ನವದೆಹಲಿ: ಸೋಮವಾರ ದೆಹಲಿಯ ಲೋಕನಾಯಕ್ ಜೈ ಪ್ರಕಾಶ ನಾರಾಯಣ (ಎಲ್‌ಎನ್‌ಜೆಪಿ) ಆಸ್ಪತ್ರೆಯಲ್ಲಿ ನವಜಾತ ಹೆಣ್ಣು ಮಗು ಸತ್ತಿದೆ ಎಂದು ವೈದ್ಯರು ಘೋಷಿಸಿದ ನಂತರ ಅಂತ್ಯಕ್ರಿಯೆ ನಡೆಸುವ ವೇಳೆ ಜೀವಂತವಾಗಿ ಪತ್ತೆಯಾಗಿದ್ದಾರೆ.
ಹೆಣ್ಣು ಮಗು ಜನಿಸಿದ ಕೆಲವೇ ನಿಮಿಷಗಳಲ್ಲಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು. ಆಕೆಯನ್ನು ಪೆಟ್ಟಿಗೆಯಲ್ಲಿ ತುಂಬಿ ಮನೆಯವರಿಗೆ ಹಸ್ತಾಂತರಿಸಲಾಯಿತು.
ಮನೆಯವರು ಬಾಲಕಿಯನ್ನು ಮನೆಗೆ ಕರೆತಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸಿದ್ದರು. ಅಂತ್ಯಕ್ರಿಯೆ ನಡೆಸಲು ಬಾಕ್ಸ್ ತೆರೆದಾಗ ಬಾಲಕಿ ಉಸಿರಾಡುತ್ತಿರುವುದು ಕಂಡು ಬಂದಿದೆ. ಬಾಲಕಿ ಬದುಕಿದ್ದಾಳೆ ಎಂದು ತಿಳಿದ ಮನೆಯವರು ಕೂಡಲೇ ಆಸ್ಪತ್ರೆಗೆ ಧಾವಿಸಿದ್ದಾರೆ.
ವೈದ್ಯರು ಬಾಲಕಿಯನ್ನು ಆಸ್ಪತ್ರೆಗೆ ಸೇರಿಸಿಕೊಳ್ಳಲು ನಿರಾಕರಿಸಿದರು ಎಂದು ಕುಟುಂಬದವರು ಆರೋಪಿಸಿದ್ದಾರೆ. ನಂತರ ನಾವು ಪೊಲೀಸರನ್ನು ಕರೆದ ನಂತರ ಅವರು ಮಧ್ಯಪ್ರವೇಶಿಸಿದರು. ಆಗ ಮಗುವನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿಕೊಂಡರು ಎಂದು ಸಲ್ಮಾನ್ ಹೇಳಿದರು. ಮಗುವಿನ ಸದ್ಯದ ಸ್ಥಿತಿ ಹೇಗಿದೆ ಎಂಬುದು ಮನೆಯವರಿಗೆ ತಿಳಿದಿಲ್ಲ ಎಂದು ಹೇಳಿದರು.
ನಿನ್ನೆ, ನನ್ನ ಅಣ್ಣನ ಮಗಳು ಜನಿಸಿದಳು. ಅವಳು ಬದುಕಿದ್ದಳು, ಆದರೆ ಅವಳು ಸತ್ತಿದ್ದಾಳೆ ಎಂದು ತಿಳಿಸಲಾಯಿತು” ಎಂದು ಮಗುವಿನ ಚಿಕ್ಕಪ್ಪ ಸಲ್ಮಾನ್ ಆರೋಪಿಸಿದ್ದಾರೆ.
ಬಾಕ್ಸ್‌ನಲ್ಲಿ ಮಗುವನ್ನು ತೋರಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾದ ನಂತರ ಸೋಮವಾರ ಈ ಘಟನೆ ಬೆಳಕಿಗೆ ಬಂದಿದೆ. ಮಗುವನ್ನು ಮರಳಿ ಆಸ್ಪತ್ರೆಗೆ ಕರೆತಂದ ಬಳಿಕ ವಿಡಿಯೋ ಚಿತ್ರೀಕರಣ ಮಾಡಿರುವುದಾಗಿ ಕುಟುಂಬದವರು ಒಪ್ಪಿಕೊಂಡಿದ್ದಾರೆ. ಮಗುವಿನ 35 ವರ್ಷದ ತಾಯಿಗೆ ಮೂರು ವರ್ಷದ ಇನ್ನೊಬ್ಬ ಮಗಳಿದ್ದಾಳೆ.
ಮಗುವನ್ನು ನಮಗೆ ಪೆಟ್ಟಿಗೆಯಲ್ಲಿಟ್ಟು ಒಪ್ಪಿಸಲಾಯಿತು ಮತ್ತು ನಾವು ಅವಳನ್ನು ನ್ಯೂ ಮುಸ್ತಫಾಬಾದ್‌ನಲ್ಲಿರುವ ನಮ್ಮ ಮನೆಗೆ ಕರೆದುಕೊಂಡು ಹೋದೆವು. ನಾವು ಅವಳನ್ನು ಹೂಳಲು ಸಿದ್ಧತೆಗಳನ್ನು ಪ್ರಾರಂಭಿಸಿದೆವು ಮತ್ತು ಸಂಜೆ 7:30 ರ ಸುಮಾರಿಗೆ, ನಾವು ಪೆಟ್ಟಿಗೆ ತೆರೆದಾಗ, ಮಗು ತನ್ನ ಕಾಲುಗಳು ಮತ್ತು ತೋಳುಗಳನ್ನು ಚಲಿಸುತ್ತಿರುವುದನ್ನು ನೋಡಿದೆವು. ನಾವು ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದೇವೆ” ಎಂದು ಸಲ್ಮಾನ್ ತಿಳಿಸಿದರು.
ಮಗುವಿನ ತಂದೆ ಪಿಸಿಆರ್ ಸಹಾಯವಾಣಿಗೆ ಕರೆ ಮಾಡಿದರು ಆದರೆ ಪೊಲೀಸರು ಬಂದು “ಒರಟು ಕಾಗದದ” ಮೇಲೆ ಕೆಲವು ಟಿಪ್ಪಣಿಗಳನ್ನು ತೆಗೆದುಕೊಂಡರು ಎಂದು ಅವರು ಹೇಳಿದ್ದಾರೆ. ಕುಟುಂಬದಿಂದ ಯಾವುದೇ ಔಪಚಾರಿಕ ದೂರು ದಾಖಲಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಆಸ್ಪತ್ರೆಯ ಹಿರಿಯ ವೈದ್ಯರೊಬ್ಬರು ಇದು ಸಾಮಾನ್ಯ ಹೆರಿಗೆ, ಆದರೆ ತಾಯಿ ಕೇವಲ 23 ವಾರಗಳ ಗರ್ಭಿಣಿಯಾಗಿದ್ದಳು ಮತ್ತು ಅವಧಿಗೆ ಮುನ್ನ ಮಗು ಜನಿಸಿದೆ ಹಾಗೂ ಕೇವಲ 490 ಗ್ರಾಂ ತೂಕವಿದೆ ಎಂದು ಹೇಳಿದರು. ಈ ಬಗ್ಗೆ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದಾರೆ ಎಂದು ತಿಳಿಸಿದರು.


ನಿಮ್ಮ ಕಾಮೆಂಟ್ ಬರೆಯಿರಿ