ಯುಕೆಜಿ ಓದುತ್ತಿದ್ದ ಮಗುವನ್ನು ಫೇಲ್ ಮಾಡಿದ ಶಾಲೆ.. ! ಮಾಜಿ ಸಚಿವ ಸುರೇಶಕುಮಾರ್​ ಆಕ್ರೋಶ

ಬೆಂಗಳೂರು: ಆನೇಕಲ್‌ ತಾಲೂಕಿನ ಹುಸ್ಕೂರು ಗೇಟ್ ಬಳಿಯ ಶಾಲೆಯೊಂದು ಯುಕೆಜಿ ಓದುತ್ತಿದ್ದ ಮಗುವನ್ನು ಶಿಕ್ಷಣ ಸಂಸ್ಥೆ ಫೇಲ್ ಮಾಡಿ ಈಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಯುಕೆಜಿ ಓದುತ್ತಿದ್ದ ವಿದ್ಯಾರ್ಥಿನಿ ಪುಟಾಣಿ ಬಿ ನಂದಿನಿ ಎಂಬವಳನ್ನು ಸಂಸ್ಥೆ ಅನುತ್ತೀರ್ಣ ಮಾಡಿದ್ದು, ಶಾಲೆಯ ಕ್ರಮಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಈ ಕುರಿತು ಮಾಜಿ ಶಿಕ್ಷಣ ಸಚಿವ ಸುರೇಶಕುಮಾರ ಅವರು ಟ್ವೀಟ್ ಮಾಡಿದ್ದು, ಶಾಲೆ ಮಗುವನ್ನು ಏನು ಮಾಡಲು ಹೊರಟಿದೆ ಎಂದು ಪ್ರಶ್ನಿಸಿದ್ದಾರೆ. ಈ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರು ಕೂಡ ಸರಣಿ ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಗುವನ್ನು ಫೇಲ್ ಮಾಡಿರುವ ಶಿಕ್ಷಣ ಸಂಸ್ಥೆಗೆ ತಲೆಯೂ ಇಲ್ಲ ಹೃದಯ ಮೊದಲೇ ಇಲ್ಲ. ಈ ಮಹಾಕೃತ್ಯ ಗೊತ್ತಾದ ಕೂಡಲೇ ಆನೇಕಲ್ ತಾಲೂಕು ಶಿಕ್ಷಣ ಇಲಾಖೆಗೆ ಮಾಹಿತಿ ತಿಳಿಸಿದ್ದೇನೆ. ನಾನು ಕೂಡ ಒಮ್ಮೆ ಈ ಶಾಲೆಗೆ ಸದ್ಯದಲ್ಲೇ ಭೇಟಿ ನೀಡಲು ಬಯಸಿದ್ದೇನೆ ಎಂದು ಮಾಜಿ ಸಚಿವರು ಬರೆದುಕೊಂಡಿದ್ದಾರೆ.

ಈ ಬಗ್ಗೆ ಮಗುವಿನ ಪಾಲಕರು ಸಹ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ನಮ್ಮ ಮಗಳನ್ನು ಜೋಸೆಫ್ ಚಾಮಿನೇಡ್ ಅಕಾಡೆಮಿಯು ಫೇಲ್​ ಮಾಡಿದೆ. ಈ ಬಗ್ಗೆ ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿದಾಗ ಈ ವಿಚಾರದಲ್ಲಿ ಯಾವುದೇ ತೀರ್ಮಾನಕ್ಕೆ ಬರಲು ನಿರಾಕರಿಸಿತು. ಬೇರೆ ಮಕ್ಕಳ ಪಾಲಕರು ಈ ವಿಚಾರದಲ್ಲಿ ಯಾವುದೇ ವಿರೋಧ ವ್ಯಕ್ತಪಡಿಸಿಲ್ಲ. ಸದ್ಯಕ್ಕೆ ಒಂದು ಮಗುವಿಗೆ ನಾವೇನು ಮಾಡಲು ಆಗುವುದಿಲ್ಲ. ಬದಲಾಗಿ ಮಗುವಿನ ಫೇಲ್​ ಆಗಿರುವ ಬಗ್ಗೆ ತಿಳಿಸಿ, ಭವಿಷ್ಯದಲ್ಲಿ ಚೆನ್ನಾಗಿ ಓದುವಂತೆ ಹೇಳಿ ಎಂದು ಪ್ರಾಂಶುಪಾಲರು ನಮಗೆ ಖಾರವಾಗಿ ಪ್ರತಿಕ್ರಿಯೆ ನೀಡಿದರು.ಕೇವಲ 6 ವರ್ಷದ ಮಗುವನ್ನು ಫೇಲ್​ ಮಾಡುವುದೆಂದರೆ… ಇದು ಮಗುವಿನ ಮಾನಸಿಕ ತೊಂದರೆಗೆ ಕಾರಣವಾಗಬಹುದು. ಇದು ಸರ್ಕಾರದ ನಿಯಮಗಳಿಗೆ ವಿರುದ್ಧವಾಗಿದೆ ಎಂದು ನಂಬುತ್ತೇವೆ ಮತ್ತು ಇಂಥದ್ದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ. ಶಿಕ್ಷಣ ಸಚಿವರು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಬೇಕೆಂದು ಮನವಿ ಮಾಡುತ್ತೇನೆ ಎಂದು ಪಾಲಕರು ಬರೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement