ದೆಹಲಿ ಶಾಸಕರು, ಸಚಿವರ ಸಂಬಳ ಶೇ.66 ರಷ್ಟು ಹೆಚ್ಚಳ

ನವದೆಹಲಿ: ದೆಹಲಿಯ ಶಾಸಕರ ವೇತನ ಮತ್ತು ಭತ್ಯೆಗಳನ್ನು ಶೇಕಡಾ 66 ರಷ್ಟು ಹೆಚ್ಚಿಸುವ ಅರವಿಂದ್ ಕೇಜ್ರಿವಾಲ್ ಸರ್ಕಾರದ ಪ್ರಸ್ತಾವನೆಯನ್ನು ಭಾರತದ ರಾಷ್ಟ್ರಪತಿಗಳು ಅನುಮೋದಿಸಿದ್ದಾರೆ.
ದೆಹಲಿಯ ಶಾಸಕರು ಈಗ ತಿಂಗಳಿಗೆ 90,000 ರೂ.ಗಳನ್ನು ಪಡೆಯುತ್ತಾರೆ, ಈ ಹಿಂದೆ ಅವರ ವೇತನ 54,000 ರೂ.ಗಳಿತ್ತು. ಇಲ್ಲಿಯವರೆಗೆ ಅವರ ಮೂಲ ವೇತನ 12,000 ರೂ.ಗಳಷ್ಟಿದ್ದು ಈಗ 30,000 ರೂ.ಗಳಿಗೆ ಏರಿಕೆಯಾಗಿದೆ.
ದಿನಭತ್ಯೆಯನ್ನು 1,000 ರೂ.ನಿಂದ 1,500 ರೂ.ಗೆ ಹೆಚ್ಚಿಸಲಾಗಿದೆ. ದೆಹಲಿಯ ಹೆಚ್ಚಿನ ಶಾಸಕರು ಕೇಜ್ರಿವಾಲ್ ಅವರ ಆಮ್ ಆದ್ಮಿ ಪಾರ್ಟಿ (ಎಎಪಿ) ಪಕ್ಷದವರು.
ಈಗ ಮುಖ್ಯಮಂತ್ರಿ, ವಿಧಾನಸಭಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರು ವೇತನ ಮತ್ತು ಭತ್ಯೆ ಸೇರಿದಂತೆ ಮಾಸಿಕ 1.70 ಲಕ್ಷ ರೂ. ಗಳನ್ನು ಪಡೆಯಲಿದ್ದಾರೆ. ಅವರಿಗೆ ಈವರೆಗೆ ತಿಂಗಳಿಗೆ 72 ಸಾವಿರ ರೂ.ಗಳಷ್ಟು ವೇತನವಿತ್ತು. ಈ ಸಂಬಂಧದ ಪ್ರಸ್ತಾವನೆಯನ್ನು ದೆಹಲಿ ವಿಧಾನಸಭೆಯು ಅನುಮೋದಿಸಿದೆ ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ (MHA) ಅದನ್ನು ಕಳುಹಿಸಿತ್ತು.
ದೆಹಲಿಯು ರಾಷ್ಟ್ರೀಯ ರಾಜಧಾನಿ ಪ್ರದೇಶ (NCT) ಆಗಿರುವುದರಿಂದ ಮತ್ತು ಪೂರ್ಣ ರಾಜ್ಯವಲ್ಲದ ಕಾರಣ, ಭಾರತದ ರಾಷ್ಟ್ರಪತಿಗಳು ಅಂತಹ ವಿಷಯಗಳ ಬಗ್ಗೆ ನಿರ್ಧರಿಸುತ್ತಾರೆ. 12 ವರ್ಷಗಳ ನಂತರ ದೆಹಲಿಯ ಶಾಸಕರ ವೇತನ ಹೆಚ್ಚಳವಾಗಿದೆ. ಹೊಸ ವೇತನ ರಚನೆಯು ಫೆಬ್ರವರಿ 14, 2023 ರಿಂದ ಜಾರಿಗೆ ಬರಲಿದೆ.
ದೆಹಲಿಯ ಶಾಸಕರ ವೇತನ ಮತ್ತು ಭತ್ಯೆಗಳು ಇತರ ರಾಜ್ಯಗಳಿಗೆ ಸಮಾನವಾಗಿರಬೇಕು ಎಂದು ಕೇಜ್ರಿವಾಲ್ ಸರ್ಕಾರವು ಕೇಂದ್ರ ಗೃಹ ಸಚಿವಾಲಯಕ್ಕೆ ಮನವಿ ಮಾಡಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ಆಡಳಿತದ ರಾಜ್ಯಗಳು 1.5 ರಿಂದ 2 ಪಟ್ಟು ಹೆಚ್ಚಿನ ಸಂಬಳ ಮತ್ತು ಭತ್ಯೆಗಳನ್ನು ನೀಡುತ್ತಿವೆ ಎಂದು ಎಎಪಿ ಸರ್ಕಾರ ಹೇಳಿದೆ.
ಅನೇಕ ರಾಜ್ಯಗಳು ತಮ್ಮ ಶಾಸಕರಿಗೆ ಮನೆ ಬಾಡಿಗೆ, ಕಚೇರಿ ಬಾಡಿಗೆ ಮತ್ತು ಸಿಬ್ಬಂದಿ ವೆಚ್ಚಗಳು, ಕಚೇರಿ ಉಪಕರಣಗಳು, ವಾಹನಗಳು ಮತ್ತು ಚಾಲಕ ಭತ್ಯೆಗಳನ್ನು ಖರೀದಿಸಲು ಭತ್ಯೆಗಳನ್ನು ಒದಗಿಸುತ್ತವೆ. ದೆಹಲಿಯಲ್ಲಿ ಅದಿಲ್ಲ ಎಂದು ದೆಹಲಿ ಸರ್ಕಾರ ಹೇಳಿದೆ. ಆದರೆ ಬೇಡಿಕೆ ಪೂರ್ಣ ಪ್ರಮಾಣದಲ್ಲಿ ಈಡೇರಿಲ್ಲ.

ಪ್ರಮುಖ ಸುದ್ದಿ :-   ಲೋಕಸಭಾ ಚುನಾವಣೆ: ಈ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿಗೇ ಮತ ಹಾಕಬೇಡಿ ಎಂದು ಮತದಾರರಿಗೆ ಮನವಿ ಮಾಡುತ್ತಿರುವ ಕಾಂಗ್ರೆಸ್‌...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement