ಧಾರವಾಡ ಖಾಸಗಿ ಶಾಲೆಗಳ ೩೫ ಶಿಕ್ಷಕಿಯರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ

ಧಾರವಾಡ:  ಧಾರವಾಡ ಅನುದಾನರಹಿತ ಖಾಸಗಿ ಶಾಲೆಗಳ ಅಭಿವೃದ್ಧಿ ಸಂಘ(ದಕ್ಷ)ದಿಂದ ಸಾವಿತ್ರಿಬಾಯಿ ಪುಲೆ ಮತ್ತು ಫಾತಿಮಾ ಶೇಖ ಸ್ಮರಣೆಯಲ್ಲಿ ಧಾರವಾಡ ಖಾಸಗಿ ಶಾಲೆಗಳ ೩೫ ಶಿಕ್ಷಕಿಯರಿಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಪ್ರದಾನ ಸಮಾರಂಭ ಜೆ.ಎಸ್.ಎಸ್. ಕಾಲೇಜಿನ ಉತ್ಸವ ಸಭಾಭವನದಲ್ಲಿ   ನಡೆಯಿತು.
ಪ್ರಶಸ್ತಿಗಳನ್ನು ಪ್ರದಾನ ಮಾಡಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್. ವಿ ಸಂಕನೂರ ಅವರು, ಅತ್ಯುತ್ತಮ ಶಿಕ್ಷಕನನ್ನು ಸಮಾಜ ಪೂಜಿಸುತ್ತದೆ. ಅಂತೆಯೇ ನೂರು ವರ್ಷ ಕಳೆದು ಹೋದರೂ ಇಂದು ಸಾವಿತ್ರಿಬಾಯಿ ಪುಲೆ ಮತ್ತು ಫಾತಿಮಾ ಶೇಖ್‌ ಅವರನ್ನು ಸ್ಮರಿಸಿಕೊಳ್ಳುತ್ತಿದ್ದೇವೆ. ನಮ್ಮ ನಮ್ಮ ಕರ್ತವ್ಯವನ್ನು ಮಾಡದಿದ್ದರೆ ಏನು ಪರಿಣಾಮ ಆಗುತ್ತದೆ ಎಂಬುದನ್ನು ಪ್ರತಿಯೊಬ್ಬ ಶಿಕ್ಷಕಿಯರಿಗೆ ಅರಿವು ಇರಬೇಕು.ಶಿಕ್ಷಕರಾದವರು ತಮ್ಮ ಕೆಲಸವನ್ನುಅತ್ಯಂತ ಪ್ರಾಮಾಣಿಕ ಮತ್ತು ಶ್ರದ್ಧೆಯಿಂದ ಮಾಡಬೇಕು ಎಂದರು.
ಶಸಾವಿತ್ರಿಬಾಯಿ ಪುಲೆಯಂತಹವರು ಆಗಿನ ಕಾಲದಲ್ಲಿ ಮಹಿಳೆಯರಿಗಾಗಿ ಹತ್ತಾರು ಶಾಲೆಗಳನ್ನು ತೆರೆದು ಮಹಿಳೆಯರಿಗೆ ಶಿಕ್ಷಣ ದೊರೆಯುವಂತೆ ಮಾಡಿದರು. ಅಂಥ ತಾಯಿಯನ್ನು ಸ್ಮರಿಸಿಕೊಳ್ಳುವುದೇ ನಮ್ಮೊಳಗೆ ಚೈತನ್ಯ ತಂದುಕೊಳ್ಳುವಂತಹದ್ದು. ಶಿಕ್ಷಕಿಯರ ಸೇವೆಯನ್ನು ಗುರುತಿಸಿ ಅವರಿಗೆ ಪ್ರಶಸ್ತಿ ನೀಡಿ ಗೌರವಿಸುವ ದಕ್ಷ ಸಂಸ್ಥೆಯ ಕಾರ್ಯ ಮಾದರಿಯ ನಡೆ ಆಗಿದೆ ಎಂದರು.
ಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಖಾಸಗಿ ಶಾಲೆಗಳ ಕೊಡುಗೆಯೂ ದೊಡ್ಡದಿದೆ. ಅವುಗಳು ಸಮಸ್ಯೆಗಳಿಂದ ಹೊರಬರಬೇಕಾಗಿದೆ. ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿರುವೆ ಎಂದರು.
ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಸಮಾರಂಭ ಉದ್ಘಾಟಿಸಿ ಮಾತನಾಡಿ, ಹತ್ತೊಂಬತ್ತನೇ ಶತಮಾನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿರುವ ಸಾವಿತ್ರಿಬಾಯಿ ಪುಲೆ ಹೆಸರಿನಲ್ಲಿ ಇಂದು ಶಿಕ್ಷಣ ಕ್ಷೇತ್ರದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಶಿಕ್ಷಕಿಯರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಅಭಿನಂದನೀಯ ಕಾರ್ಯವಾಗಿದೆ ಎಂದು ಹೇಳಿದರು.
ಸಾವಿತ್ರಿ ಬಾಯಿ ಪುಲೆ ಮಹಿಳೆಯರಲ್ಲಿ ಶಿಕ್ಷಣ ಅರಿವು ಮೂಡಿಸಿದ್ದರ ಜೊತೆಗೆ ಮೂಢ ನಂಬಿಕೆಗಳು ಮತ್ತು ಅಂಧ ಶ್ರದ್ಧೆಗಳಿಂದ ಮಹಿಳೆಯರು ಹೊರಬರುವಂತೆ ಮಾಡಿದ್ದು ಒಂದು ಇತಿಹಾಸ. ದಕ್ಷ ಸಂಸ್ಥೆ ಅಂಥ ಅಕ್ಷರ ತಾಯಿಯ ಹೆಸರಿನಲ್ಲಿ ಪ್ರಶಸ್ತಿ ನೀಡಲು ಮುಂದಾಗಿದ್ದು ಅಭಿನಂದನೀಯ ಕಾರ್ಯ ಎಂದರು.

ಸಾನಿಧ್ಯ ವಹಿಸಿ ಮಾತನಾಡಿದ ಶ್ರೀ ಬೈಲೂರ ಮಠದ ನಿಜಗುಣಾನಂದ ಸ್ವಾಮಿ ಅವರು, ಜೀವನದಲ್ಲಿ ತಾಯಿ, ಶಿಕ್ಷಕಿ ಹಾಗೂ ಧರ್ಮ ಗುರು ಮೂವರನ್ನು ಮಾರ್ಗದರ್ಶಕರಾಗಿ ಪ್ರತಿಯೊಬ್ಬರು ಸ್ವೀಕಾರ ಮಾಡಿಕೊಳ್ಳಬೇಕು. ಆವಾಗಲೇ ಜೀವನ ಪರಿಪೂರ್ಣತೆ ಹೊಂದಿದಂತೆ. ಈ ಜಗತ್ತಿನಲ್ಲಿ ಬಹಳ ಜನ ದೊಡ್ಡವರಾಗಿ ಹೋಗಿದ್ದಾರೆ. ಅವರೆಲ್ಲ ಈ ಮೂವರನ್ನು ತಮ್ಮ ಜೀವನದಲ್ಲಿ ಸ್ವೀಕರಿಸಿದ್ದರಿಂದ ದೊಡ್ಡವರಾಗಿದ್ದಾರೆ. ಬದುಕಿಗೆ ಶಿಕ್ಷಣ ಮುಖ್ಯವಾಗುವುದಿಲ್ಲ. ದುಡಿಮೆಯೇ ಮುಖ್ಯವಾಗುತ್ತದೆ. ಆದರೆ ಬದುಕಿನಲ್ಲಿ ಜೀವನವನ್ನು ಚೆನ್ನಾಗಿ ಅನುಭವಿಸಬೇಕೆಂದರೆ ಶಿಕ್ಷಣ ಬಹಳ ಮುಖ್ಯವಾಗುತ್ತದೆ ಎಂದರು.
ಮಾನವೀಯ ಮೌಲ್ಯಗಳ ಮೇಲೆ, ಮನುಷ್ಯತ್ವದ ಮೇಲೆ, ಸಮಾನತೆಯ ಮೇಲೆ, ಪ್ರೀತಿ ವಿಶ್ವಾಸದ ಮೇಲೆ, ಧರ್ಮ ಧರ್ಮಗಳ ನಡುವೆ ತಿಕ್ಕಾಟವಿಲ್ಲದ ಶಿಕ್ಷಣವನ್ನು ಶಿಕ್ಷಕರಾದವರು ನೀಡಬೇಕಾಗಿದೆ. ಭಾರತವು ಸಂಸ್ಕೃತಿ, ಸಂಸ್ಕಾರದ ತಾಯಿ ಬೇರಾಗಿದ್ದಾಳೆ. ಅದಕ್ಕಾಗಿ ಮಾತೃದೇವೋಭವ ಅನ್ನುತ್ತೇವೆ. ಐವತ್ತು ಅರವತ್ತು ವರ್ಷಗಳ ಹಿಂದೆ ಹೋದರೆ ಯಾವುದೇ ಶಿಕ್ಷಣ ಪಡೆಯದ ತಂದೆ ತಾಯಿಗಳಿದ್ದಾರೆ. ಅವರೆಲ್ಲ ಮಕ್ಕಳಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡಲು ಕಲಿಸಿದರು. ಏನೂ ಓದದೇ ಇರುವ ತಾಯಿ ಕಲಿಸಿಕೊಡುವ ಈ ಶಿಕ್ಷಣ ನಿಜವಾದ ಶಿಕ್ಷಣ. ಅವಳೇ ಮೊದಲ ಶಿಕ್ಷಕಿ ಎಂದರು.
ಡಿ.ಡಿ.ಪಿ.ಐ ಆಗಿ ಬಡ್ತಿ ಪಡೆದ ಧಾರವಾಡ ಶಹರದ ಗಿರೀಶ ಪದಕಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಧಾರವಾಡದ ಶೈಕ್ಷಣಿಕ ಬೆಳವಣಿಗೆಯಲ್ಲಿ ಖಾಸಗಿ ಶಾಲೆಯದೂ ಆ ಶಾಲೆಗಳ ಮಹಿಳಾ ಶಿಕ್ಷಕಿಯರ ಶ್ರಮವನ್ನು ಯಾವ ಕಾಲಕ್ಕೂ ಇಲಾಖೆ, ಮತ್ತು ಸಮಾಜ ಮರೆಯಲಾಗದಂತಹದ್ದು ಎಂದರು.
ವೈಶುದೀಪ ಸಂಸ್ಥೆಯ ಮುಖ್ಯಸ್ಥೆ ಶಿವಲೀಲಾ ವಿನಯಕುಲಕರ್ಣಿ ಮಾತನಾಡಿ, ಶಿಕ್ಷಣ ಕ್ಷೇತ್ರಕ್ಕೆ ಮಹಿಳೆಯರ ಕೊಡುಗೆ ದೊಡ್ಡದು. ಅದನ್ನು ಗುರುತಿಸಿ ಈ ರೀತಿ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಮೆಚ್ಚುವ ಕಾರ್ಯ. ಮಹಿಳೆಯರ ಶಕ್ತಿ ಅಪರಮಿತ. ಅವರು ಮನಸ್ಸು ಮಾಡಿದರೆ ಏನೆಲ್ಲಾ ಸಾಧಿಸಬಲ್ಲರು. ಹಾಗೆ ಸಾಧಿಸಲು ಪುರುಷ ಪ್ರಧಾನ ವ್ಯವಸ್ಥೆ ಅವಕಾಶ ಕಲ್ಪಿಸಿಕೊಡಬೇಕು ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ದಕ್ಷ ಸಂಸ್ಥೆಯ ಅಧ್ಯಕ್ಷ ಶಂಕರ ಹಲಗತ್ತಿ ಮಾತನಾಡಿ, ಶಿಕ್ಷಣ ಇಲಾಖೆ ಖಾಸಗಿ ಶಾಲೆಗಳ ಶಿಕ್ಷಕರ ಪ್ರತಿಭೆಯನ್ನು ಗುರುತಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು. ಶೈಕ್ಷಣಿಕ ಅಭಿವೃದ್ಧಿಗೆ ಖಾಸಗಿ ಶಾಲೆಗಳ ಕೊಡುಗೆ ಹೆಚ್ಚಿದೆ ಎಂಬುದನ್ನು ಮರೆಯಬಾರದು. ಖಾಸಗಿ ಶಾಲೆಗಳ ಶಿಕ್ಷಕರಿಗೂ ಕಾಲಕಾಲಕ್ಕೆ ಶೈಕ್ಷಣಿಕ ಬದಲಾವಣೆಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಇಲಾಖೆಯಿಂದ ತರಬೇತಿ ನೀಡುವಂತಗಬೇಕು. ಮುಂದಿನ ದಿನಗಳಲ್ಲಿ ದಕ್ಷ ಸಂಸ್ಥೆಯಿಂದ ಖಾಸಗಿ ಶಾಲೆಗಳ ಶಿಕ್ಷಕರಿಗೆ ಕ್ರೀಡಾಕೂಟ ಏರ್ಪಡಿಸಲಾಗುವುದು, ಆ ಶಾಲೆಗಳ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಮಹಾವೀರ ಉಪಾಧ್ಯಾಯ ಪ್ರಾಸ್ತಾವಿಕವಾಗಿ ಮಾತನಾಡಿದರು, ಎಸ್.ವಿ.ಸಾಲಿಮಠ ಸ್ವಾಗತಿಸಿದರು. ಸಂಜಯ ಪಾಟೀಲ ವಂದಿಸಿದರು, ಯಮನಪ್ಪ ಕಬ್ಬೇರ ನಿರೂಪಿಸಿದರು. ವೇದಿಕೆಯ ಮೇಲೆ ಧಾರವಾಡ ತಾಲೂಕ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ ಉಪಸ್ಥಿತರಿದ್ದರು. ಬಸವರಡ್ಡಿ ಶಾಲೆಯ ಮಕ್ಕಳು ಸ್ವಾಗತಗೀತೆ ಹಾಡಿದರು. ಬಾಲಬಳಗದ ಶಿಕ್ಷಕಿಯರು ಪ್ರಾರ್ಥನೆ ಮಾಡಿದರು. ಧಾರವಾಡದ ನಲವತ್ತು ಖಾಸಗಿ ಅನುದಾನರಹಿತ ಶಾಲೆಗಳ ಶಿಕ್ಷಕಿಯರು, ಶಾಲಾ ಮುಖ್ಯಸ್ಥರು ಭಾಗವಹಿಸಿದ್ದರು. ದಕ್ಷ ಸಂಸ್ಥೆಯ ಸದಸ್ಯರಾದ ಭಾಸ್ಕರ, ಸುದೇಶ ನಂದಿಹಾಳ, ಜಗದೀಶ ಕೋಣಿ, ಮಂಜುನಾಥ ಮಠಪತಿ, ರಮೇಶ ಮಡಿವಾಳರ, ಎಂ.ಎಂ. ಮುಲ್ಲಾ, ರಮೇಶ ಹರ‍್ಲೇಕರ, ಸಂತೋಷ ಪಾಲ್ಗೊಂಡಿದ್ದರು.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement