ಮಾರ್ಕ್ಸ್‌ಕಾರ್ಡ್‌ ಕೊಡಲು ವಿಳಂಬ : ಕಾಲೇಜು ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ..!

ಇಂದೋರ್‌: ಆಘಾತಕಾರಿ ಘಟನೆಯೊಂದರಲ್ಲಿ, ಮಧ್ಯಪ್ರದೇಶದ ಖಾಸಗಿ ಕಾಲೇಜೊಂದರ ಹಳೆ ವಿದ್ಯಾರ್ಥಿಯೊಬ್ಬ ತನ್ನ ಕಾಲೇಜು ಪ್ರಾಂಶುಪಾಲರ ಮೇಲೆ ಪೆಟ್ರೋಲು ಎರಚಿ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಇಂದೋರ್‌ನ ಬಿಎಂ ಫಾರ್ಮಸಿ ಕಾಲೇಜಿನ 49 ವರ್ಷದ ಮಹಿಳಾ ಪ್ರಾಂಶುಪಾಲರು 80 ಪ್ರತಿಶತ ಸುಟ್ಟಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ವರದಿಗಳ ಪ್ರಕಾರ, 22 ವರ್ಷದ ಅಶುತೋಷ್ ಶ್ರೀವಾಸ್ತವ ಎಂಬ ಕಾಲೇಜಿನ ಮಾಜಿ ವಿದ್ಯಾರ್ಥಿ, ಕಾಲೇಜು ಪ್ರಾಂಶುಪಾಲರಾದ ವಿಮುಕ್ತ ಅವರು ಮನೆಗೆ ಹೊರಡಲು ತಮ್ಮ ಕಾರನ್ನು ಹತ್ತಲು ಮುಂದಾದಾಗ ಅವರನ್ನು ಸಂಪರ್ಕಿಸಿದ್ದಾನೆ. ಮಾರ್ಕ್‌ಶೀಟ್ ವಿಳಂಬದ ಬಗ್ಗೆ ತೀವ್ರ ವಾಗ್ವಾದ ನಡೆಸಿದ ನಂತರ, ಶ್ರೀವಾಸ್ತವ ಪ್ರಾಂಶುಪಾಲರ ಮೇಲೆ ಪೆಟ್ರೋಲ್ ಸುರಿದು ಸಿಗರೇಟ್ ಲೈಟರ್‌ನಿಂದ ಬೆಂಕಿ ಹಚ್ಚಿದ್ದಾನೆ.
ತಕ್ಷಣ ಕಾಲೇಜು ಕಟ್ಟಡದತ್ತ ಓಡಿ ಬಂದ ಪ್ರಾಂಶುಪಾಲರ ಬೆಂಕಿ ನಂದಿಸಿದ ಸಿಬ್ಬಂದಿ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪ್ರಾಂಶುಪಾಲರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.

ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಘಟನೆಯಲ್ಲಿ ಆತನ ಕೈಗೂ ಕೆಲವು ಸುಟ್ಟ ಗಾಯಗಳಾಗಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ಭಗವತ್ ಸಿಂಗ್ ವಿರ್ಡೆ ಹೇಳಿದ್ದಾರೆ. ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 307 (ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಆರೋಪಿಯು ತನ್ನ ಏಳನೇ ಮತ್ತು ಎಂಟನೇ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶ ಜುಲೈ 2022 ರಲ್ಲಿ ಬಂದಿದೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಆತ ಪದೇ ಪದೇ ಅಂಕಪಟ್ಟಿ ಕೇಳಿದರೂ ಅದು ಸಿಗಲಿಲ್ಲ. ವರದಿಗಳ ಪ್ರಕಾರ, ಶ್ರೀವಾಸ್ತವ ಈ ಹಿಂದೆಯೂ ಪ್ರಾಂಶುಪಾಲರಿಗೆ ಕಿರುಕುಳ ನೀಡಿದ್ದ ಮತ್ತು ಈ ಬಗ್ಗೆ ಪ್ರಾಂಶುಪಾಲರು ಪೊಲೀಸರಿಗೆ ದೂರು ನೀಡಿದ್ದರು.
ಕೈಗಳಿಗೆ ಸುಟ್ಟಗಾಯಗಳಿದ್ದರೂ, ಆರೋಪಿ ತನ್ನ ಮೋಟಾರ್‌ಸೈಕಲ್‌ನಲ್ಲಿ ಸುಮಾರು 7 ಕಿಮೀ ದೂರದಲ್ಲಿರುವ ಟಿಂಚಾ ಜಲಪಾತಕ್ಕೆ ತೆರಳಿದ್ದ ಎಂದು ಎಸ್‌ಪಿ ಹೇಳಿದರು. ಆತ ಏನನ್ನಾದರೂ ಮಾಡಿಕೊಳ್ಳುವ ಮೊದಲು ಡಯಲ್-100 ತುರ್ತು ಸೇವೆ ನಿರ್ವಹಿಸುತ್ತಿದ್ದ ಪೊಲೀಸ್ ವೀರ್ ಸಿಂಗ್ ಆತನನ್ನು ರಕ್ಷಿಸಿದ್ದಾನೆ. ಅಶುತೋಷ್ ಪೊಲೀಸ್ ಕಸ್ಟಡಿಯಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ಅವರು ಹೇಳಿದರು. ಪೊಲೀಸರು ಆತನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿದ್ದಾರೆ.
ನಾಲ್ಕು ತಿಂಗಳ ಹಿಂದೆ ಇದೇ ವಿಷಯವಾಗಿ ಕಾಲೇಜು ಅಧ್ಯಾಪಕ ವಿಜಯ್ ಪಟೇಲ್ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದ, ಆತನನ್ನು ಶಸ್ತ್ರಾಸ್ತ್ರ ಕಾಯ್ದೆಯಡಿ ಬಂಧಿಸಲಾಗಿತ್ತು ಎಂದು ವರದಿಗಳು ತಿಳಿಸಿವೆ. ಕೆಲ ವಾರಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಕಾಲೇಜಿನಿಂದ ಅಂಕಪಟ್ಟಿ ಏಕೆ ಕೊಟ್ಟಿಲ್ಲ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಮಣಿಪುರ : ಮತಗಟ್ಟೆ ಮೇಲೆ ಗುಂಡಿನ ದಾಳಿ; ದಿಕ್ಕಾ ಪಾಲಾಗಿ ಓಡಿದ ಮತದಾರರು

4.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement