ಸಿಂದಗಿ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿ ಶಿವಾನಂದ ಪಾಟೀಲ ಹೃದಯಾಘಾತದಿಂದ ನಿಧನ

ವಿಜಯಪುರ : ಸಿಂದಗಿ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿದ್ದ ಶಿವಾನಂದ ಪಾಟೀಲ ಶುಕ್ರವಾರ ತಡರಾತ್ರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಈ ಕುರಿತು ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ಶನಿವಾರ ಟ್ವೀಟ್‌ ಮಾಡಿದ್ದಾರೆ. ಹೃದಯಾಘಾತಕ್ಕೆ ಒಳಗಾದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದ್ದು, ಶುಕ್ರವಾರ ರಾತ್ರಿ ಅವರು ಮೃತಪಟ್ಟಿದ್ದಾರೆ. ಶಿವಾನಂದ ಪಾಟೀಲ ಅವರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
54 ವರ್ಷದ ಶಿವಾನಂದ ಪಾಟೀಲ ಅವರನ್ನು ಮುಂದಿನ ವಿಧಾನಸಭಾ ಚುನಾವಣೆಗೆ ಸಿಂದಗಿ ಕ್ಷೇತ್ರದಿಂದ ಜೆಡಿಎಸ್‌ ಪಕ್ಷದ ಅಭ್ಯರ್ಥಿಯಾಗಿ ಇತ್ತೀಚೆಗೆ ಘೋಷಿಸಲಾಗಿತ್ತು. ಶುಕ್ರವಾರ ನಾಗಠಾಣ ಮತಕ್ಷೇತ್ರದಲ್ಲಿ ನಡೆದ ಪಕ್ಷದ ಪಂಚರತ್ನ ಕಾರ್ಯಕ್ರಮದಲ್ಲಿ ಹೆಚ್‍ಡಿಕೆಯೊಂದಿಗೆ ಭಾಗಿಯಾಗಿದ್ದ ಶಿವಾನಂದ ಪಾಟೀಲ ಅವರು ಸಂಜೆ ಸಿಂದಗಿಗೆ ತೆರಳಿದ್ದರು. ರಾತ್ರಿ 9 ರ ವೇಳೆ ತೀವ್ರ ಅಸ್ವಸ್ಥಗೊಂಡ ಅವರನ್ನು ಸಿಂದಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ರಾತ್ರಿ ಅವರು ನಿಧನರಾದರು.

ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಸೋಮಜಾಳ ಗ್ರಾಮದ ಮೂಲದವರಾಗಿರುವ ಇವರು16 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದ ಶಿವಾನಂದ ಪಾಟೀಲರು ಇತ್ತೀಚಿನ ವರ್ಷಗಳಲ್ಲಿ ರಾಜಕೀಯದಲ್ಲಿ ಗುರುತಿಸಿಕೊಂಡಿದ್ದರು.
ಶಿವಾನಂದ ಪಾಟೀಲ ಅವರ ಹಠಾತ್ ನಿಧನಕ್ಕೆ ಎಚ್ ಡಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ. “ಸಿಂದಗಿ ವಿಧಾನಸಭಾ ಕ್ಷೇತ್ರದ ಪಕ್ಷದ ಜೆಡಿಎಸ್‌ ಅಭ್ಯರ್ಥಿ ಶಿವಾನಂದ ಪಾಟೀಲ ಅವರ ಅಕಾಲಿಕ ಮರಣವು ನನಗೆ ತೀವ್ರ ಆಘಾತವನ್ನುಂಟು ಮಾಡಿದೆ. ಜನವರಿ 18 ರಂದು ಪೂರ್ತಿ ದಿನ ಸಿಂದಗಿ ಕ್ಷೇತ್ರದಲ್ಲಿ ಪಂಚರತ್ನ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಬಳಿಕ ದೇವರ ಹಿಪ್ಪರಗಿ ಕ್ಷೇತ್ರಕ್ಕೆ ಬೀಳ್ಕೊಟ್ಟಿದ್ದರು. ಅವರ ನಿಧನದಿಂದ ನಾನು ವೈಯಕ್ತಿಕವಾಗಿ ತೀವ್ರವಾಗಿ ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಮತ್ತು ಕುಟುಂಬಕ್ಕೆ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.

ಸೇನೆಯಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿ ನಿವೃತ್ತರಾದ ಪಾಟೀಲ ಅವರಿಗೆ ಸಮಾಜಸೇವೆಯ ಅದಮ್ಯ ಹಂಬಲವಿತ್ತು. ಅತ್ಯುತ್ತಮ ಸಂಘಟನಾ ಕೌಶಲ್ಯ ಮತ್ತು ಕ್ರಿಯಾಶೀಲತೆ ಹೊಂದಿದ್ದ ಅವರು ಪರಿಚಯವಾದ ಕೆಲವೇ ದಿನಗಳಲ್ಲಿ ನನಗೆ ತುಂಬಾ ಆತ್ಮೀಯರಾಗಿದ್ದರು ಎಂದು ಕುಮಾರಸ್ವಾಮಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕೊನೆಗೂ 44 ನಿಗಮ/ಮಂಡಳಿಗಳಿಗೆ ಅಧ್ಯಕ್ಷರ ನೇಮಕ : ಯಾರಿಗೆ ಯಾವ ನಿಗಮ ಮಂಡಳಿ; ಪಟ್ಟಿ ಇಲ್ಲಿದೆ..

 

3 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement