ಸಾಲಗಾರರ ಕಾಟಕ್ಕೆ ಒಂದೇ ಕುಟುಂಬದ 7 ಮಂದಿ ಆತ್ಮಹತ್ಯೆಗೆ ಯತ್ನ: ಓರ್ವ ಮಹಿಳೆ ಸಾವು

ರಾಮನಗರ : ಸಾಲಗಾರರ ಕಾಟಕ್ಕೆ ಹೆದರಿ ಒಂದೇ ಕುಟುಂಬದ ಏಳು ಮಂದಿ ಇಲಿಪಾಷಾಣ ಸೇವಿಸಿ ಅತ್ಮಹತ್ಯೆಗೆ ಯತ್ನಿಸಿದ ಘಟನೆ ತಾಲೂಕಿನ ದೊಡ್ಡಮಣ್ಣುಗುಡ್ಡೆದೊಡ್ಡಿಯಲ್ಲಿ ನಡೆದಿದೆ. ಇವರಲ್ಲಿ ಮಹಿಳೆಯೊಬ್ಬಳು ಮೃತಪಟ್ಟಿದ್ದು, ಆರು ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.
ಮೃತಪಟ್ಟ ಮಹಿಳೆಯನ್ನು ಮಂಗಳಮ್ಮ (28) ಎಂದು ಗುರುತಿಸಲಾಗಿದೆ. ಉಳಿದ ಆರು ಮಂದಿಯನ್ನು ಮಂಡ್ಯದ ವಿಮ್ಸ್‌ಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ತಾಲೂಕಿನ ದೊಡ್ಡಮಣ್ಣುಗುಡ್ಡೆದೊಡ್ಡಿಯಲ್ಲಿ ಘಟನೆ ನಡೆದಿದ್ದು ರಾಜು, ಮಕ್ಕಳಾದ ಆಕಾಶ, ಕೃಷ್ಣ, ಮಂಗಳಮ್ಮನ ಸಹೋದರಿ ಸವಿತಾ ಅವರ ಪುತ್ರಿ ದರ್ಶಿನಿ ಹಾಗೂ ಅತ್ತೆ ಸೋಂಪರದಮ್ಮ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇವರಲ್ಲಿ ಮಂಗಳಮ್ಮ ಮೃತಪಟ್ಟಿದ್ದಾರೆ. ಇವರು ಕಳೆದ ಒಂದು ವರ್ಷದಿಂದ ಇಲ್ಲಿ ವಾಸಿಸುತ್ತಿದ್ದರು.
ರಾಜು ಕುಟುಂಬಸ್ಥರು ಬೆಂಗಳೂರಿನಲ್ಲಿ ತಾವರೆಕೆರೆ ಹೋಬಳಿ ಕುಂಬಳಗೂಡು ಸುಬ್ರಪ್ಪನ ಪಾಳ್ಯದವರಾಗಿದ್ದು, ಸಾಲಗಾರರ ಕಾಟಕ್ಕೆ ಹೆದರಿ ಮಂಗಳಮ್ಮ ಅವರ ತವರು ಮನೆಗೆ ಕುಟುಂಬ ಸಮೇತ ಬಂದು ವಾಸಿಸುತ್ತಿದ್ದರು. ಆದರೆ ಇಲ್ಲಿಯೂ ಸಾಲಗಾರರ ಕಿರುಕುಳ ನಿರಂತರವಾಗಿತ್ತು ಎನ್ನಲಾಗಿದ್ದು, ಮಾಡಿದ ಸಾಲ ತೀರಿಸಲು ಸಾಧ್ಯವಾಗದು ಎಂಬ ನಿರ್ಧಾರಕ್ಕೆ ಬಂದಿದ್ದರು. ಹೀಗಾಗಿ ಸಾಯುವ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ಗುರುವಾರ ಮಧ್ಯಾಹ್ನ ಮೂರು ಗಂಟೆ ಸುಮಾರಿಗೆ ಮನೆ ಮಂದಿ ಮನೆಗೆ ಬೀಗ ಜಡಿದು ಊರಿನ ಹೊರಗೆ ಹೋದವರು 7:30 ಗಂಟೆಯಾದರೂ ಬಾರದ ಹಿನ್ನೆಲೆಯಲ್ಲಿ ಕೆಲವರು ಹುಡುಕಾಟ ನಡೆಸಿದಾಗ ವಿಷಯ ಗೊತ್ತಾಗಿದೆ. ಮಂಗಳಮ್ಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ, ನಂತರ ಉಳಿದವರನ್ನು ರಾಮನಗರ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದಾರೆ. ಹಾಗೂ ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯದ ಮಿಮ್ಸ್ ಗೆ ಕಳುಹಿಸಿಕೊಡಲಾಗಿದೆ.

ಪ್ರಮುಖ ಸುದ್ದಿ :-   ಚಾಮರಾಜನಗರ : ಇಂಡಿಗನತ್ತ ಮತಗಟ್ಟೆ ಮೇಲೆ ಕಲ್ಲು ತೂರಾಟ, ಗಲಾಟೆ, ಮತಯಂತ್ರಕ್ಕೆ ಹಾನಿ

 

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement