ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲಿಂ ರಾಜ: ಕಾಂಗ್ರೆಸ್ ಮುಖಂಡನ ಹೇಳಿಕೆಗೆ ಆಕ್ರೋಶ

ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್​ ಆಕಾಂಕ್ಷಿ ಮಿಥುನ್ ರೈ ನೀಡಿರುವ ಹೇಳಿಕೆ ಈಗ ಬಾರೀ ಚರ್ಚೆಗೆ ಗ್ರಾಸವಾಗಿದೆ. ಹಾಗೂ ಆಕ್ರೋಶವೂ ವ್ಯಕ್ತವಾಗಿದೆ.
ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಪುತ್ತಿಗೆಯಲ್ಲಿ ನಡೆದ ನಮ್ಮೂರ ಮಸೀದಿ ನೋಡ ಬನ್ನಿ’ ಕಾರ್ಯಕ್ರಮದಲ್ಲಿ ಮಾತನಾಡಿರುವ ಮಿಥುನ್ ರೈ, ಉಡುಪಿ ಮಠಕ್ಕೆ ಜಾಗ ಕೊಟ್ಟಿದ್ದು ಮುಸಲ್ಮಾನ ರಾಜರು ಎಂದು ಹೇಳುವ ಮೂಲಕ ವಿವಾದ ಸೃಷ್ಟಿಸಿದ್ದಾರೆ. ದಕ್ಷಿಣ ಕನ್ನಡ ಸೌಹಾರ್ದತೆಯನ್ನು ಹೊಂದಿರುವ ಜಿಲ್ಲೆ. ಬಪ್ಪನಾಡು ದುರ್ಗಾಪರಮೇಶ್ವರಿ ದೇವರು ಒಲಿದಿದ್ದು ಬಪ್ಪ ಬ್ಯಾರಿಗೆ. ತುಳುನಾಡಿನಲ್ಲಿ ಪವಾಡ ದೈವ ಕೊರಗಜ್ಜ ಕಟ್ಟೆಯೊಂದಕ್ಕೆ ಮುಸ್ಲಿಂ ವ್ಯಕ್ತಿಯಿಂದ ಪೂಜೆ ನಡೆಯುತ್ತದೆ. ಅಲ್ಲದೆ ಉಡುಪಿ ಮಠಕ್ಕೆ ಜಾಗ ನೀಡಿದವರು ಮುಸ್ಲಿಂ ರಾಜರು ಎಂದು ಅವರು ಹೇಳಿದ್ದಾರೆ.

ಮಿಥುನ್ ರೈ ಅವರ ಹೇಳಿಕೆಗೆ ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಆಪ್ತ ಮಿಥುನ್ ರೈ ಕೊಟ್ಟ ಹೇಳಿಕೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಮಿಥುನ್​ ರೈ ಕಾಂಗ್ರೆಸ್​ ಯುವ ನಾಯಕನಾಗಿದ್ದು, 2019ರ ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಿಂದ ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ನಳೀನಕುಮಾರ ಕಟೀಲು​ ವಿರುದ್ಧ ಸ್ಪರ್ಧಿಸಿ ಸೋತಿದ್ದರು.
ಮಿಥುನ್ ರೈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಶಾಸಕ ರಘುಪತಿ ಭಟ್, ಉಡುಪಿ ಮಠಕ್ಕೆ ಮುಸ್ಲಿಂ ರಾಜರು ಜಾಗ ನೀಡಿಲ್ಲ. ಅನಂತೇಶ್ವರ ದೇವಾಲಯದಲ್ಲಿ ಶ್ರೀಕೃಷ್ಣ ಮಠ ನಿರ್ಮಾಣವಾಗಿದೆ. ದೇವಾಲಯಕ್ಕೆ ರಾಮ ಭೋಜ ಎಂಬವರು ಜಾಗ ಕೊಟ್ಟಿದ್ದಾರೆ. ಇದರ ಬಗ್ಗೆ ದಾಖಲೆ ಇದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ರಾಜ್ಯದ ಹಲವೆಡೆ ಮಳೆ : ವಿಜಯಪುರದಲ್ಲಿ ಐತಿಹಾಸಿಕ ಸ್ಮಾರಕ ಮೆಹತರ್ ಮಹಲಿನ ಮೀನಾರ್ ಮೇಲ್ತುದಿಗೆ ಹಾನಿ, ಕುಷ್ಟಗಿಯಲ್ಲಿ ಸಿಡಿಲಿಗೆ ರೈತ ಸಾವು

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement