ಶಿವಮೊಗ್ಗ: ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಅವರ ಹೆಸರು ಇಡಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ನಾಳೆ, ಸೋಮವಾರ ನಡೆಯಲಿರುವ ಅಧಿವೇಶನದಲ್ಲಿ ಕುವೆಂಪು ಅವರ ಹೆಸರು ಇಡಲು ಪ್ರಸ್ತಾಪಿಸುತ್ತೇನೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಫೆಬ್ರವರಿ 27ರಂದು ಬರುವುದು ಖಚಿತವಾಗಿದೆ. ಅವರೇ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾಷ್ಟ್ರಕವಿ ಕುವೆಂಪು ಹೆಸರಿನ ಈ ವಿಮಾನ ನಿಲ್ದಾಣ ಉದ್ಘಾಟಿಸಲಿದ್ದಾರೆ ಎಂದು ಹೇಳಿದರು.
ಈ ಹಿಂದೆ ರಾಜ್ಯ ಸರ್ಕಾರ ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಜ್ಯ ಸರ್ಕಾರ ಯಡಿಯೂರಪ್ಪನವರ ಹೆಸರಿಡಲು ನಿರ್ಧರಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ ತಮ್ಮ ಹೆಸರಿಡುವುದು ಬೇಡ ಎಂದು ಯಡಿಯೂರಪ್ಪ ಮನವಿ ಮಾಡಿದ್ದರು.
ವಿಶ್ವಮಾನವ ಸಂದೇಶ ಸಾರಿರುವ ಕುವೆಂಪು ಹೆಸರನ್ನು ವಿಮಾನ ನಿಲ್ದಾಣಕ್ಕೆ ಇಡಲು ನಿರ್ಣಯ ಮಾಡಲಾಗಿದ್ದು, ಈ ಕುರಿತು ನಾನೇ ಸದನದಲ್ಲಿ ಪ್ರಸ್ತಾಪನೆ ಮಾಡುವೆ. ಅಧಿವೇಶನದಲ್ಲಿ ಇದನ್ನು ಸರ್ವಾನುಮತದಿಂದ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.
ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಪ್ರವಾಸ ಕೈಗೊಂಡಿದ್ದಾರೆ. 140 ಸ್ಥಾನ ಪಡೆದು ಬಿಜೆಪಿ ಮತ್ತೆ ಅಧಿಕಾರಕ್ಕೆ ತರಲು ಶ್ರಮಿಸುವೆ. ನನಗೆ 80 ವರ್ಷ ತುಂಬುತ್ತಿದೆ. ಈ ಚುನಾವಣೆ ಮತ್ತು ಮುಂದಿನ ಚುನಾವಣೆಯಲ್ಲಿ ಸಕ್ರೀಯವಾಗಿ ಭಾಗವಹಿಸುವೆ. ಇದೊಂದು ಸವಾಲಾಗಿದ್ದು, ಸವಾಲು ಸ್ವೀಕರಿಸಿ ಜನರ ಬಳಿಗೆ ಹೋಗುವೆ. ಪ್ರವಾಸ ಕೈಗೊಳ್ಳುವೆ ಹಾಗೂ ಮತ್ತೆ ಬಿಜೆಪಿಗೆ ಗೆಲುವು ತರಲು ಪ್ರಯತ್ನಿಸುವೆ ಎಂದು ಅವರು ಹೇಳಿದರು.
ಐಸಿಎಸ್ ಮಹೇಶ ಪಿಯು ಸೈನ್ಸ್ ಕಾಲೇಜು, ಧಾರವಾಡ
ನಿಮ್ಮ ಕಾಮೆಂಟ್ ಬರೆಯಿರಿ