ಫೆಬ್ರವರಿ 11, 12ರಂದು ಹುಬ್ಬಳ್ಳಿಯ ರಾಮಕೃಷ್ಣ-ವಿವೇಕಾನಂದ ಆಶ್ರಮದಿಂದ ಅಖಿಲ ಕರ್ನಾಟಕ ಭಕ್ತರ ಸಮ್ಮೇಳನ, ಶತಚಂಡೀ ಮಹಾಯಾಗ

(ಫೆಬ್ರವರಿ11, 12 ರಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವತಿಯಿಂದ ವಿದ್ಯಾನಗರದ ಕಲ್ಯಾಣ ನಗರದಲ್ಲಿ ಅಖಿಲ ಕರ್ನಾಟಕ ಭಕ್ತರ ಸಮ್ಮೇಳನ ಮತ್ತು ಶ್ರೀ ಶ್ರೀ ಶತಚಂಡೀ ಮಹಾಯಾಗವನ್ನು ಕುಂದೂರಿನ ವಿದ್ವಾನ್ ಶ್ರೀ ಸತ್ಯನಾರಾಯಣ ಜೋಶಿ ಮತ್ತು ಕೋಕ್ಕಾರಿನ ವಿನಾಯಕ ಭಟ್‌ ಹಾಗೂ ಆಯೋಜಿಸಿದೆ ಮತ್ತು ಉದಾತ್ತ ಮತ್ತು ಉತ್ತಮ ೧೮ ಲೇಖನಗಳನ್ನು ಒಳಗೊಂಡ “ಜನನಿ” ಗ್ರಂಥ ಇದೇ ಸಂದರ್ಭದಲ್ಲಿ ಲೋಕಾರ್ಪಣೆಗೊಳ್ಳಲಿದೆ.)
ಹುಬ್ಬಳ್ಳಿಯ ರಾಮಕೃಷ್ಣ-ವಿವೇಕಾನಂದ ಆಶ್ರಮವು ಒಂದು ಆಧ್ಯಾತ್ಮಿಕ ಕೇಂದ್ರವಾಗಿದೆ. ತನ್ನ ಕಾರ್ಯಚಟುವಟಿಕೆಗಳ ಮೂಲಕ ಪ್ರಾಚೀನ ಮತ್ತು ಅರ್ವಾಚೀನ ಸಂಪ್ರದಾಯಗಳ ನಡುವೆ ಸಾಮರಸ್ಯ, ಆಧ್ಯಾತ್ಮಿಕ ತತ್ವಗಳ ಪ್ರಸಾರ-ಪ್ರಚಾರ, ಪೂರಣ ಹಾಗೂ ಮಾನವರ ಸರ್ವಾಂಗೀಣ ಅಭ್ಯುದಯ, ಸಾಮಾಜಿಕ ಸಮಾನತೆ ಮತ್ತು ಎಲ್ಲರಲ್ಲೂ ಶಾಂತಿ ನೆಲೆಸುವಂತೆ ಮಾಡಲು ಯಾವುದೇ ಜನಾಂಗೀಯ ಭೇದ, ಜಾತಿ, ರಾಷ್ಟ್ರೀಯತೆ ಮುಕ್ತ ಸಾಮರಸ್ಯಯುಕ್ತ ಜನತೆ ಹಾಗೂ ರಾಷ್ಟ್ರ ನಿರ್ಮಾಣದ ಗುರಿಯನ್ನು ಹೊಂದಿದೆ
ರಾಮಕೃಷ್ಣ ಪರಮಹಂಸರು, ಶ್ರೀಮತಿ ಶಾರದಾದೇವಿ, ಸ್ವಾಮಿ ವಿವೇಕಾನಂದರ ಜೀವನ ಹಾಗೂ ಬೋಧನೆಗಳಿಂದ ಪ್ರಭಾವಿತವಾಗಿರುವ ರಾಮಕೃಷ್ಣ ವಿವೇಕಾನಂದ ಆಶ್ರಮವು ಪೂಜ್ಯ ಸ್ವಾಮಿ ಪುರುಷೋತ್ತಮಾನಂದಜಿ ಮಹಾರಾಜರ ಆಶೀರ್ವಾದದೊಂದಿಗೆ ೧೩ ಮೇ ೨೦೦೨ ರಂದು ಹುಬ್ಬಳ್ಳಿಯ ಕಲ್ಯಾಣ ನಗರದಲ್ಲಿರುವ ಡಾ.ಪ್ರೊ. ರೇವಣಕರ (ಐಐಟಿ ಬಾಂಬೆ) ಇವರ ಮನೆಯಲ್ಲಿ ಆರಂಭಗೊಂಡಿತು. ಸ್ವಾಮಿ ರಘುವೀರಾನಂದಜೀಯವರು ಆಶ್ರಮದ ಅಧ್ಯಕ್ಷರಾಗಿದ್ದಾರೆ. ಉತ್ಸಾಹಿ ಹಿತ ಚಿಂತಕರು, ಸ್ವಯಂ ಸೇವಕರ ನೆರವಿನಿಂದ ಆಶ್ರಮವು “ಆತ್ಮನೋ ಮೋಕ್ಷಾರ್ಥ ಜಗತ್ ಹಿತಾಯ ಚಃ” ಎಂಬ ಘೋಷವಾಕ್ಯದಡಿಯಲ್ಲಿ ಮಾನವತೆಯ ಗುಣಗಳನ್ನು ಸಮಾಜದಲ್ಲಿ ಮೂಡಿಸುವ ಕರ‍್ಯಕ್ರಮಗಳನ್ನು ಆಯೋಜಿಸುತ್ತಿದೆ.
ಪ್ರತಿದಿನ ಆಶ್ರಮದಲ್ಲಿ ಸಾಂಪ್ರದಾಯಿಕ ಪೂಜೆ, ಮಂಗಳಾರತಿ, ವೇದ ಮಂತ್ರಗಳ ಪಠಣ, ಭಜನೆ, ಶ್ರೀ ಲಲಿತ ಸಹಸ್ರನಾಮಾವಳಿ ಪಠಣ ನಡೆಯುತ್ತದೆ. ಏಕಾದಶಿ ಸಂದರ್ಭಗಳಲ್ಲಿ ರಾಮನಾಮ ಸಂಕಿರ್ತನೆ ನಡೆಯುತ್ತದೆ. ಪ್ರತಿ ಭಾನುವಾರ ಮಕ್ಕಳಿಗಾಗಿ ಮತ್ತು ಯುವಕರಿಗೆ ವ್ಯಕ್ತತ್ವ ವಿಕಸನ ತರಗತಿಗಳು, ನೈತಿಕ ಮೌಲ್ಯಗಳು, ಬರವಣಿಗೆ, ಕ್ರಾಫ್ಟ್‌ ಮುಂತಾದ ತರಗತಿಗಳನ್ನು ಆಯೋಜಿಸಲಾಗುತ್ತದೆ. ಸಾಯಂಕಾಲ ಆಧ್ಯಾತ್ಮಿಕ ಜೀವನದ ಬಗೆಗೆ ಪ್ರವಚನಗಳನ್ನು ಏರ್ಪಡಿಸಲಾಗುತ್ತದೆ.

ಆಶ್ರಮವು ಉಪನ್ಯಾಸಗಳನ್ನು, ಕಾರ್ಯಾಗಾರಗಳನ್ನು, ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾ ಮುನ್ನಡೆಯುತ್ತಿದೆಯಲ್ಲದೆ , ಪ್ರತಿವರ್ಷ ನವರಾತ್ರಿ ಸಂದರ್ಭದಲ್ಲಿ ದೇವಿ ಆರಾಧನೆ ಮಾಡುತ್ತಾ, ಭಾರತೀಯ ಸಾಹಿತ್ಯ, ಸಂಸ್ಕೃತಿ ಮತ್ತು ಮೌಲ್ಯ ಶಿಕ್ಷಣ ಕುರಿತು ಜಾಗೃತಿ ಮೂಡಿಸುತ್ತಿದೆ. ಸತ್ಸಂಗಗಳನ್ನು ನಿರಂತರವಾಗಿ ಆಯೋಜಿಸುತ್ತಿದೆ. ಭಗವದ್ಗೀತಾ ಸಪ್ತಾಹ, ಕಾಲೇಜಿನಿಂದ ಕಾಲೇಜಿಗೆ ವಿವೇಕಾನಂದ, ಸ್ವಾಮಿವಿವೇಕಾನಂದರ ವಿವಿಧ ಆಶ್ರಮಗಳ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟದ ವ್ಯವಸ್ಥೆಯನ್ನು ಮಾಡುತ್ತಿದೆ. ಆಶ್ರಮವು ರಾಷ್ಟ್ರೀಯ ಯುವದಿನ ೨೦೧೯ ಮತ್ತು ಸ್ವಾಮಿ ವಿವೇಕಾನಂದರ ಚಿಕಾಗೊ ಭಾಷಣದ ೧೨೫ ನೇ ವಾರ್ಷಿಕೋತ್ಸವದ ಅಂಗವಾಗಿ “ವಿವೇಕಾನಂದರ ಭಾರತ” ಕ್ಕಾಗಿ ಯುವ ಸಬಲೀಕರಣದ ಕುರಿತು ರಾಷ್ಟ್ರೀಯ ಕಾರ್ಯಗಾರವನ್ನು ಆಯೋಜಿಸಿತ್ತು.
ಆಶ್ರಮವು ವಿವೇಕಾನಂದ ಮಾನವ ಉತ್ಕರ್ಷತಾ ಸಂಸ್ಥೆಯ ಮೂಲಕ ಗ್ರಾಮೀಣ ಜನತೆಗೆ ಶಿಕ್ಷಣ ಮತ್ತು ಆರೋಗ್ಯ ಕುರಿತು ಕಾರ್ಯಕ್ರಮಗಳನ್ನು ಆಯೋಜಿಸುತ್ತದೆ. ಸಂವಹನ ಕೌಶಲ್ಯಗಳು, ನಾಯಕತ್ವ ಗುಣಗಳು, ಸೇವಾಭಾವ, ಸಾಂಸ್ಕೃತಿಕ ಮೌಲ್ಯಗಳ ಅಳವಡಿಸಿಕೊಳ್ಳುವಿಕೆಯನ್ನು ಆರಂಭಿಸಿ ಯುವಕರ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ತರಬೇತಿ ನೀಡುತ್ತಿದೆ.
ಸ್ವಾಮಿ ವಿವೇಕಾನಂದರು ಭಾರತೀಯ ಯುವಕರಿಗೆ ಚೈತನ್ಯದ ಚಿಲುಮೆ. ೧೮೯೩ರಲ್ಲಿ ಚಿಕಾಗೊದಲ್ಲಿ ನಡೆದ ವಿಶ್ವಧರ್ಮ ಸಂಸತ್ತಿನಲ್ಲಿ ಮಾಡಿದ ಭಾಷಣ ಹಾಗೂ ಜಗತ್ತಿಗೆ ನೀಡಿದ ಸಂದೇಶ ಇವತ್ತಿಗೂ ಕೂಡ ಅಷ್ಟೇ ಸಂಗತವಾಗಿ ತನ್ನ ಪ್ರಭಾವ ಹಾಗೂ ನೈಜತೆಯನ್ನುಳಿಸಿಕೊಂಡಿದೆ. ಇವರ ಭಾಷಣ ಹಾಗೂ ಬರವಣಿಗೆಯು ವಿಶ್ವಜ್ಞಾನವನ್ನು ಒಳಗೊಂಡಿದ್ದರೂ ಕೂಡ ಸಮಕಾಲೀನ ಯುವಜನತೆಗೆ ಇದರಿಂದ ವಂಚಿತರಾಗಿದ್ದಾರೆ.

ಭಾರತೀಯ ಯುವಕರು ಇಂದು ಬುದ್ಧಿವಂತರಾಗಿ ಉತ್ಪಾದಕತೆ ಹೊಂದಲು ಹಾಗೂ ಜವಾಬ್ದಾರಿಯುತ ನಾಗರಿಕನಾಗಲು ಹಲವಾರು ಸವಾಲುಗಳನ್ನು ಇಂದಿಗೂ ಎದುರಿಸುತ್ತಿದ್ದಾರೆ. ಜೊತೆಗೆ ಅವರಲ್ಲಿ ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಹಿಡಿಯುವ ಯಾವುದೇ ಉದ್ಯಮಶೀಲ ಕೌಶಲ್ಯಗಳು ಗೋಚರಿಸುತ್ತಿಲ್ಲ. ಯುವಕರು ವೈಯಕ್ತಿಕ ಸಂಘರ್ಷ, ಸಮಸ್ಯೆ , ತೊಳಲಾಟದಲ್ಲಿ ಸಿಲುಕಿ ಮಾನಸಿಕವಾಗಿ ಕುಗ್ಗಿದ್ದಾರೆ. ಬಹಳಷ್ಟು ಜನರಲ್ಲಿ ಶ್ರದ್ಧೆಯ ಹಾಗೂ ಆತ್ಮವಿಶ್ವಾಸದ ಕೊರತೆ ಕಾಣಿಸುತ್ತಿರುವ ಜೊತೆಗೆ ಅವರಲ್ಲಿ ಋಣಾತ್ಮಕ ಭಾವನೆ ಹಾಗೂ ಚಿಂತನೆಗಳು ಕಂಡು ಬರುತ್ತಿವೆ. ಇದರಿಂದಾಗಿ ಅವರ ವರ್ತನೆಯಲ್ಲಿ ಅನಾರೋಗ್ಯಕರ ಬದಲಾವಣೆಗಳು ಕಂಡುಬರುತ್ತ, ಸಮಾಜದಲ್ಲಿ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗುತ್ತಿದೆ. ಇಂತಹದರಲ್ಲಿಯೂ ಕೂಡ ಕೆಲ ಜನ ತಮ್ಮ ಮೇಲೆ ಭರವಸೆ ಇಟ್ಟುಕೊಂಡು, ನಮ್ಮ ಪ್ರಾಚೀನ ಜ್ಞಾನ, ತತ್ವಗಳಿಂದ ಪ್ರಭಾವಿತರಾಗಿ ಅವುಗಳನ್ನು ಅಳವಡಿಸಿಕೊಂಡು ಉತ್ತಮ ಭವಿಷ್ಯದತ್ತ ಹೆಜ್ಜೆ ಹಾಕುತ್ತಿದ್ದಾರೆ. ವಿವೇಕಾನಂದರ ಚಿಂತನೆಗಳು ಜನತೆಯನ್ನು ಹೆಚ್ಚು ಆತ್ಮ ವಿಶ್ವಾಸಿಗಳನ್ನಾಗಿ ಮಾಡುತ್ತಾ ಇರುವುದರಿಂದ ಇಂದಿಗೂ ಕೂಡ ವಿವೇಕಾನಂದರ ವಾಣಿ ಪ್ರಸ್ತುತವಾದ ಕಾರಣ ಇಂದಿನ ಯುವಕರಲ್ಲಿ ಆತ್ಮವಿಶ್ವಾಸ, ಕೌಶಲ್ಯಗಳನ್ನು ತುಂಬಿ ಅವರನ್ನು ಧನಾತ್ಮಕವಾಗಿ ಬದಲಾಯಿಸಿತ್ತಾ, ಆಶ್ರಮ ಮುನ್ನಡೆಯುತ್ತಿದೆ.

ಪೂಜ್ಯ ರಘುವಿರಾನಂದ ಸ್ವಾಮೀಜಿ, ಸ್ವಾಮಿ ಪ್ರೇಮ ರೂಪಾನಂದಜಿ ಮತ್ತು ರಾಮಕೃಷ್ಣ ವಿವೇಕಾಶ್ರಮದ ಯತಿಗಳ ಮಾರ್ಗದರ್ಶನದಲ್ಲಿ, ಧರ್ಮದರ್ಶಿಗಳಾದ ಸಂಭಾಜಿ ಕಲಾಲ, ಪಾಲಿಕೆಯ ಸದಸ್ಯರಾದ ರಾಜಣ್ಣ ಕೊರವಿ ಅವರ ನೇತೃತ್ವದಲ್ಲಿ ಹಲವಾರು ಸಮಿತಿಗಳು ಕಾರ್ಯಕ್ರಮದ ಯಶಸ್ವಿಗಾಗಿ ಕಾರ್ಯ ಮಾಡುತ್ತಿವೆ.
ಶ್ರೀಮತಿ ಶಾರದಾದೇವಿ ಅವರು ತಾಯಿ ವಿಶೇಷ ಗುಣಗಳಾದ ತಾಳ್ಮೆ, ವಿನಯ, ದಯೆ, ಪ್ರೇಮ, ಕ್ಷಮೆ ಮುಂತಾದ ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಬಾಳಿತೋರಿದವರು. ಶ್ರೀ ಮಾತೆ ಅವರ ಜೀವನ ಇಂದಿನ ಸ್ತ್ರೀ ಕುಲಕ್ಕೆ ಆದರ್ಶವಾಗಿದೆ. ಅವರ ಜೀವನಾದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆನ್ನುತ್ತಾರೆ ಸ್ವಾಮಿ ರಘುವೀರಾನಂದ ಅವರು.
– ಡಾ. ಬಿ.ಎಸ್. ಮಾಳವಾಡ, ನಿವೃತ್ತ ಗ್ರಂಥಪಾಲಕರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement