ಕರ್ನಾಟಕದಲ್ಲಿ ₹3,579 ಕೋಟಿ ವೆಚ್ಚದ ಹೆದ್ದಾರಿ ಅಭಿವೃದ್ಧಿಗೆ ಕೇಂದ್ರ ಭೂ ಸಾರಿಗೆ ಸಚಿವಾಲಯ ಒಪ್ಪಿಗೆ

ನವದೆಹಲಿ: ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಬುಧವಾರ ಕರ್ನಾಟಕದಲ್ಲಿ 3,575 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಕೆಲವು ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ ಯೋಜನೆಗಳಿಗೆ ಮಂಜೂರು ನೀಡಿದ್ದಾರೆ.
ಈ ಸಂಬಂಧ ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರು ಬುಧವಾರ ಸರಣಿ ಟ್ವೀಟ್‌ ಮಾಡಿದ್ದು, ಮಹಾರಾಷ್ಟ್ರ-ಕರ್ನಾಟಕ ಗಡಿಯ ರಾಷ್ಟ್ರೀಯ ಹೆದ್ದಾರಿ ‘166 ಇ’ಯಲ್ಲಿ ಕನಮಡಿ- ಬಿಜ್ಜೋಡಿ- ತಿಕೋಟಾ ದ್ವಿಪಥ ರಸ್ತೆಯನ್ನು ₹196.05 ಕೋಟಿ ವೆಚ್ಚದಲ್ಲಿ ವಿಸ್ತರಿಸಲು ಒಪ್ಪಿಗೆ ನೀಡಲಾಗಿದೆ.
ಮಹಾರಾಷ್ಟ್ರ ಗಡಿಯ ರಾಷ್ಟ್ರೀಯ ಹೆದ್ದಾರಿ 548 ಬಿ ಯಲ್ಲಿ ಮುರುಂನಿಂದ ಐಬಿ ವೃತ್ತದವರೆಗೆ ₹957 ಕೋಟಿ ಮೊತ್ತದಲ್ಲಿ ಹೆದ್ದಾರಿ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಇದರಿಂದ ಕಲಬುರಗಿ ಹಾಗೂ ವಿಜಯಪುರ ಜಿಲ್ಲೆಗಳ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಗಡ್ಕರಿ ಹೇಳಿದ್ದಾರೆ.
ಕೊಪ್ಪಳ ಹಾಗೂ ಗದಗ ಜಿಲ್ಲೆಗಳಲ್ಲಿ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಭಾನಾಪುರ-ಗದ್ದನಕೇರಿ ವಿಭಾಗದ ಕುಕನೂರು, ಯಲಬುರ್ಗಾ ಹಾಗೂ ಗಜೇಂದ್ರಗಡದಲ್ಲಿ ಬೈಪಾಸ್‌ ನಿರ್ಮಿಸಲಾಗುತ್ತಿದ್ದು, ಇದಕ್ಕೆ ₹ 333.96 ಕೋಟಿ ವೆಚ್ಚ ಮಾಡಲಾಗುತ್ತದೆ. ಅಲ್ಲದೆ, ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 367ರಲ್ಲಿ ಸರ್ಜಾಪುರದಿಂದ
ಪಟ್ಟಣಕಲ್ಲುವಿನವರೆಗೆ ₹445.62 ಕೋಟಿ ವೆಚ್ಚದಲ್ಲಿ ವಿಸ್ತರಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಈ ಯೋಜನೆಗಳಿಗೆ ಅನುಮೋದನೆ ಕೊಡಲಾಗಿದೆ ಎಂದು ಗಡ್ಕರಿ ಮಾಹಿತಿ ನೀಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮೈಸೂರು ಹಾಗೂ ಕುಶಾಲನಗರ ಭಾಗದಲ್ಲಿ ₹909.86 ಕೋಟಿ ಮೊತ್ತದಲ್ಲಿ ನಾಲ್ಕು ಪಥಗಳ ಹೆದ್ದಾರಿ ಅಭಿವೃದ್ಧಿಪಡಿಸಲಾಗುತ್ತದೆ. ಕುಶಾಲನಗರ ಬೈಪಾಸ್‌ನ ಪ್ರಾರಂಭದಲ್ಲಿ ಗುಡ್ಡೆ ಹೊಸೂರಿನಿಂದ ಈ ಕಾಮಗಾರಿ ನಡೆಸಲಾಗುತ್ತದೆ. ಅಲ್ಲದೆ, ಇಲವಾಲ-ಕೆ.ಆರ್.ನಗರ ರಸ್ತೆ ಜಂಕ್ಷನ್‌ನ ಯಲಚಹಳ್ಳಿಯಿಂದ ಶ್ರೀರಂಗ ಪಟ್ಟಣದ ಬೈಪಾಸ್‌ ವರೆಗೆ ನಾಲ್ಕು ಪಥದ ಹೆದ್ದಾರಿ ಅಭಿವೃದ್ಧಿ ಮಾಡಲಾಗುತ್ತದೆ. ಈ ಯೋಜನೆಗೆ ₹739.39 ಕೋಟಿ ವೆಚ್ಚ ಮಾಡಲಾಗುತ್ತದೆ. ಈ ಯೋಜನೆಗಳಿಗೂ ಅನುಮೋದನೆ ನೀಡಲಾಗಿದೆ ಎಂದು ಸಚಿವ ಗಡ್ಕರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಸಾಗರ : ಶಾಲೆಯಲ್ಲಿ ಹೃದಯಾಘಾತದಿಂದ 1ನೇ ತರಗತಿ ವಿದ್ಯಾರ್ಥಿ ಸಾವು

ಕರ್ನಾಟಕದ 15 ಕಡೆ ರೋಪ್‌ವೇ..:
ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತದಲ್ಲಿ ರೋಪ್‌ವೇ ಯೋಜನೆ ಸೇರಿದಂತೆ ಉಳಿದ 14 ಬೆಟ್ಟಗಳಲ್ಲಿ ಈ ರೋಪ್‌ ವೇ ಯೋಜನೆಯ ಆರಂಭಕ್ಕೆ ಪೂರ್ವ ಕಾರ್ಯಸಾಧ್ಯತಾ ಅಧ್ಯಯನ ಮಾಡಲಾಗಿದೆ ಎಂದು ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
ರಾಜ್ಯಸಭೆಯಲ್ಲಿ ಬುಧವಾರ ಸದಸ್ಯ ನಾರಾಯಣ ಕೊರಗಪ್ಪ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ‘ಕರ್ನಾಟಕ ಸರ್ಕಾರವು 15 ಯೋಜನೆಗಳ ಪ್ರಸ್ತಾವ ಕಳುಹಿಸಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಬೆಟ್ಟ, ಚಿಕ್ಕಮಗಳೂರಿನ ಮುಳ್ಳಯ್ಯನ ಗಿರಿ, ಕೆಮ್ಮಣ್ಣು ಗುಂಡಿ, ಮೈಸೂರಿನ ಚಾಮುಂಡಿ ಬೆಟ್ಟ, ಉಡುಪಿ ಜಿಲ್ಲೆಯ ಕೊಡಚಾದ್ರಿ ಪರ್ವತ, ತುಮಕೂರಿನ ದೇವರಾಯನ ದುರ್ಗ, ಮಧುಗಿರಿ ಕೋಟೆ, ಕೊಪ್ಪಳದ ಅಂಜನಾದ್ರಿ ಬೆಟ್ಟ, ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ, ಸಾಗರ ಹಿನ್ನೀರು, ಉತ್ತರ ಕನ್ನಡದ ಯಾಣ, ಜೋಯ್ಡಾ ಹಾಗೂ ಚಪೇಲಿ, ಕೊಡಗು ಜಿಲ್ಲೆಯ ಕುಮಾರ ಪರ್ವತ, ಬೆಳಗಾವಿ ಜಿಲ್ಲೆಯ ರಾಜ್‌ಹೌಸ್‌ಗಡದಲ್ಲಿ ರೋಪ್‌ ವೇ ಯೋಜನೆ ಪ್ರಸ್ತಾಪ ಮಾಡಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement