ಶಾಸಕ ಮಾಡಾಳು ವಿರೂಪಾಕ್ಷಪ್ಪಗೆ ನಿರೀಕ್ಷಣಾ ಜಾಮೀನು: ಸಿಜೆಐಗೆ ಪತ್ರ ಬರೆದ ವಕೀಲರ ಸಂಘ

ಬೆಂಗಳೂರು: ಲಂಚ ಪ್ರಕರಣದ ಆರೋಪಿ ಚನ್ನಗಿರಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ (Virupakshappa Madal) ಅವರಿಗೆ ನ್ಯಾಯಾಲಯ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಿರುವ ಪ್ರಕ್ರಿಯೆ ಬಗ್ಗೆ ಬೆಂಗಳೂರು ವಕೀಲರ ಸಂಘ ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಬಗ್ಗೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ ಅವರಿಗೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್‌ ರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ರವಿ ಮತ್ತು ಖಜಾಂಚಿ ಎಂ.ಟಿ.ಹರೀಶ್‌ ಅವರಿಗೆ ಪತ್ರ ಬರೆದಿದ್ದು, ಮಾಡಾಳು ವಿರೂಪಾಕ್ಷಪ್ಪ ಪ್ರಕರಣದ ಜಾಮೀನು ಅರ್ಜಿಯನ್ನು ಒಂದೇ ದಿನಕ್ಕೆ ಕೈಗೆತ್ತಿಕೊಂಡಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.
ಪತ್ರದಲ್ಲಿ, ನಿರೀಕ್ಷಣಾ ಜಾಮೀನಿನಂತಹ ಪ್ರಕರಣಗಳು ದಾಖಲಾದರೆ, ಅವುಗಳ ವಿಚಾರಣೆ ಒಂದು ವಾರ ಸಮಯ ತೆಗೆದುಕೊಳ್ಳುತ್ತವೆ ಎಂಬುದು ಕರ್ನಾಟಕದ ಹೈಕೋರ್ಟ್‌ನಲ್ಲಿ ಸಾಮಾನ್ಯ ಅಭ್ಯಾಸವಾಗಿದೆ. ಆದರೆ, ದೊಡ್ಡವರ ಪ್ರಕರಣಗಳನ್ನು ಮಾತ್ರ ಒಂದೇ ದಿನದೊಳಗೆ ಮಾನ್ಯ ಮಾಡಲಾಗುತ್ತಿದೆ. ಈ ಪದ್ಧತಿಯಿಂದ ಸಾಮಾನ್ಯ ಜನರು ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅಲ್ಲದೇ, ಶ್ರೀಸಾಮಾನ್ಯರ ವಿಷಯದಲ್ಲೂ ಅನುಸರಿಸುವಂತಾಗಬೇಕು. ಸದ್ಯ ಹೈಕೋರ್ಟ್‍ನಲ್ಲಿ ವಿಚಾರಣೆಗೆ ಬಾಕಿ ಇರುವ ಎಲ್ಲ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಒಂದೇ ದಿನದಲ್ಲಿ ನ್ಯಾಯಪೀಠದ ಎದುರು ವಿಚಾರಣೆಗೆ ನಿಗದಿಯಾಗುವಂತೆ ಮಾಡಲು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ರಿಜಿಸ್ಟ್ರಾರ್ ಕಚೇರಿಗೆ ನಿರ್ದೇಶಿಸುವಂತಾಗಬೇಕು ಹಾಗೂ ಸಾಮಾನ್ಯ ಜನರನ್ನೂ ವಿಐಪಿಯಂತೆ ನೋಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ, ನ್ಯಾಯಾಲಯವು ಎಲ್ಲರಿಗೂ ಸಮಾನವಾಗಿರಬೇಕು ಮತ್ತು ಯಾವುದೇ ವಿಐಪಿ ಕೂಡ ನ್ಯಾಯಾಲಯದ ಎದುರು ಸಾಮಾನ್ಯರಂತೆ ಕಾಯಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಪ್ರಮುಖ ಸುದ್ದಿ :-   ಹುಬ್ಬಳ್ಳಿ : ಅಂಜಲಿ ಹತ್ಯೆ ಆರೋಪಿ ಬಂಧನ ; ಈತನ ಬಂಧನವಾಗಿದ್ದೇ ರೋಚಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement