
ನವದೆಹಲಿ; ರಾಷ್ಟ್ರಪತಿ ದ್ರೌಪದಿ ಮುರ್ಮು ಭಾನುವಾರ ಹಲವು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಜ್ಯಪಾಲ ಮತ್ತು ಲೆಫ್ಟಿನೆಂಟ್ ಗೌರ್ನರ್ ನೇಮಕ ಮಾಡಿದ್ದಾರೆ.
ಆಂಧ್ರ ಪ್ರದೇಶದ ರಾಜ್ಯಪಾಲರಾಗಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ನೇಮಕ ಮಾಡಲಾಗಿದೆ. ಇವರು ಕನ್ನಡಿಗರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಸಮೀಪದ ಬೆಳವಾಯಿಯವರು. 2019ರ ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದಲ್ಲಿ ಅಬ್ದುಲ್ ನಜೀರ್ ಅವರು ಐತಿಹಾಸಿಕ ಅಯೋಧ್ಯೆ ಪ್ರಕರಣದ ತೀರ್ಪು ನೀಡಿದ ನ್ಯಾಯಮೂರ್ತಿಗಳಲ್ಲಿ ಒಬ್ಬರು. ಅವರು ಈ ವರ್ಷದ ಜನವರಿಯಲ್ಲಿ ನಿವೃತ್ತರಾಗಿದ್ದಾರೆ.
ನೂತನವಾಗಿ ಆಂದ್ರ ಪ್ರದೇಶದ ರಾಜ್ಯಪಾಲರಾಗಿ ನೇಮಕವಾಗಿರುವ ಹೆಮ್ಮೆಯ ಕನ್ನಡಿಗ ಎಸ್. ಅಬ್ದುಲ್ ನಜೀರ್ ಅವರಿಗೆ ಹಾರ್ದಿಕ ಅಭಿನಂದನೆಗಳು. ಮೂಲತಃ ಮಂಗಳೂರಿನ ಬೆಳುವಾಯಿಯವರಾದ ಇವರು ಕರ್ನಾಟಕದ ಉಚ್ಛ ನ್ಯಾಯಾಲಯದಲ್ಲಿ ವಕೀಲರಾಗಿ ಸೇವೆ ಸಲ್ಲಿಸಿ, ನಂತರ ಸುಪ್ರಿಂ ಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ, ನಿವೃತ್ತರಾಗಿದ್ದರು” ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಜನವರಿ 5, 1958ರಂದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯಲ್ಲಿ ಜನಿಸಿದರು. ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದರು. ಫೆಬ್ರವರಿ 18, 1983ರಲ್ಲಿ ವಕೀಲಿಕೆ ಆರಂಭಿಸಿ ನಂತರ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿದರು. ಮೇ 12, 2003ರಂದು ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ಸೆಪ್ಟೆಂಬರ್ 24, 2004ರಲ್ಲಿ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾದರು. ಫೆಬ್ರವರಿ 17, 2017ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. 2017ರಲ್ಲಿ ತ್ರಿವಳಿ ತಲಾಖ್ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಪೀಠದಲ್ಲಿ ನ್ಯಾಯಮೂರ್ತಿ ನಜೀರ್ ಇದ್ದರು, ಖಾಸಗಿತನದ ಹಕ್ಕು, ಅಯೋಧ್ಯೆ ಪ್ರಕರಣ ಮತ್ತು ಇತ್ತೀಚೆಗೆ ನೋಟು ಅಮಾನ್ಯೀಕರಣದ ಬಗ್ಗೆ ಕೇಂದ್ರದ 2016 ರ ನಿರ್ಧಾರ ಮತ್ತು ಶಾಸಕರ ವಾಕ್ ಸ್ವಾತಂತ್ರ್ಯ ಸೇರಿದಂತೆ ಹಲವು ಮಹತ್ವದ ಸಾಂವಿಧಾನಿಕ ಪೀಠದ ನಿರ್ಧಾರಗಳ ಭಾಗವಾಗಿದ್ದರು. ಅವರು 2019 ರಲ್ಲಿ ಅಯೋಧ್ಯೆ ವಿವಾದದ ಬಗ್ಗೆ ಸರ್ವಾನುಮತದ ತೀರ್ಪು ನೀಡಿದ ಸುಪ್ರೀಂ ಕೋರ್ಟ್‌ನ 5 ನ್ಯಾಯಾಧೀಶರ ಪೀಠದ ಭಾಗವಾಗಿದ್ದರು.
ಹಾಗೂ ರಾಮಂದಿರದ ಪರವಾಗಿ ತೀರ್ಪು ನೀಡಿದರು. 2023ರ ಜನವರಿಯಲ್ಲಿ ನಿವೃತ್ತರಾದರು.ಅಬ್ದುಲ್ ನಜೀರ್ ಅವರು ಮೂಲತಃ ಸರಳರಾಗಿದ್ದಾರೆ. ಈ ಕುರಿತು ಇವರ ಬೀಳ್ಗೊಡುಗೆ ಸಂದರ್ಭದಲ್ಲಿ ಸಿಜೆಐ ಡಿ.ವೈ. ಚಂದ್ರಚೂಡ ಅವರು ಪ್ರಸ್ತಾಪಿಸಿದ್ದರು. ಇತ್ತೀಚಿನವರೆಗೂ ಅವರ ಏಕೈಕ ಗುರುತಿನ ಕಾರ್ಡ್‌ಗಳೆಂದರೆ ಡ್ರೈವಿಂಗ್ ಲೈಸೆನ್ಸ್ ಮತ್ತು ನ್ಯಾಯಾಧೀಶರ ಐಡಿ ಕಾರ್ಡ್ ಆಗಿತ್ತು. ಅವರ ಪಾಸ್‌ಪೋರ್ಟ್ ಅನ್ನು ಸಹ 2019 ರಲ್ಲಿ ಮಾಡಲಾಗಿತ್ತು. ಇತ್ತೀಚೆಗೆ ಮೊದಲ ಬಾರಿಗೆ ಹೊರದೇಶಕ್ಕೆ ಪ್ರಯಾಣಿಸಿದ್ದರು ಎಂದು ಚಂದ್ರಚೂಡ ಹೇಳಿದ್ದರು



ನಿಮ್ಮ ಕಾಮೆಂಟ್ ಬರೆಯಿರಿ