ಮುಂಬೈ: ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ ಉಪನಗರ ಬಾಂದ್ರಾದಲ್ಲಿರುವ ತಮ್ಮ ಮನೆಯಲ್ಲಿ ಕುಡಿದ ಮತ್ತಿನಲ್ಲಿ ಪತ್ನಿಯ ಮೇಲೆ ದೌರ್ಜನ್ಯ ಎಸಗಿದ ಆರೋಪದ ಮೇಲೆ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಶುಕ್ರವಾರ ನಡೆದಿದೆ ಎನ್ನಲಾದ ಈ ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಅವರು ಹೇಳಿದ್ದಾರೆ. ಕಾಂಬ್ಳಿ ಅವರ ಪತ್ನಿ ಆಂಡ್ರಿಯಾ ಪೊಲೀಸ್ ದೂರಿನಲ್ಲಿ ಅಡುಗೆ ಪ್ಯಾನ್‌ನ ಹ್ಯಾಂಡಲ್ ಅನ್ನು ತನ್ನ ಮೇಲೆ ಎಸೆದಿದ್ದು, ತಮ್ಮ ತಲೆಗೆ ಗಾಯವಾಗಿದೆ ಎಂದು ತಿಳಿಸಿದ್ದಾರೆ ಎಂದು ಬಾಂದ್ರಾ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಶುಕ್ರವಾರ ಮಧ್ಯಾಹ್ನ 1 ರಿಂದ 1:30 ರ ನಡುವೆ ಘಟನೆ ನಡೆದಿದ್ದು, ಕಾಂಬ್ಳಿ ಮದ್ಯದ ಅಮಲಿನಲ್ಲಿ ತನ್ನ ಫ್ಲಾಟ್‌ಗೆ ಆಗಮಿಸಿ ಪತ್ನಿಯನ್ನು ನಿಂದಿಸಲು ಪ್ರಾರಂಭಿಸಿದ್ದಾರೆ. ಆಗ ಅಲ್ಲಿದ್ದ ಅವರ 12 ವರ್ಷದ ಮಗ ಜಗಳದಲ್ಲಿ ಮಧ್ಯಪ್ರವೇಶಿಸಿದ್ದಾನೆ, ಆದರೆ ಕಾಂಬ್ಳಿ ಸಿಟ್ಟಿನಲ್ಲಿ ಅಡುಗೆಮನೆಗೆ ಹೋಗಿ ಒಡೆದ ಬಾಣಲೆಯ ಹಿಡಿಕೆ ತಂದು ತನ್ನ ಹೆಂಡತಿಯ ಮೇಲೆ ಎಸೆದಿದ್ದರಿಂದ ಅವಳು ಗಾಯಗೊಂಡಿದ್ದಾಳೆ. ಬಳಿಕ ಕಾಂಬ್ಳಿ ಪತ್ನಿ ವೈದ್ಯಕೀಯ ಪರೀಕ್ಷೆಗಾಗಿ ಬಾಬಾ ಆಸ್ಪತ್ರೆಗೆ ತೆರಳಿದ್ದರು ಎಂದು ದೂರನ್ನು ಉಲ್ಲೇಖಿಸಿ ಅಧಿಕಾರಿಗಳು ತಿಳಿಸಿದ್ದಾರೆ.
ಆಕೆಯ ದೂರಿನ ಆಧಾರದ ಮೇಲೆ, ಬಾಂದ್ರಾ ಪೊಲೀಸರು ಶುಕ್ರವಾರ ಕಾಂಬ್ಳಿ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 324 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳಿಂದ ಗಾಯಗೊಳಿಸುವುದು) ಮತ್ತು 504 (ಶಾಂತಿ ಭಂಗವನ್ನು ಪ್ರಚೋದಿಸುವ ಉದ್ದೇಶದಿಂದ ಉದ್ದೇಶಪೂರ್ವಕ ಅವಮಾನ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ