ನೆಟೆ ರೋಗದಿಂದ ತೊಗರಿ ಬೆಳೆಗೆ ಹಾನಿ: ರೈತರಿಗೆ ಪರಿಹಾರ ಘೋಷಿಸಿದ ಸರ್ಕಾರ

ಬೆಂಗಳೂರು: ಕಲಬುರಗಿ, ಬೀದರ್ ಹಾಗೂ ಯಾದಗಿರಿ ಜಿಲ್ಲೆಯಾದ್ಯಂತ ತೊಗರಿ ಬೆಳೆಗೆ ನೆಟೆರೋಗದಿಂದ ವ್ಯಾಪಕ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತೊಗರಿ ಬೆಳೆ ಹಾನಿಯನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ಗರಿಷ್ಠ 2 ಹೆಕ್ಟೇರ್​ಗೆ ಸೀಮಿತಗೊಳಿಸಿ 10,000 ರೂಪಾಯಿ ಪರಿಹಾರ ಘೋಷಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವಿಟ್ಟರ್ ಮೂಲಕ ಮಾಹಿತಿ ನೀಡಿದ್ದಾರೆ.
ಮಂಗಳವಾರ (ಜನವರಿ 24) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ 2 ಹೆಕ್ಟೇರ್​ಗೆ ಸೀಮಿತಗೊಳಿಸಿ 10,000 ರೂಪಾಯಿ ಪರಿಹಾರ ನೀಡಲು ತೀರ್ಮಾನಿಸಲಾಯಿತು. ನೆಟೆ ರೋಗ ನಷ್ಟಕ್ಕೆ ಒಳಗಾಗಿರುವ ರೈತರಿಗೆ ಬೆಳೆ ಪರಿಹಾರ ಮೊತ್ತವು 223 ಕೋಟಿ ರೂಪಾಯಿಗಳಷ್ಟು ಆಗಬಹುದು ಎಂದು ಅಂದಾಜಿಸಲಾಗಿದೆ.

ಕಲಬುರಗಿ, ಯಾದಗಿರಿ ಹಾಗೂ ಬೀದರಿನಲ್ಲಿ ಬೆಳೆದಿದ್ದ ತೊಗರಿ ಬೆಳೆಗೆ ನೆಟೆ ರೋಗ ಬಾಧೆ ಕಾಣಿಸಿಕೊಂಡು ಬೆಳೆ ಒಣಗಿ ಹೋಗಿತ್ತು. ಇದರಿಂದ ರೈತರು ಕಂಗಾಲಾಗಿದ್ದರು. ಹಾಗೂ ಸೂಕ್ತ ಪರಿಹಾರ ನೀಡುವಂತೆ ಈ ಜಿಲ್ಲೆಗಳಲ್ಲಿ ರೈತರು ಪ್ರತಿಭಟನೆಗಳನ್ನು ಮಾಡಿದ್ದರು. ಅಲ್ಲದೇ ವಿಪಕ್ಷಗಳು ಸಹ ವಿಶೇಷ ಪರಿಹಾರ ನೀಡುವಂತೆ ಒತ್ತಾಯಿಸಿದ್ದವು.. ಈಗ ಸರ್ಕಾರ ಪರಿಹಾರ ಘೋಷಿಸಿದೆ.
ಬೀದರ್, ಕಲಬುರಗಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಹಾಗೂ ತದನಂತರ ನವೆಂಬರ್ ತಿಂಗಳಿನಲ್ಲಿ ತಲೆದೋರಿದ ಶುಷ್ಕ ವಾತಾವರಣದಿಂದ ತೊಗರಿ ಬೆಳೆಯಲ್ಲಿ ಸಂಕೀರ್ಣ ನೆಟೆ ರೋಗ ಉಲ್ಬಣಿಸಿತ್ತು. ಕಲ್ಯಾಣ ಕರ್ನಾಟಕ ಭಾಗದ ಮೂರು ಜಿಲ್ಲೆಗಳಲ್ಲಿ ಬೆಳೆಹಾನಿಯಾಗಿ ರೈತರು ಸಂಕಷ್ಟಕ್ಕೆ ತುತ್ತಾಗಿದ್ದರು.

ಕಲಬುರಗಿ ಜಿಲ್ಲೆಯಲ್ಲಿ ಸುಮಾರು 1.98 ಲಕ್ಷ ಹೆಕ್ಟೇರ್, ಬೀದರ್ ಜಿಲೆಯಲ್ಲಿ ಸುಮಾರು 0.145 ಲಕ್ಷ ಹೆಕ್ಟೇರ್ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಸುಮಾರು 0.1028 ಲಕ್ಷ ಹೆಕ್ಟೇರ್ ಒಟ್ಟಾರೆಯಾಗಿ 2.2278 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿನ ತೊಗರಿ ಬೆಳೆಗೆ ನೆಟೆ ರೋಗ ಕಾಣಿಸಿಕೊಂಡಿತ್ತು.
ಪ್ರತಿ ಹೆಕ್ಟೇರ್ ಗೆ 10,000 ರೂ. ಗಳಂತೆ NDRF – SDRF ಮಾರ್ಗಸೂಚಿಯಡಿ ಗರಿಷ್ಠ 2 ಹೆಕ್ಟೇರ್‌ಗೆ ಪರಿಹಾರ ಹಣ ಸೀಮಿತ ಮಾಡಿ ಘೋಷಿಸಲಾಗಿದೆ.

ಪ್ರಮುಖ ಸುದ್ದಿ :-   ಸುರಪುರದ ಕಾಂಗ್ರೆಸ್ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನ

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement