ದೆಹಲಿ ಎಂಸಿಡಿ ಸದನದಲ್ಲಿ ಗಲಾಟೆ : ಪ್ಲಾಸ್ಟಿಕ್‌ ಬಾಟಲಿ ಎಸೆದು ಹೊಡೆದಾಡಿಕೊಂಡ ಬಿಜೆಪಿ-ಎಎಪಿ ಕೌನ್ಸಿಲರ್‌ಗಳು, ಸದನದ ಬಾವಿಗೆ ಮತಪೆಟ್ಟಿಗೆ ಎಸೆದರು | ವೀಕ್ಷಿಸಿ

ನವದೆಹಲಿ: ಬುಧವಾರ ದೆಹಲಿ ಮಹಾನಗರಕ್ಕೆ ನೂತನ ಮೇಯರ್ ಹಾಗೂ ಉಪಮೇಯರ್‌ ಆಯ್ಕೆಯಾದ ಕೆಲವು ಗಂಟೆಗಳ ಬಳಿಕ ದೆಹಲಿ ಮುನ್ಸಿಪಲ್‌ ಕಾರ್ಪೋರೇಶನ್‌ (ಎಂಸಿಡಿ)ನ ಸ್ಥಾಯಿ ಸಮಿತಿಯ ಆರು ಸದಸ್ಯರ ಆಯ್ಕೆಗೆ ನಡೆಯುತ್ತಿದ್ದ ಚುನಾವಣೆಯ ವೇಳೆ ದೆಹಲಿ ಮುನ್ಸಿಪಲ್‌ ಕಾರ್ಪೊರೇಶನ್‌ ಸದನ ರಣರಂಗವಾಯಿತು.
ಬುಧವಾರ ರಾತ್ರಿ ಎಎಪಿ ಮತ್ತು ಬಿಜೆಪಿ ಕೌನ್ಸಿಲರ್‌ಗಳು ಸದನದಲ್ಲಿಯೇ ಪರಸ್ಪರ ಹೊಡೆದಾಡಿಕೊಂಡರು. ಎಂಸಿಡಿ ಹೌಸ್‌ನಲ್ಲಿ ಬುಧವಾರ ತಡರಾತ್ರಿಯೂ ಬಿಜೆಪಿ ಹಾಗೂ ಎಎಪಿ ಗದ್ದಲ ಮುಂದುವರಿದಿದ್ದು, ಕೌನ್ಸಿಲರ್‌ಗಳು ಮತಪೆಟ್ಟಿಗೆಗಳನ್ನು ಸದನದ ಬಾವಿಗೆ ಎಸೆದರು ಮತ್ತು ನೀರಿನ ಬಾಟಲಿಗಳನ್ನು ಪರಸ್ಪರ ಮೇಲೆ ತೂರಾಟ ನಡೆಸಿದರು.
ಘೋಷಣೆಗಳ ನಡುವೆ ಎಎಪಿ ಮತ್ತು ಬಿಜೆಪಿ ಸದಸ್ಯರು ಪರಸ್ಪರ ತಳ್ಳಾಟ ನಡೆಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ಬಿಜೆಪಿ ಸದಸ್ಯರು ‘ಹನುಮಾನ್ ಚಾಲೀಸಾ’ ಎಂದು ಪಠಣ ಮಾಡಿ ಪ್ರತಿಭಟನೆ ನಡೆಸಿದರು.
ವೀಡಿಯೊವು ದೆಹಲಿ ಎಂಸಿಡಿ ಮನೆಯೊಳಗೆ ‘ಬಾಟಲ್ ವಾರ್’ ನಡೆಯುತ್ತಿದೆ ಎಂದು ತೋರಿಸಿದೆ. ಮತ್ತೊಂದು ವೀಡಿಯೊದಲ್ಲಿ ಕೌನ್ಸಿಲರ್‌ಗಳು ಅರ್ಧ ತಿಂದ ಸೇಬು ಹಣ್ಣುಗಳನ್ನು ಪರಸ್ಪರರ ಮೇಲೆ ಎಸೆಯುವುದನ್ನು ತೋರಿಸಿದೆ ಮತ್ತು ಕೆಲವರು ಇತರರನ್ನು ತಳ್ಳುವುದನ್ನು ಸಹ ನೋಡಬಹುದು.
ಪರಿಸ್ಥಿತಿ ಗೊಂದಲಮಯವಾಗಿದ್ದ ವೇಳೆ ಕೆಲ ಪಾಲಿಕೆ ಸದಸ್ಯರು ಮತಪೆಟ್ಟಿಗೆಗಳನ್ನು ಬಾವಿಗೆ ಎಸೆಯಲು ಆರಂಭಿಸಿದರು. ಉತ್ತರ ದೆಹಲಿಯ ಮಾಜಿ ಮೇಯರ್ ರಾಜಾ ಇಕ್ಬಾಲ್ ಸಿಂಗ್ ಅವರು, “ನನ್ನ ಬೆನ್ನಿಗೆ ಬಾಟಲಿ ಬಡಿದಿದೆ ಮತ್ತು ಗದ್ದಲದ ಸಮಯದಲ್ಲಿ ಸೇಬುಗಳು ಮತ್ತು ಇತರ ವಸ್ತುಗಳನ್ನು ಎಸೆಯಲಾಯಿತು. ಇದು ಊಹಿಸಲೂ ಅಸಾಧ್ಯವಾಗಿತ್ತು ಎಂದು ತಿಳಿಸಿದ್ದಾರೆ.
ಕೆಲವು ಬಿಜೆಪಿ ಸದಸ್ಯರು, ನಮ್ಮ ಪಕ್ಷದ ಕೆಲವು ಕೌನ್ಸಿಲರ್‌ಗಳ ಮೇಲೆ ವಸ್ತುಗಳನ್ನು ಎಸೆಯಲಾಗಿದೆ ಎಂದು ಆರೋಪಿಸಿದರೆ ಸ್ಥಾಯಿ ಸಮಿತಿ ಚುನಾವಣೆಯನ್ನು ನಿಲ್ಲಿಸಲು ಬಿಜೆಪಿ ಮತಪೆಟ್ಟಿಗೆಗಳನ್ನು ಕದಿಯುತ್ತಿದೆ, ಚುನಾವಣೆಗೆ ಅಡ್ಡಿಪಡಿಸಲು ಸದನದಲ್ಲಿ ಗೂಂಡಾಗಿರಿ ನಡೆಸುತ್ತಿದೆ ಎಂದು ಎಎಪಿ ಆರೋಪಿಸಿದೆ.

ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಇಡೀ ರಾತ್ರಿ ಸದನದಲ್ಲಿ ಗದ್ದಲ ನಡೆಯಿತು. ಬಿಜೆಪಿ ಕೌನ್ಸಿಲರ್‌ಗಳು ಗೂಂಡಾಗಿರಿ ಮತ್ತು ವಿಧ್ವಂಸಕ ಕೃತ್ಯದಲ್ಲಿ ತೊಡಗಿದ್ದರು ಮತ್ತು ಸ್ಥಾಯಿ ಸಮಿತಿಯ ಚುನಾವಣೆಗೆ ಅವಕಾಶ ನೀಡಲಿಲ್ಲ ಎಂದು ಎಎಪಿ ಟ್ವೀಟ್‌ನಲ್ಲಿ ಹೇಳಿದೆ.
ಫ್ರಾಡ್ ಆದ್ಮಿ ಪಕ್ಷವು ಅರಾಜಕತಾವಾದಿಯಾಗಿದೆ. ಗೂಂಡಾಗಿರಿಯೊಂದಿಗೆ ಎಂಸಿಡಿ ಚುನಾವಣೆಗೆ ಅಡ್ಡಿಪಡಿಸಿ, ನಂತರ ಬಿಜೆಪಿಯನ್ನು ದೂಷಿಸುತ್ತದೆ. ಅವರು ಗೂಂಡಾಗಿರಿ ಮಾಡುತ್ತಿದ್ದಾರೆ ಮತ್ತು ಸ್ಥಾಯಿ ಸಮಿತಿಗೆ ಚುನಾವಣೆ ತಡೆಯಲು ಈ ರೀತಿ ಅಡೆತಡೆ ಉಂಟು ಮಾಡುತ್ತಿದ್ದಾರೆ ಎಂದು ಬಿಜೆಪಿಯ ಬೈಜಯಂತ್ ಜಯ್ ಪಾಂಡಾ ಟ್ವೀಟ್ ಮಾಡಿದ್ದಾರೆ.
ಸ್ಥಾಯಿ ಸಮಿತಿ ಸದಸ್ಯರ ಚುನಾವಣೆ ಸಂದರ್ಭದಲ್ಲಿ ಗೌಪ್ಯ ಮತದಾನದ ವೇಳೆ ಕೌನ್ಸಿಲರ್‌ಗಳು ಮೊಬೈಲ್ ಮೂಲಕ ಮತಯಂತ್ರಗಳ ಛಾಯಾಚಿತ್ರ ತೆಗೆಯುತ್ತಿದ್ದು, ಇದು ರಹಸ್ಯ ಮತದಾನದ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಆರೋಪಿಸಿದಾಗ ಗೊಂದಲ ಉಂಟಾಯಿತು. ಈ ಮತಗಳನ್ನು ತಿರಸ್ಕರಿಸಿ ಹೊಸದಾಗಿ ಚುನಾವಣೆ ನಡೆಸುವಂತೆ ಬಿಜೆಪಿ ಒತ್ತಾಯಿಸಿತು.

ಶೆಲ್ಲಿ ಒಬೆರಾಯ್ ಸದನದೊಳಗೆ ಕಾರ್ಪೊರೇಟರ್‌ಗಳಿಗೆ ಮತದಾನದ ವೇಳೆ ಮೊಬೈಲ್‌ ಬಳಕೆಗೆ ಅವಕಾಶ ನೀಡಿದರು ಎಂದು ಬಿಜೆಪಿ ಆರೋಪಿಸಿದೆ, ಅಲ್ಲಿ ಹಲವಾರು ಕಾರ್ಪೊರೇಟರ್‌ಗಳು ತಮ್ಮ ಮತಪತ್ರಗಳ ಛಾಯಾಚಿತ್ರಗಳನ್ನು ತೆಗೆದುಕೊಳ್ಳುತ್ತಿದ್ದರು. ಇದನ್ನು ನಾವು ಪ್ರತಿಭಟಿಸಿದೆವು ಎಂದು ಬಿಜೆಪಿ ಹೇಳಿಕೊಂಡಿದೆ. ನಂತರ ಬಿಜೆಪಿ ಕೌನ್ಸಿಲರ್‌ಗಳು ಸದನದ ಬಾವಿಗೆ ನುಗ್ಗಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಘೋಷಣೆಗಳನ್ನು ಕೂಗಿದರು.
“ಮೇಯರ್ ಮತದಾನದ ವೇಳೆ ಮೊಬೈಲ್‌ ಬಳಕೆಗೆ ಅವಕಾಶ ಮಾಡಿಕೊಟ್ಟಿದ್ದರಿಂದ ಸದಸ್ಯರು ಮೊದಲೇ ಬೂತ್‌ಗೆ ಮೊಬೈಲ್ ಫೋನ್ ತೆಗೆದುಕೊಂಡು ಹೋಗಿದ್ದಾರೆ. ಫೋಟೋ ತೆಗೆಯುತ್ತಿದ್ದರು. ಇದು ನಿಯಮದ ಉಲ್ಲಂಘನೆಯಾಗಿದ್ದರಿಂದ ಹೊಸದಾಗಿ ಚುನಾವಣೆ ನಡೆಸುವಂತೆ ನಾವು ಅವರನ್ನು ಒತ್ತಾಯಿಸುತ್ತಿದ್ದೇವೆ. ನಾವು ಪ್ರತಿಭಟಿಸಿದ ನಂತರವೂ ಅವರು (ಮೇಯರ್) ಹೊಸದಾಗಿ ಮತದಾನ ಮಾಡಲು ನಿರಾಕರಿಸಿದರು ಎಂದು ಬಿಜೆಪಿ ಕೌನ್ಸಿಲರ್ ಶಿಖಾ ರೈ ಆರೋಪಿಸಿದರು.

ತಡರಾತ್ರಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಎಎಪಿ ಶಾಸಕ ಸಂಜಯ್ ಸಿಂಗ್, ಮೇಯರ್‌ ಶೆಲ್ಲಿ ಒಬೆರಾಯ್ ಜೊತೆ ಬಿಜೆಪಿ ಗೂಂಡಾಗಿರಿ ನಡೆಸುತ್ತಿದೆ ಎಂದು ಆರೋಪಿಸಿದರು.
ಬುಧವಾರ, ದೆಹಲಿ ಮೇಯರ್ ಆಗಿ ಆಯ್ಕೆಯಾದ ನಂತರ, ಎಂಸಿಡಿ (MCD)ಯ ಸ್ಥಾಯಿ ಸಮಿತಿಯ ಆರು ಸದಸ್ಯರನ್ನು ಆಯ್ಕೆ ಮಾಡಲು ಚುನಾವಣೆಯನ್ನು ನಡೆಸುವ ಪ್ರಕ್ರಿಯೆಯಲ್ಲಿ ಕೆಲವು ಬಿಜೆಪಿ ಕೌನ್ಸಿಲರ್‌ಗಳು ತಮ್ಮ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದರು ಎಂದು ಮೇಯರ್‌ ಶೆಲ್ಲಿ ಒಬೆರಾಯ್ ಆರೋಪಿಸಿದ್ದಾರೆ.
ಪರಸ್ಪರ ಪ್ಲಾಸ್ಟಿಕ್‌ ಬಾಟಲಿ ಎಸೆದು ಹೋಡೆದಾಡಿದ ಘಟನೆ ಬುಧವಾರ ರಾತ್ರಿ 11 ಗಂಟೆ ಸುಮಾರಿಗೆ ನಡೆದಿದೆ. ಹೊಸದಾಗಿ ಚುನಾಯಿತರಾದ ಮೇಯರ್ ಕಲಾಪವನ್ನು ಮುಂದೂಡಿದ ಸಮಯದಲ್ಲಿ ಇದು ಸಂಭವಿಸಿದೆ.
ಇದಕ್ಕೂ ಮೊದಲು ನಡೆದ ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಯಲ್ಲಿ ಎಎಪಿಯ ಶೆಲ್ಲಿ ಒಬೆರಾಯ್ ವಿಜಯಶಾಲಿಯಾಗಿ ಹೊರಹೊಮ್ಮಿದರು. ಅವರು ಬಿಜೆಪಿಯ ರೇಖಾ ಗುಪ್ತಾ ಅವರನ್ನು 34 ಮತಗಳ ಅಂತರದಿಂದ ಸೋಲಿಸಿದರು. ಉಪಮೇಯರ್ ಆಗಿ ಮೊಹಮ್ಮದ್‌ ಇಕ್ಬಾಲ್‌ ಆಯ್ಕೆಯಾದರು. ಇದಾದ ಒಂದು ಗಂಟೆಯ ನಂತರ ಅಧಿವೇಶನವು ಸಂಜೆ 6:15 ರ ಸುಮಾರಿಗೆ ಪುನರಾರಂಭವಾಯಿತು ಮತ್ತು MCD ಪ್ಯಾನೆಲ್‌ನ ಆರು ಸದಸ್ಯರನ್ನು ಆಯ್ಕೆ ಮಾಡುವ ಪ್ರಕ್ರಿಯೆಯು ಪ್ರಾರಂಭವಾಯಿತು. ಈ ವೇಳೆ ಎಎಪಿ ಹಾಗೂ ಬಿಜೆಪಿ ಸದಸ್ಯರ ನಡುವೆ ಗದ್ದಲ ಆರಂಭವಾಯಿತು.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement