ಸಾಹಿತಿ-ಯಕ್ಷಗಾನ ಕಲಾವಿದ ಅಂಬಾತನಯ ಮುದ್ರಾಡಿ ನಿಧನ

ಉಡುಪಿ: ಸಾಹಿತಿ, ಕವಿ, ನಾಟಕಕಾರ, ಯಕ್ಷಗಾನ ಪ್ರಸಂಗಕರ್ತ, ಯಕ್ಷಗಾನ ಅರ್ಥಧಾರಿಯಾಗಿದ್ದ ಅಪರೂಪದ ವ್ಯಕ್ತಿತ್ವದ ಅಂಬಾತನಯ ಮುದ್ರಾಡಿ ನಿಧನರಾಗಿದ್ದಾರೆ. ಅವರಿಗೆ 88 ವರ್ಷ ವಯಸ್ಸಾಗಿತ್ತು.
ಅವರು ಮಂಗಳವಾರ ಮುದ್ರಾಡಿಯ ಸ್ವಗೃಹದಲ್ಲಿ ನಿಧನರಾಗಿದ್ದಾರೆ. ಮೃತರು ಮೂವರು ಪುತ್ರರು, ಐವರು ಪುತ್ರಿಯರು ಹಾಗೂ ಅಪಾರ ಬಂಧು ಬಳಗ ಹಾಗೂ ಶಿಷ್ರು ಹಾಗೂ ಅಭಿಮಾನಿಗಳನ್ನು ಅಗಲಿದ್ದಾರೆ.
ಅಂಬಾತನಯ ಮುದ್ರಾಡಿ ಅವರು 1935ರ ಜೂನ್ 4ರಂದು ಜನಿಸಿದರು. ಅವರ ಮೂಲ ಹೆಸರು ಕೇಶವ ಶೆಟ್ಟಿಗಾರ. ಉಡುಪಿ ಜಿಲ್ಲೆ ಹೆಬ್ರಿ ತಾಲೂಕಿನ ಮುದ್ರಾಡಿಯವರಾದ ಅವರ ಶಾಲಾ ವಿದ್ಯಾಭ್ಯಾಸ ಎಂಟನೆಯ ತರಗತಿಯವರೆಗೆ ಮಾತ್ರ. ಆದರೆ ಲೋಕಜ್ಞಾನ ಅಪಾರವಾದದ್ದು. ಸ್ವಆಸಕ್ತಿಯಿಂದ ಅಧ್ಯಯನ ಮಾಡಿ ಅಪಾರ ಜ್ಞಾನಗಳಿಸಿಕೊಂಡಿದ್ದರು. ಮೂವತ್ತಾರು ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ 1993ರಲ್ಲಿ ನಿವೃತ್ತಿರಾಗಿದ್ದರು. ಶಿಕ್ಷಕರಾಗಿದ್ದುಕೊಂಡು ಯಕ್ಷಗಾನ, ನಾಟಕ, ಸಾಹಿತ್ಯ ಹೀಗೆ ಹಲವು ಆಯಾಮಗಳಲ್ಲಿ ಕೃಷಿ ಮಾಡಿದ್ದರು. ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದರು.
ಇತ್ತೀಚೆಗೆ ಉಡುಪಿಯಲ್ಲಿ ನಡೆದ ಪ್ರಥಮ ಯಕ್ಷಗಾನ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದದಲ್ಲಿ ಪಾಲ್ಗೊಂಡಿದ್ದರು. ಇದೇ ಅವರ ಕೊನೆಯ ಕಾರ್ಯಕ್ರಮವಾಗಿತ್ತು. ಈ ಸಂದರ್ಭದಲ್ಲಿ ‘ಯಕ್ಷಗಾನ ಮತ್ತು ಹರಿಕಥೆ ಒಂದು ತೌಲನಿಕ ಅಧ್ಯಯನ’ ಪುಸ್ತಕವನ್ನು ಪ್ರಕಟಿಸಲಾಗಿತ್ತು.
2019ನೇ ಸಾಲಿನ ಯಕ್ಷಗಾನ ಅಕಾಡಮಿಯ ಪ್ರತಿಷ್ಠಿತ ಪಾರ್ಥಿಸುಬ್ಬ ಪ್ರಶಸ್ತಿ, 2008ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿ ಹಾಗೂ ಗೌರವಗಳಿಗೆ ಭಾಜನರಾಗಿದ್ದರು.
ಅಲ್ಲದೆ, ಯಾದವರಾವ್ ಪ್ರಶಸ್ತಿ, ಪೊಲ್ಯ ದೇಜಪ್ಪ ಶೆಟ್ಟಿ ಪ್ರಶಸ್ತಿ, ಪೇಜಾವರ ಶ್ರೀಗಳಿಂದ ರಾಮ ವಿಠಲ ಪ್ರಶಸ್ತಿ, ಪಲಿಮಾರು ಶ್ರೀಗಳಿಂದ ಸಾಹಿತ್ಯ ಸಿರಿ ಪ್ರಶಸ್ತಿ, ಸಾಹಿತ್ಯ ಕಲಾ ವಾಚಸ್ಪತಿ ಪ್ರಶಸ್ತಿ, ಅಖಿಲ ಭಾರತ 74ನೇ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಶ್ರೀ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಪ್ರಮುಖ ಸುದ್ದಿ :-   ಬಸವನಗುಡಿಯ ರೇವಣ್ಣ ನಿವಾಸದಲ್ಲಿ ಸ್ಥಳ ಮಹಜರು ನಡೆಸಿದ ಎಸ್‌ಐಟಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement