ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ವರ್ಸಸ್‌ ಕಾಂಗ್ರೆಸ್: ಸಿಎಲ್‌ಪಿ ನಾಯಕನ ಸ್ಥಾನಕ್ಕೆ ಬಾಳಾಸಾಹೇಬ್ ಥೋರಟ್ ರಾಜೀನಾಮೆ…!

ಮುಂಬೈ: ಮಹಾರಾಷ್ಟ್ರ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕ ಬಾಳಾಸಾಹೇಬ್ ಥೋರಟ್ ಅವರು ಮಂಗಳವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಮಹಾರಾಷ್ಟ್ರ ಕಾಂಗ್ರೆಸ್ ಅಧ್ಯಕ್ಷ ನಾನಾ ಪಟೋಲೆ ಅವರೊಂದಿಗೆ ಭಿನ್ನಾಭಿಪ್ರಾಯದ ನಂತರ ಅವರೊಂದಿಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಪಕ್ಷದ ಕೇಂದ್ರ ನಾಯಕತ್ವಕ್ಕೆ ತಿಳಿಸಿರುವುದಾಗಿ ಥೋರಟ್ ಅವರ ಸಹಾಯಕರು ಮಾಧ್ಯಮಗಳಿಗೆ ತಿಳಿಸಿದ ಒಂದು ದಿನದ ನಂತರ ಅವರ ರಾಜೀನಾಮೆ ಬಂದಿದೆ.
ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಿಗೆ ಬರೆದ ಪತ್ರದಲ್ಲಿ ಬಾಳಾಸಾಹೇಬ್ ಥೋರಟ್ ಅವರು “ಅವಮಾನಕ್ಕೊಳಗಾಗಿದ್ದೇನೆ” ಎಂದು ಬರೆದಿದ್ದಾರೆ ಮತ್ತು ತಾನು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬಿಂಬಿಸಲು ತನ್ನ ವಿರುದ್ಧ “ಅಪಪ್ರಚಾರ” ಮಾಡಲಾಗಿದೆ. ಮಹಾರಾಷ್ಟ್ರದಲ್ಲಿ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತನ್ನನ್ನು ಸಂಪರ್ಕಿಸಿಲ್ಲ ಎಂದು ಥೋರಟ್ ಹೇಳಿದ್ದಾರೆ.
ಮಹಾರಾಷ್ಟ್ರ ವಿಧಾನ ಪರಿಷತ್ತಿನ (ಎಂಎಲ್‌ಸಿ) ಚುನಾವಣೆಯ ಸಂದರ್ಭದಲ್ಲಿ ರಾಜ್ಯ ಪಕ್ಷದ ನಾಯಕತ್ವದಲ್ಲಿನ ಘರ್ಷಣೆ ಬಹಿರಂಗವಾಯಿತು. ಥೋರಟ್ ಅವರ ಸೋದರ ಮಾವ ಸತ್ಯಜೀತ್ ತಾಂಬೆ ಅವರಿಗೆ ಪಕ್ಷದ ಟಿಕೆಟ್ ನಿರಾಕರಿಸಲಾಯಿತು ಮತ್ತು ರಾಜ್ಯ ಕಾಂಗ್ರೆಸ್ ನಾಯಕತ್ವವು ತನ್ನ ಮತ್ತು ತನ್ನ ಕುಟುಂಬದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಸತ್ಯಜೀತ್ ತಾಂಬೆ ಆರೋಪಿಸಿದ್ದಾರೆ.
ಸತ್ಯಜೀತ್ ತಾಂಬೆ ಅವರಿಗೆ ಪಕ್ಷವು ಟಿಕೆಟ್ ನಿರಾಕರಿಸಿದ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರು. ನಾಸಿಕ್ ಶಿಕ್ಷಕರ ಕ್ಷೇತ್ರದಲ್ಲಿ ಎಂವಿಎ ಅಭ್ಯರ್ಥಿ ಶುಭಾಂಗಿ ಪಾಟೀಲ್ ವಿರುದ್ಧ ಜಯಶಾಲಿಯಾದರು.
ಈ ವಿಷಯದ ಬಗ್ಗೆ ಬಾಳಾಸಾಹೇಬ್ ಥೋರಟ್ ಅವರ ಮೌನವು ತಾಂಬೆ ತಂದೆ-ಮಗ ಜೋಡಿಗೆ ಮೌನ ಬೆಂಬಲವಾಗಿ ಕಂಡುಬರುತ್ತದೆ ಎಂದು ಹೇಳಲಾಗಿದೆ. ಆದರೆ, ಆ ಸಮಯದಲ್ಲಿ ಭುಜದ ಗಾಯದಿಂದ ಥೋರಟ್ ಚೇತರಿಸಿಕೊಳ್ಳುತ್ತಿದ್ದರು. ನಂತರ, ಎಂಎಲ್‌ಸಿ ಚುನಾವಣೆಯಲ್ಲಿ ಬಂಡಾಯಕ್ಕಾಗಿ ಸುಧೀರ್ ತಾಂಬೆ ಮತ್ತು ಸತ್ಯಜಿತ್ ತಾಂಬೆ ಅವರನ್ನು ಕಾಂಗ್ರೆಸ್‌ನಿಂದ ಅಮಾನತುಗೊಳಿಸಲಾಯಿತು.
ನಾನಾ ಪಟೋಲೆ ಅವರು ಉದ್ದೇಶಪೂರ್ವಕವಾಗಿ ತಪ್ಪು ನಮೂನೆಯನ್ನು ಕಳುಹಿಸಿದ್ದಾರೆ ಎಂದು ಸತ್ಯಜಿತ್ ಆರೋಪಿಸಿದ್ದಾರೆ, ಇದರಿಂದಾಗಿ ತಾವು ಸ್ವತಂತ್ರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವುದಾಗಿ ಹೇಳಿದ್ದಾರೆ. ನಾನಾ ಪಟೋಲೆ ಅವರು ಥೋರಟ್ ಅವರನ್ನು ಗುರಿಯಾಗಿಸಿಕೊಂಡಿದ್ದಾರೆ. ಪಕ್ಷದಲ್ಲಿ ಕೆಲವರು ತಮಗೆ ಎಲ್ಲ ಸ್ವಾತಂತ್ರ್ಯವಿದೆ ಎಂಬಂತೆ ವರ್ತಿಸುತ್ತಿದ್ದಾರೆ ಮತ್ತು ಅದನ್ನು ಅನುಮತಿಸಲಾಗುವುದಿಲ್ಲ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement