ಬಿಜೆಪಿ ಶಾಸಕರ ಪುತ್ರನ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ : ಸಿಎಂ ಬೊಮ್ಮಾಯಿ ಭರವಸೆ

ಬೆಂಗಳೂರು: ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ ಮಾಡಾಳ ವಿರುದ್ಧದ ಭ್ರಷ್ಟಾಚಾರ ಆರೋಪದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. 40 ಲಕ್ಷ ರೂ.ಗಳನ್ನು ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಶಾಂತ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸರ್ಕಾರದ ಭ್ರಷ್ಟಾಚಾರ ನಿಗ್ರಹ ದಳವಾದ ಲೋಕಾಯುಕ್ತವು ಈ ಬಗ್ಗೆ ಸ್ವತಂತ್ರ ಮತ್ತು ನಿಷ್ಪಕ್ಷಪಾತ ತನಿಖೆ ನಡೆಸುತ್ತದೆ. ಲೋಕಾಯುಕ್ತ ಸಂಸ್ಥೆ ಸ್ವಾಯತ್ತ ಸಂಸ್ಥೆಯಾಗಿದ್ದು, ಹಣದ ಮೂಲ ಹಾಗೂ ಪ್ರಕರಣದಲ್ಲಿ ಭಾಗಿಯಾಗಿರುವ ಇತರರನ್ನು ವಿಚಾರಣೆ ನಡೆಸಲಿದೆ. ಯಾರೇ ತಪ್ಪಿತಸ್ಥರು ಎಂದು ಕಂಡುಬಂದರೂ ಶಿಕ್ಷೆಗೆ ಗುರಿಪಡಿಸಲಾಗುವುದು ಎಂದು ಹೇಳಿದರು.
ಇದಕ್ಕೂ ಮುನ್ನ ಬಿಜೆಪಿಯ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರು ಕರ್ನಾಟಕ ಸೋಪ್ಸ್ ಅಂಡ್ ಡಿಟರ್ಜೆಂಟ್ಸ್ ಲಿಮಿಟೆಡ್ (ಕೆಎಸ್‌ಡಿಎಲ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಬಸವರಾಜ ಬೊಮ್ಮಾಯಿ ಮಾತನಾಡಿ, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಲೋಕಾಯುಕ್ತವನ್ನು ಮುಚ್ಚಲಾಗಿತ್ತು ಆದರೆ ರಾಜ್ಯದಲ್ಲಿನ ಭ್ರಷ್ಟಾಚಾರವನ್ನು ಸಮಗ್ರವಾಗಿ ತಡೆಯುವ ಉದ್ದೇಶದಿಂದ ಅದನ್ನು ನಮ್ಮ ಸರ್ಕಾರದ ಅವಧಿಯಲ್ಲಿ ಪುನಃ ಪ್ರಾರಂಭಿಸಲಾಯಿತು. ಲೋಕಾಯುಕ್ತವನ್ನು ದುರ್ಬಲಗೊಳಿಸಿದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಇಂತಹ ಹಲವು ಪ್ರಕರಣಗಳು ಮುಚ್ಚಿಹೋಗಿರುವ ಸಾಧ್ಯತೆ ಇದೆ ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ...| ಹೆಗಲ ಮೇಲೆ ಕೈಹಾಕಿದ ಕಾಂಗ್ರೆಸ್​ ಮುಖಂಡನಿಗೆ ಕಪಾಳಕ್ಕೆ ಹೊಡೆದ ಡಿಸಿಎಂ ಡಿ.ಕೆ.ಶಿವಕುಮಾರ

ಸರ್ಕಾರವು ಘಟನೆಯನ್ನು ಮುಚ್ಚಿಹಾಕುವ ಸಾಧ್ಯತೆಯನ್ನು ತಳ್ಳಿಹಾಕಿದ ಅವರು, ಹಿಂದಿನ ಸರ್ಕಾರದಲ್ಲಿ ಕಾಂಗ್ರೆಸ್‌ ಸಚಿವರು ಮತ್ತು ಶಾಸಕರ ವಿರುದ್ಧ 59 ಆರೋಪಗಳಿವೆ. ಆದರೆ ಆ ಸಮಯದಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಇದ್ದ ಕಾರಣ ಅದನ್ನು ಮುಚ್ಚಿಹಾಕಲಾಗಿದೆ. ಒಂದೊಮ್ಮೆ ಲೋಕಾಯುಕ್ತರಿಂದ ವಿಚಾರಣೆ ನಡೆದರೆ ಸತ್ಯಾಂಶ ಹೊರಬೀಳಲಿದೆ ಎಂದರು.
ಮಾಜಿ ಸಚಿವ ಕೆ.ಜೆ.ಜಾರ್ಜ್ ಅವರು ಎಸಿಬಿಯನ್ನು ಮುಂದುವರಿಸಲು ಒಲವು ತೋರಿದ್ದು, ಭ್ರಷ್ಟಾಚಾರದ ಪರ ಯಾರಿದ್ದಾರೆ ಎಂಬುದು ಇದರಿಂದ ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷ ಸ್ವಚ್ಛ ಪಕ್ಷ ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ, ಕಾಂಗ್ರೆಸ್ ಸಚಿವರ ವಿರುದ್ಧ ಹಲವಾರು ಪ್ರಕರಣ ದಾಖಲಾಗಿದೆ. ಈಗ ಎಲ್ಲವನ್ನೂ ಲೋಕಾಯುಕ್ತರು ವಿಚಾರಣೆ ನಡೆಸುತ್ತಿದ್ದಾರೆ ಎಂದರು.

ಅಬಕಾರಿ ಮತ್ತು ಕಾರ್ಮಿಕ ಇಲಾಖೆಗಳಲ್ಲಿ ನಡೆದಿದೆ ಎನ್ನಲಾದ ಹಗರಣಗಳ ಕುರಿತು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರ ಆರೋಪಕ್ಕೆ ಉತ್ತರಿಸಿದ ಬೊಮ್ಮಾಯಿ, ಆ ಪ್ರಕರಣಗಳನ್ನು ಲೋಕಾಯುಕ್ತ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ರಾಜ್ಯದ ಬಿಜೆಪಿ ಸರ್ಕಾರವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಎಸಿಬಿಯನ್ನು ರದ್ದುಗೊಳಿಸಿ ಅದರ ಎಲ್ಲಾ ಬಾಕಿ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಿತು. 2015ರಲ್ಲಿ ಹಾಲಿ ಲೋಕಾಯುಕ್ತರ ಪುತ್ರನ ವಿರುದ್ಧ ಸುಲಿಗೆ ಆರೋಪದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಸಿಬಿ ರಚಿಸಿತ್ತು.

ಪ್ರಮುಖ ಸುದ್ದಿ :-   ದಾಂಡೇಲಿ : ಗಂಡ ಹೆಂಡತಿಯ ಜಗಳ ; ಕೋಪದಲ್ಲಿ ಮಗುವನ್ನೇ ಮೊಸಳೆಗಳಿರುವ ನಾಲೆಗೆ ಎಸೆದ ತಾಯಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement