ಟರ್ಕಿ ಭೂಕಂಪ : ಕಾಣೆಯಾಗಿದ್ದ ಬೆಂಗಳೂರು ಕಂಪನಿ ಉದ್ಯೋಗಿಯ ಮೃತದೇಹ ಹೋಟೆಲ್‌ನ ಅವಶೇಷಗಳಡಿ ಪತ್ತೆ, ಹಚ್ಚೆ ನೋಡಿ ದೇಹ ಗುರುತಿಸಿದ ಕುಟುಂಬ

ನವದೆಹಲಿ: ಫೆಬ್ರವರಿ 6 ರಂದು ಟರ್ಕಿಯಲ್ಲಿ ಸಂಭವಿಸಿದ ಭಾರೀ ಭೂಕಂಪದ ನಂತರ ಕಾಣೆಯಾಗಿದ್ದ ಭಾರತೀಯ ಪ್ರಜೆಯೊಬ್ಬರು ಶನಿವಾರ ಅವರು ತಂಗಿದ್ದ ಹೋಟೆಲ್‌ನ ಅವಶೇಷಗಳಡಿ ಶವವಾಗಿ ಪತ್ತೆಯಾಗಿದ್ದಾರೆ.
ಬೆಂಗಳೂರು ಮೂಲದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಉತ್ತರಾಖಂಡದ ಪೌರಿ ಜಿಲ್ಲೆಯವರಾದ ವಿಜಯಕುಮಾರ್ ಗೌಡ್ ಅವರು ಅಧಿಕೃತ ನಿಯೋಜನೆಯ ಮೇರೆಗೆ ಟರ್ಕಿಗೆ ತೆರಳಿದ್ದರು.
ಶನಿವಾರ ನಸುಕಿನ 2 ಗಂಟೆ ಸುಮಾರಿಗೆ ನಜ್ಜುಗುಜ್ಜಾದ ಶವ ಅವಶೇಷಗಳ ಅಡಿ ಪತ್ತೆಯಾಗಿತ್ತು. ಅದು ನಾಪತ್ತೆಯಾಗಿರುವ ವಿಜಯಕುಮಾರ ಅವರದ್ದೇ ಇರಬಹುದು ಎಂಬ ಅನುಮಾನದ ಮೇಲೆ ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು, ಉತ್ತರಾಖಂಡದಲ್ಲಿರುವ ವಿಜಯ ಅವರ ಕುಟುಂಬದ ಸದಸ್ಯರಿಗೆ ದೇಹದ ಚಿತ್ರಗಳನ್ನು ರವಾನಿಸಿದ್ದರು. ದೇಹದ ಮುಖಭಾಗಗಳು ಬಹುತೇಕ ಛಿದ್ರವಾಗಿದ್ದವು. ಆದರೆ ಅವರ ಕೈಯಲ್ಲಿದ್ದ ಹಚ್ಚೆಯನ್ನು ನೋಡಿ ಕುಟುಂಬದವರು ಪತ್ತೆ ಹಚ್ಚಿದರು. ಗೌಡ್ ಅವರ ಮುಖ ಜರ್ಜರಿತವಾಗಿದ್ದರಿಂದ ಅವರ ಒಂದು ಕೈ ಮೇಲಿದ್ದ “ಓಂ” ಎಂಬ ಪದದ ಹಚ್ಚೆ ಮೂಲಕ ಅವರನ್ನು ಗುರುತಿಸಲಾಗಿದೆ ಎಂದು ಭಾರತೀಯ ರಾಯಭಾರ ಕಚೇರಿ ಅಧಿಕಾರಿಗಳನ್ನು ಉಲ್ಲೇಖಿಸಿ ಅವರ ಕುಟುಂಬವು ತಿಳಿಸಿದೆ. ಗೌಡ್ ಪೌರಿ ಜಿಲ್ಲೆಯ ಕೋಟ್‌ದ್ವಾರ್‌ನ ಪದಾಂಪುರ ಪ್ರದೇಶದ ನಿವಾಸಿ. ಶುಕ್ರವಾರ ಅವರ ಬಟ್ಟೆ ಪತ್ತೆಯಾಗಿತ್ತು.
ಫೆಬ್ರವರಿ 6 ರಂದು ಭೂಕಂಪದಿಂದ ಟರ್ಕಿಯಲ್ಲಿ ಕಾಣೆಯಾದ ಭಾರತೀಯ ಪ್ರಜೆ ವಿಜಯಕುಮಾರ ಅವರ ಶರೀರವು ಅವರು ತಂಗಿದ್ದ ಮಾಲತ್ಯದಲ್ಲಿನ ಹೋಟೆಲ್‌ನ ಅವಶೇಷಗಳ ನಡುವೆ ಪತ್ತೆಯಾಗಿದೆ ಮತ್ತು ಅವರನ್ನು ಗುರುತಿಸಲಾಗಿದೆ ಎಂದು ನಾವು ದುಃಖದಿಂದ ತಿಳಿಸುತ್ತೇವೆ” ಎಂದು ಟರ್ಕಿಯಲ್ಲಿನ ಭಾರತದ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಗೌಡ್ ಅವರ ಮನೆಗೆ ಸ್ನೇಹಿತರು, ಸಂಬಂಧಿಕರು ಆಗಮಿಸಿ ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅವರ ಪಾರ್ಥಿವ ಶರೀರವನ್ನು ಮೊದಲು ಇಸ್ತಾಂಬುಲ್‌ಗೆ ಕೊಂಡೊಯ್ಯಲಾಗುತ್ತದೆ ಮತ್ತು ನಂತರ ದೆಹಲಿಗೆ ಕೊಂಡೊಯ್ಯಲಾಗುತ್ತದೆ. ಅವರ ಪಾರ್ಥಿವ ಶರೀರ ಕೋಟ್‌ದ್ವಾರ ತಲುಪಲು ಮೂರು ದಿನ ಬೇಕಾಗಬಹುದು ಎಂದು ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಉಲ್ಲೇಖಿಸಿ ಕುಟುಂಬದ ಮೂಲಗಳು ತಿಳಿಸಿವೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ : ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಆಪ್ತ ಸಹಾಯಕನ ಬಂಧನ

ಗೌಡ್ ಆಕ್ಸಿ ಪ್ಲಾಂಟ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ಅಧಿಕೃತ ನಿಯೋಜನೆಯಲ್ಲಿದ್ದರು ಎಂದು ಅವರ ಹಿರಿಯ ಸಹೋದರ ಅರುಣಕುಮಾರ ಗೌಡ್ ಅವರು ಹೇಳಿದ್ದಾರೆ. “ಅವನ ಫೋನ್ ರಿಂಗ್ ಆಗುತ್ತಿತ್ತು, ಆದರೂ ಯಾರೂ ಪ್ರತಿಕ್ರಿಯಿಸುತ್ತಿಲ್ಲ ” ಎಂದು ಅರುಣ ಅವರು ತನ್ನ ಸಹೋದರ ನಾಪತ್ತೆಯಾದ ನಂತರ ತಿಳಿಸಿದ್ದರು. ಅವರ ಪತ್ನಿ ಮತ್ತು ಆರು ವರ್ಷದ ಮಗ ಫೆಬ್ರವರಿ 5 ರಂದು ಕೊನೆಯ ಬಾರಿಗೆ ಫೋನ್‌ನಲ್ಲಿ ಮಾತನಾಡಿದ್ದರು ಮತ್ತು ಅವರು ಫೆಬ್ರವರಿ 20 ರಂದು ಭಾರತಕ್ಕೆ ಮರಳಬೇಕಿತ್ತು ಎಂದು ಅವರು ಹೇಳಿದರು.

ಭೂಕಂಪದ ನಂತರ ಭಾರತೀಯರೊಬ್ಬರು ನಾಪತ್ತೆಯಾಗಿದ್ದಾರೆ ಮತ್ತು ಇತರ 10 ಮಂದಿ ಸಿಲುಕಿಕೊಂಡಿದ್ದಾರೆ ಆದರೆ ದೂರದ ಪ್ರದೇಶಗಳಲ್ಲಿ ಸುರಕ್ಷಿತವಾಗಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಬುಧವಾರ ತಿಳಿಸಿತ್ತು.
ಟರ್ಕಿಯಲ್ಲಿ ನೆಲೆಸಿರುವ ಭಾರತೀಯರ ಸಂಖ್ಯೆ ಸುಮಾರು 3,000, ಅದರಲ್ಲಿ ಸುಮಾರು 1,800 ಜನ ಇಸ್ತಾನ್‌ಬುಲ್ ಮತ್ತು ಸುತ್ತಮುತ್ತ ವಾಸಿಸುತ್ತಿದ್ದರೆ, 250 ಅಂಕಾರಾದಲ್ಲಿ ಮತ್ತು ಉಳಿದವರು ದೇಶದಾದ್ಯಂತ ಹರಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫೆಬ್ರವರಿ 6 ರ ಬೆಳಿಗ್ಗೆ 7.8 ತೀವ್ರತೆಯ ಭೂಕಂಪವು ಟರ್ಕಿಯನ್ನು ಅಪ್ಪಳಿಸಿದಾಗ ಗೌಡ್ ತಂಗಿದ್ದ ಹೋಟೆಲ್ ಕುಸಿದಿತ್ತು. ಭೂಕಂಪದಿಂದಾಗಿ 25,000 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement