ನಿರೀಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೇ ಮಾಡಾಳು ಶಾಸಕ ವಿರೂಪಾಕ್ಷಪ್ಪ ಸಾರ್ವಜನಿಕರ ಮುಂದೆ ಪ್ರತ್ಯಕ್ಷ

ದಾವಣಗೆರೆ : ಕೋರ್ಟ್ ನಿಂದ ನಿರೀಕ್ಷಣಾ ಜಾಮೀನು ಸಿಕ್ಕ ಬೆನ್ನಲ್ಲೇ ದಾವಣಗೆರೆಯ  ಚನ್ನೇಶಪುರದ ತಮ್ಮ ನಿವಾಸದ ಬಳಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಪ್ರತ್ಯಕ್ಷರಾಗಿದ್ದಾರೆ.
ಆರು ದಿನಗಳಿಂದ ಅಜ್ಞಾತ ಸ್ಥಳದಲ್ಲಿದ್ದ ಅವರು ತಮ್ಮೂರು ಚನ್ನೇಶಪುರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲಿ ಅವರನ್ನು ಬೆಂಬಲಿಗರು ತಮಟೆ ಬಾರಿಸಿ, ಹಾರ ಹಾಕಿ ಸ್ವಾಗತಿಸಿ ಮೆರವಣಿಗೆ ಮಾಡಿ ಕರೆದುಕೊಂಡು ಬಂದಿದ್ದಾರೆ. ನಂತರ ವಿರೂಪಾಕ್ಷಪ್ಪ ಮಹದೇವಮ್ಮ ದೇವಿ ದರ್ಶನ ಪಡೆದು ನಂತರ ಈಶ್ವರನ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಲೋಕಾಯುಕ್ತ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಮಾಡಾಳು ವಿರೂಪಾಕ್ಷಪ್ಪ, ಲೋಕಾಯುಕ್ತ ದಾಳಿ ನಡೆಸಿದ ವೇಳೆ ಮನೆಯಲ್ಲಿ ಸಿಕ್ಕಿರುವ ನಗದು ನಾವು ಸಂಪಾದಿಸಿದ ಹಣ. ಅದಕ್ಕೆ ದಾಖಲೆ ಒದಗಿಸುತ್ತೇವೆ ಎಂದು ತಿಳಿಸಿದ್ದಾರೆ.
ನನ್ನ ವಿರುದ್ಧ ಆರೋಪ ಬಂದಿದ್ದರಿಂದ ನಾನು ಜನರ ಸಂಪರ್ಕಕ್ಕೆ ಬಂದಿರಲಿಲ್ಲ. ಆದರೆ, ನಾನು ಎಲ್ಲೂ ಓಡಿಹೋಗಿರಲಿಲ್ಲ ಹೇಳಿದ್ದಾರೆ.

ಚನ್ನಗಿರಿ ತಾಲೂಕು ಅಡಕೆ ನಾಡು, ಅಡಕೆ ಬೆಳೆಗಾರರ ಮನೆಯಲ್ಲಿ ಕನಿಷ್ಠ ನಾಲ್ಕೈದು ಕೋಟಿ ರೂ. ಹಣ ಇರುತ್ತದೆ. ನಮ್ಮ ಕುಟುಂಬಕ್ಕೆ ಸೇರಿದ 125 ಎಕರೆ ಅಡಕೆ ತೋಟವಿದೆ. 2 ಕ್ರಷರ್ ಇದೆ, ಅಡಕೆ ಮಂಡಿಯಿದೆ ಎಂದು ಅವರು ಹೇಳಿದರು. ಅಡಕೆ ಹಾಗೂ ಕ್ರಷರ್‌ ಇಂದ ಬಂದ ಹಣವನ್ನು ಮನೆಯಲ್ಲಿಟ್ಟಿದ್ದೆವು. ಲೋಕಾಯುಕ್ತ ದಾಳಿ ವೇಳೆ ಈ ಹಣ ಅವರಿಗೆ ಸಿಕ್ಕಿದೆ. ಅದನ್ನು ಅವರು ವಶಕ್ಕೆ ಪಡೆದಿದ್ದಾರೆ. ಆ ಹಣದ ಬಗ್ಗೆ ದಾಖಲೆಯಿದ್ದು, ಸೂಕ್ತ ದಾಖಲೆಗಳನ್ನು ನೀಡಿ ಹಣವನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.ಲೋಕಾಯುಕ್ತಕ್ಕೆ ದೂರು ನೀಡಿದ್ದ ಶ್ರೇಯಸ್ ಕಶ್ಯಪ್​ ಎಂಬವರ ಹೆಸರೇ ನನಗೆ ಗೊತ್ತಿಲ್ಲ ಎಂದರು.

ಪ್ರಮುಖ ಸುದ್ದಿ :-   ಪೋಕ್ಸೋ ಪ್ರಕರಣ : ಮುರುಘಾ ಶರಣರ ಜಾಮೀನು ರದ್ದುಗೊಳಿಸಿದ ಸುಪ್ರೀಂಕೋರ್ಟ್

ಯಾರೋ ದುರುದ್ದೇಶದಿಂದ ಈ ಕೆಲಸ ಮಾಡಿದ್ದಾರೆ. ಹಿಂದಿನ ಚುನಾವಣೆಯಲ್ಲಿ ನನ್ನ ಮೇಲೆ ಆದಾಯ ತೆರಿಗೆ ಇಲಾಖೆ ರೇಡ್ ಮಾಡಿಸಿದ್ದರು. ಅದಕ್ಕೂ ಹಿಂದಿನ ಚುನಾವಣೆಯಲ್ಲಿ ಇನ್ನೇನೋ ಮಾಡಿಸಿದ್ದರು ಈಗ ಲೋಕಾಯುಕ್ತ ದಾಳಿ ಮಾಡಿಸಿದ್ದಾರೆ ಎಂದು ಹೇಳಿದ್ದಾರೆ.

ಕೆಎಸ್​ಡಿಎಲ್​ ಅಧ್ಯಕ್ಷನಾಗಿ ನಾನು ನಿಯಮಬಾಹಿರ ಕೆಲಸ ಮಾಡಿಲ್ಲ. ಪಕ್ಷ ತಾಯಿಯಿದ್ದಂತೆ, ಪಕ್ಷಕ್ಕೆ ಎಂದೂ ದ್ರೋಹ ಮಾಡುವುದಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಷ್ಪಕ್ಷಪಾತ ತನಿಖೆ ಮಾಡುವುದಾಗಿ ಹೇಳಿದ್ದಾರೆ. ಆಡಳಿತ ಪಕ್ಷದ ಶಾಸಕನ ಮನೆ ಮೇಲೆ ದಾಳಿ ಇತಿಹಾಸದಲ್ಲೇ ಮೊದಲು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನನ್ನ ಬಗ್ಗೆ ಗೊತ್ತಿದೆ. ನಾನು ಯಾವುದೇ ರೀತಿಯ ತಪ್ಪು ಮಾಡಿಲ್ಲ ಎಂದು ಅವರು ಹೇಳಿದ್ದಾರೆ. ಹಾಗೂ ತನಿಖಾಧಿಕಾರಿ ಮುಂದೆ ಹಾಜರಾಗುತ್ತೇನೆ ಎಂದು ಅವರು ಹೇಳಿದ್ದಾರೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement