗೆ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡುವುದಾಗಿಯು ಹೇಳಿತ್ತು. ಕೇಂದ್ರ ಸಚಿವರಿಗೂ ಪತ್ರ ಬರೆಯುವ ಮೂಲಕ ವಸ್ತುಸ್ಥಿತಿಯನ್ನು ಅವರ ಗಮನಕ್ಕೆ ತರಲಾಗಿತ್ತು. ಪರಿಷತ್ತು ನೀಡಿದ ಕಾನೂನು ನೋಟಿಸ್ ಗೆ ಸೂಕ್ತವಾಗಿ ಸ್ಪಂದಿಸಿದ ಸಿಬ್ಬಂದಿ ನೇಮಕಾತಿ ಆಯೋಗವು ಕನ್ನಡಕ್ಕೆ ಯಾವುದೇ ಅನ್ಯಾಯವಾಗದಂತೆ ನೋಡಿಕೊಳ್ಳುತ್ತೇವೆ ಎನ್ನುವ ಭರವಸೆಯನ್ನು ನೀಡಿದ್ದರು. ಅದರಂತೆ ಈಗ ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗಿದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಮಾರ್ಚ್‌ 30ರಂದು ಪ್ರಥಮ ಪಿಯುಸಿ ಫಲಿತಾಂಶ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement