ಟ್ರಾಫಿಕ್​ ರೂಲ್ಸ್​ ಉಲ್ಲಂಘನೆ ದಂಡಕ್ಕೆ ಶೇಕಡಾ 50 ರಿಯಾಯಿತಿ; ಹಣ ಕಟ್ಟಲು ಮುಗಿಬಿದ್ದ ಜನ

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆಯ ದಂಡ ಪಾವತಿಗೆ ಶೇ.50ರಷ್ಟು ರಿಯಾಯಿತಿ ಘೋಷಿಸಿದ ಬೆನ್ನಲ್ಲೇ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ವಾಹನ ಸವಾರರು ಮುಗಿಬಿದ್ದಿದ್ದಾರೆ.
ನಗರ ಸಂಚಾರ ಪೊಲೀಸ್ ವತಿಯಿಂದ ಹೊರಡಿಸಲಾದ ಪ್ರಕಟಣೆಯಲ್ಲಿ ಬಾಕಿ ಇರುವ ದಂಡ ಪಾವತಿಯ ವಿಧಾನಗಳನ್ನು ವಿವರಿಸಲಾಗಿದೆ.
ವಾಹನ ಮಾಲೀಕರು ಮತ್ತು ಚಾಲಕರು ಕರ್ನಾಟಕ ಒನ್ ವೆಬ್‍ಸೈಟ್‍ನಲ್ಲಿ ವಿವರಗಳನ್ನು ಪಡೆದು ಅಥವಾ ಪೇಟಿಎಂ ಆ್ಯಪ್ ಮೂಲಕವೂ ದಂಡ ಪಾವತಿಸಬಹುದಾಗಿದೆ. ಅಲ್ಲದೆ, ಹತ್ತಿರದ ಸಂಚಾರ ಪೊಲೀಸ್ ಠಾಣೆಗೆ ತೆರಳಿ ವಾಹನ ನೋಂದಣಿ ಸಂಖ್ಯೆಗಳನ್ನು ತಿಳಿಸಿ ದಂಡ ಪಾವತಿಸಬಹುದಾಗಿದೆ.
ಶೇ.50ರಷ್ಟು ರಿಯಾಯ್ತಿ ಸೌಲಭ್ಯ ಫೆಬ್ರವರಿ 11ರ ವರೆಗೆ ಮಾತ್ರ ಇರಲಿದೆ. ಅನಂತರ ಉಳಿಯುವ ಪ್ರಕರಣಗಳಲ್ಲಿ ಪೂರ್ಣ ಪ್ರಮಾಣದ ದಂಡ ಪಾವತಿಸಬೇಕಾಗುತ್ತದೆ. ಹೀಗಾಗಿ ಬೆಂಗಳೂರಿನ ಬಹುತೇಕ ಸಂಚಾರಿ ಪೊಲೀಸ್ ಠಾಣೆಗಳಲ್ಲಿ ಜನ ಸಾಲಿನಲ್ಲಿ ನಿಂತು ದಂಡ ಪಾವತಿಸುವ ಮೂಲಕ ಬಾಕಿ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳುತ್ತಿದ್ದಾರೆ.
ಕೆಲವು ವಾಹನಗಳ ಮೇಲೆ 10ಸಾವಿರಕ್ಕೂ ಮೇಲ್ಪಟ್ಟ ದಂಡವಿದ್ದು, ಅಂತಹವರಿಗೆ ರಿಯಾಯ್ತಿ ಸೌಲಭ್ಯ ಅನುಕೂಲ ಒದಗಿಸಿಕೊಟ್ಟಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement