ಹೆಚ್‌3ಎನ್‌2 ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಸಾವು ; ದೇಶದಲ್ಲಿ ಎರಡು ಸಾವು-ವರದಿ

ಬೆಂಗಳೂರು/ದೆಹಲಿ : ಕೊರೊನಾ ಬಳಿಕ ಈಗ ಹೆಚ್‌3ಎನ್‌2 ಸೋಂಕಿಗೆ ಕರ್ನಾಟಕದಲ್ಲಿ ಮೊದಲ ಸಾವು ಸಂಭವಿಸಿದೆ. ಹೆಚ್‌3ಎನ್‌2 (H​​3N​​2) ವೈರಸ್​ನಿಂದ ಬಳಲುತ್ತಿದ್ದ ಹಾಸನ ಮೂಲದ ವೃದ್ಧರೊಬ್ಬರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಜ್ವರ, ಚಳಿ, ಗಂಟಲು ಸಮಸ್ಯೆಯಿಂದ ಬಳಲುತ್ತಿದ್ದ 85 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಮಾರ್ಚ್ 1 ರಂದು ಇವರು ಮೃತಪಟ್ಟಿದ್ದು, ಇವರಿಗೆ ಎಚ್‌3 ಎನ್‌2 ವೈರಸ್‌ ದೃಢ ಆಗಿರುವ ಬಗ್ಗೆ ವೈದ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಈಗಾಗಲೇ ರಾಜ್ಯದ ಹಲವು ಜಿಲ್ಲೆಗಳಲ್ಲಿ H3N2 ವೈರಸ್ ಹೆಚ್ಚಾಗುತ್ತಿದ್ದು, ಹಾಸನ ಜಿಲ್ಲೆಯಲ್ಲಿ ಈವರೆಗೆ 6 ಮಂದಿಗೆ ಈ ಸೋಂಕು ದೃಢಪಟ್ಟಿದೆ ಎಂದು ವರದಿಯಾಗಿದೆ.
ಅನಾರೋಗ್ಯದಿಂದ ಮೃತಪಟ್ಟಿದ್ದ 83 ವರ್ಷದ ವೃದ್ಧನಿಗೆ ಹೆಚ್3ಎನ್2 ವೈರಸ್ ತಗುಲಿದ್ದುದು ದೃಢಪಟ್ಟಿದೆ. ಹಾಸನ ಜಿಲ್ಲೆ, ಆಲೂರು ತಾಲೂಕಿನ ವೃದ್ಧನಿಗೆ ಸೋಂಕು ತಗುಲಿದ್ದುದು ತಡವಾಗಿ ಬೆಳಕಿಗೆ ಬಂದಿದೆ. ಹಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಅವರು ಮಾರ್ಚ್ 1 ರಂದು ಆಲೂರಿನಲ್ಲಿ ವೃದ್ಧ ಮೃತಪಟ್ಟಿದ್ದರು.
ಈಗಾಗಲೇ ಆಲೂರಿನಲ್ಲಿ ಎಲ್ಲರ ಅರೋಗ್ಯ ತಪಾಸಣೆ ನಡೆಸಿ ಪರೀಕ್ಷೆಗಾಗಿ ಗಂಟಲು ದ್ರವವನ್ನು ಪರೀಕ್ಷೆಗಾಗಿ ಲ್ಯಾಬ್‌ಗೆ ಕಳುಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಇಲಾಖೆ ತಪಾಸಣೆ ನಡೆಸಲು ಮುಂದಾಗಿದೆ. ಅನಾರೋಗ್ಯ ಪೀಡಿತರ ಪರೀಕ್ಷೆ ನಡೆಸಲಾಗಿದೆ ಎಂದು ಡಿಎಚ್‌ಒ ಡಾ.ಶಿವಸ್ವಾಮಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪೋಕ್ಸೊ ಪ್ರಕರಣ | ವಚನಾನಂದ ಸ್ವಾಮೀಜಿಗೆ ನಿರೀಕ್ಷಣಾ ಜಾಮೀನು: ಆಘಾತ ವ್ಯಕ್ತಪಡಿಸಿದ ಹೈಕೋರ್ಟ್‌

ಇದೇವೇಳೆ ಎಚ್‌3ಎನ್‌2 ವೈರಸ್‌ನಿಂದ ಉಂಟಾದ ಜ್ವರದಿಂದ ದೇಶದಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಒಬ್ಬರು ಕರ್ನಾಟಕದಲ್ಲಿ ಮೃತಪಟ್ಟಿದ್ದಾರೆ ಹಾಗೂ ಮತ್ತೊಬ್ಬರು ಹರಿಯಾಣದಲ್ಲಿ ಮೃತಪಟ್ಟಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ದೇಶದಲ್ಲಿ ಸುಮಾರು 90 ಎಚ್3ಎನ್2 ವೈರಸ್ ಪ್ರಕರಣಗಳು ವರದಿಯಾಗಿವೆ. ಎಂಟು ಎಚ್1ಎನ್1 ಪ್ರಕರಣಗಳೂ ಪತ್ತೆಯಾಗಿವೆ.
ಕಳೆದ ಕೆಲವು ತಿಂಗಳುಗಳಿಂದ ದೇಶದಲ್ಲಿ ಜ್ವರ ಪ್ರಕರಣಗಳು ಹೆಚ್ಚುತ್ತಿವೆ. ಹೆಚ್ಚಿನ ಸೋಂಕುಗಳು H3N2 ವೈರಸ್‌ನಿಂದ ಉಂಟಾಗುತ್ತವೆ, ಇದನ್ನು “ಹಾಂಗ್ ಕಾಂಗ್ ಫ್ಲೂ” ಎಂದೂ ಕರೆಯುತ್ತಾರೆ. ಈ ವೈರಸ್ ದೇಶದಲ್ಲಿನ ಇತರ ಇನ್ಫ್ಲುಯೆಂಜಾ ಉಪವಿಭಾಗಗಳಿಗಿಂತ ಹೆಚ್ಚಿನ ಆಸ್ಪತ್ರೆ ದಾಖಲೆಗೆ ಕಾರಣವಾಗುತ್ತದೆ ಎಂದು ತಿಳಿಸಲಾಗಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement