ಕೆಲ ಹಾಲಿ ಶಾಸಕರಿಗೆ ಟಿಕೆಟ್‌ ತಪ್ಪಬಹುದು ಎಂಬ ಬಿಎಸ್‌ವೈ ಹೇಳಿಕೆಯೂ…ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳ ವಲಯದಲ್ಲಿ ಎದ್ದ ಬಿರುಗಾಳಿಯೂ…

ಬೆಂಗಳೂರು: ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಕೈ ತಪ್ಪಬಹುದು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಚುನಾವಣೆ ಘೋಷಣೆಗೆ ಕೆಲವೇ ದಿನಗಳಿರುವಾಗ ಹೇಳಿರುವುದು ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳಿಗೆ ಭಯ ಶುರುವಾಗಿದೆ. ಬಿಜೆಪಿ ರಾಷ್ಟ್ರೀಯ ಸಂಸದೀಯ ಮಂಡಳಿ ಹಾಗೂ ಚುನಾವಣಾ ಸಮಿತಿಯ ಸದಸ್ಯರೂ ಆಗಿರುವ ಯಡಿಯೂರಪ್ಪ ಚುನಾವಣಾ ಸಮಯದಲ್ಲಿ ಈ ರೀತಿಯ ಹೇಳಿಕೆ ನೀಡಿರುವುದು ಈಗ ಬಿಜೆಪಿಯಲ್ಲಿ ಚರ್ಚೆ ಆರಂಭವಾಗಿದೆ.
ಸಾಮಾನ್ಯವಾಗಿ ಯಡಿಯೂರಪ್ಪ ಹಾಗಲ್ಲ ಪ್ರಚಾರಕ್ಕಾಗಿ ಹೇಳಿಕೆ ನೀಡುವ ರಾಜಕಾರಣಿಯಲ್ಲ. ಮತ್ತು ಸಖಾಸುಮ್ಮನೆ ಹೇಳುವವರೂ ಅಲ್ಲ, ಅವರು ಯಾವುದೇ ಹೇಳಿಕೆ ನೀಡಿದರೂ ಅದರ ಹಿಂದೆ ಗಂಭೀರತೆ ಇರುತ್ತದೆ. ಅದೂ ಕೂಡ ಇಷ್ಟು ದಿನ ಸುಮ್ಮನಿದ್ದವರು ಈಗ ಚುನಾವಣೆ ಸಮೀಪ ಬಂದಾಗ ಅವರು ನೀಡಿರುವ ಈ ಹೇಳಿಕೆ ಬಿಜೆಪಿ ಟಿಕೆಟ್‌ ಆಕಾಂಕ್ಷಿಗಳು ಹಾಗೂ ಶಾಸಕರ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಹಾಲಿ ನಾಲ್ವರಿಂದ ಆರು ಶಾಸಕರಿಗೆ ಟಿಕೆಟ್ ಕೈ ತಪ್ಪುವ ಸಾಧ್ಯತೆ ಇದೆ ಎಂದು ಏಕಾಏಕಿ ಹೇಳಿರುವುದು ಚರ್ಚೆಗೆ ಗ್ರಾಸವಾಗಿದ್ದು, ಆ ಶಾಸಕರು ಯಾರು ಎಂಬ ಯಕ್ಷ ಪ್ರಶ್ನೆ ಹಲವರನ್ನು ಕಾಡಿದರೆ, ಇದು ಕೇವಲ ಐದಾರು ಶಾಸಕರಿಗೆ ಸೀಮಿತವೋ ಅಥವಾ ಗುಜರಾತ್‌ ಮಾದರಿಯಲ್ಲಿ ಇನ್ನೂ ಹೆಚ್ಚಿನ ಜನರಿಗೆ ಟಿಕೆಟ್‌ ಕೈತಪ್ಪುವ ಸಂಭವವಿದೆಯೋ ಎಂಬ ಆತಂಕ ಈಗ ಬಿಜೆಪಿಯಲ್ಲಿ ಈ ರಾಜಕೀಯ ಬಿರುಗಾಳಿಗೆ ಕಾರಣವಾಗಿದೆ.

ಪ್ರಮುಖ ಸುದ್ದಿ :-   ಗದಗ: ನಗರಸಭೆ ಉಪಾಧ್ಯಕ್ಷೆ ಪುತ್ರ ಸೇರಿ ನಾಲ್ವರ ಭೀಕರ ಹತ್ಯೆ

ಈಗಾಗಲೇ ಬಿಜೆಪಿಯಲ್ಲಿ 75 ವರ್ಷ ದಾಟಿದವರಿಗೆ ಟಿಕೆಟ್ ಕೊಡದ ಪರಿಪಾಠ ಕಳೆದ ಕೆಲ ವರ್ಷಗಳಿಂದ ನಡೆದುಕೊಂಡು ಬಂದಿದೆ.. ಇದನ್ನು ದೇಶದ ಎಲ್ಲ ರಾಜಗಳಲ್ಲಿಯೂ ಪರಿಪಾಲಿಸಿಕೊಂಡು ಬರಲಾಗುತ್ತಿದೆ. ವಿಶೇಷ ಸಂದರ್ಭಗಳಲ್ಲಿ ಮಾತ್ರ ಆ ವಯಸ್ಸು ಮೀರಿದವರಿಗೆ ನೀಡಲಾಗುತ್ತಿದೆ. ಕಳೆದ ವರ್ಷ ಯಡಿಯೂರಪ್ಪ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯಲೂ ಕೂಡ ಇದೇ ವಯಸ್ಸಿನ ಮಾನದಂಡ ಕಾರಣ ಎಂದು ಹೇಳಲಾಗಿತ್ತು. ಹೀಗಾಗಿ ಈಗ ಹಿರಿಯ ನಾಯಕ ಯಡಿಯೂರಪ್ಪ ಅವರ ಈ ಹೇಳಿಕೆ ಬಹಳ ಅರ್ಥ ಪಡೆದುಕೊಂಡಿದೆ.
ಆಡಳಿತಾರೂಢ ಬಿಜೆಪಿಯ ಕೆಲವು ಶಾಸಕರು ಕ್ಷೇತ್ರಗಳಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು, ಸೋಲುವ ಸಂಭವವಿದೆ ಎಂದು ಪಕ್ಷದ ಆಂತರಿಕ ಸಮೀಕ್ಷೆಗಳು ಹೇಳಿದೆ ಎನ್ನಲಾಗಿದೆ. ಅದರ ಹಿನ್ನೆಲೆಯಲ್ಲಿ ಯಡಿಯೂರಪ್ಪ ಸರಿಯಾದ ಸಮಯಕ್ಕೆ ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಎಲ್ಲೆಲ್ಲ ಪಕ್ಷಕ್ಕೆ ನೆಗೆಟಿವ್‌ ಇದೆಯೋ ಆ ಕ್ಷೇತ್ರಗಳಲ್ಲಿ ಹಾಲಿ ಶಾಸಕರಿದ್ದರೂ ಅವರನ್ನು ಬದಲಾಯಿಸಿ ಹೊಸ ಮುಖಕ್ಕೆ ಮಣೆಹಾಕುವ ಚಿಂತನೆ ಇದೆ ಎಂದು ಹೇಳಲಾಗುತ್ತಿತ್ತು. ಅದನ್ನು ಹೈಕಮಾಂಡ್‌ ಈಗ ಯಡಿಯೂರಪ್ಪ ಅವರ ಬಾಯಿಂದ ಹೇಳಿಸಿದೆ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತಿದೆ.
ಈ ಚುನಾವಣೆಯಲ್ಲಿ 75 ವರ್ಷ ದಾಟಿದವರಿಗೆ ಟಿಕೆಟ್ ನೀಡಬಾರದು ಎಂಬ ಮಾನದಂಡವನ್ನು ಗಟ್ಟಿ ಮಾಡಿದರೆ ಹಾಲಿ ವಿಧಾನಸಭೆಯ ಹಲವರಿಗೆ ಟಿಕೆಟ್‌ ಕೈತಪ್ಪಬಹುದು. ಜೊತೆಗೆ ಕ್ಷೇತ್ರದಲ್ಲಿ ವಿರೋಧಿ ಅಲೆ ಎದುರಿಸುತ್ತಿರುವವರಿಗೂ ಟಿಕೆಟ್‌ ತಪ್ಪಬಹುದು ಎಂದು ಹೇಳಲಾಗುತ್ತಿದೆ. ಅದೇನೆ ಇರಲಿ ಯಡಿಯೂರಪ್ಪ ಸಿಡಿಸಿರುವ ಈ ಟಿಕೆಟ್‌ ಬಾಂಬ್ ಇನ್ನೂ ಏನೆಲ್ಲ ತಿರುವು ಪಡೆಯಲಿದೆ ಎಂಬುದನ್ನು ನೋಡಬೇಕಿದೆ.

ಪ್ರಮುಖ ಸುದ್ದಿ :-   ಸಿಎಂ ಸಿದ್ದರಾಮಯ್ಯ ಹೇಳಿಕೆಯಿಂದ ನಮ್ಮ ಮನೆತನದ ಗೌರವ ಹಾಳಾಗುತ್ತಿದೆ : ನೇಹಾ ತಂದೆ ನಿರಂಜನ ಹಿರೇಮಠ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement