ಬೆಂಗಳೂರು ರೈಲ್ವೆ ನಿಲ್ದಾಣದಲ್ಲಿ ಡ್ರಮ್‌ನಲ್ಲಿ ಮಹಿಳೆಯ ಶವ ಪತ್ತೆ ಪ್ರಕರಣ: ಮೂವರ ಬಂಧನ

ಬೆಂಗಳೂರು: ರೈಲ್ವೆ ನಿಲ್ದಾಣದ ಮುಂದೆ ಡ್ರಮ್‌ನಲ್ಲಿ ಪತ್ತೆಯಾದ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸಿರುವ ಬೈಯಪ್ಪನಹಳ್ಳಿ ರೈಲ್ವೆ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಿದ್ದಾರೆ.
ಕೊಲೆಯಾದ ಮಹಿಳೆಯನ್ನು ಬಿಹಾರ ರಾಜ್ಯದ ಅರಾರಿಯಾ ಜಿಲ್ಲೆ ನಿವಾಸಿ ತಮನ್ನಾ(27) ಎಂದು ಗುರುತಿಸಲಾಗಿದೆ. ಈ ಸಂಬಂಧ ಬಿಹಾರ ಮೂಲದ ರಾಜ್ಯದ ಕಮಾಲ್(21), ತನ್ವೀರ್(28), ಶಾಕೀಬ್(25) ಬಂಧಿತ ಆರೋಪಿಗಳು. ಈ ಪ್ರಕರಣದಲ್ಲಿ ಉಳಿದ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಪೊರ್ಟಿಕೊ ಮುಂದೆ ಒಂದು ನೀಲಿ ಬಣ್ಣದ ಡ್ರಮ್‌ನಲ್ಲಿ ಮಾರ್ಚ್‌ 13ರಂದು ಮಹಿಳೆ ಶವ ಪತ್ತೆಯಾಗಿತ್ತು. ಈ ಜಾಗದಲ್ಲಿ ತಂದಿಟ್ಟು ಸಾಕ್ಷ್ಯವನ್ನು ನಾಶ ಪಡಿಸಲು ಯತ್ನಿಸಿರುವುದು ಕಂಡು ಬಂದ ಹಿನ್ನೆಲೆಯಲ್ಲಿ ಬೈಯಪ್ಪನಹಳ್ಳಿ ರೈಲ್ವೆ ಠಾಣೆ ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದಾರೆ.
ಮೂರು ತಂಡ ರಚನೆ:
ರೈಲ್ವೆ ಡಿಐಜಿ ಶಶಿಕುಮಾರ್ ಮತ್ತು ಎಸ್ಪಿ ಡಾ. ಸೌಮ್ಯಲತಾ ಅವರ ಮಾರ್ಗದರ್ಶನದಲ್ಲಿ ರೈಲ್ವೆ ಉಪವಿಭಾಗದ ಡಿವೈಎಸ್ಪಿ ರವಿಕುಮಾರ್ ಅವರ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು.
ತನಿಖಾಕಾರಿ ಸಿಪಿಐ ಪ್ರಭಾಕರ್ ಅವರು ತನಿಖೆ ಕೈಗೊಂಡ ಸಮಯದಲ್ಲಿ ಕೊಲೆಯಾದ ಮಹಿಳೆ ಬಿಹಾರ ಮೂಲದ ತಮನ್ನಾ (27) ಎಂಬುದು ಗೊತ್ತಾಗಿದೆ. ನಂತರ ತನಿಖೆಯನ್ನು ಮುಂದುವರೆಸಿ ಆಕೆಯ ಹಿನ್ನೆಲೆಯನ್ನು ಸಂಗ್ರಹಿಸಿದಾಗ ಈ ಮೊದಲು ಬಿಹಾರ ಮೂಲದ ವ್ಯಕ್ತಿಯನ್ನು ಮದುವೆಯಾಗಿ ನಂತರ ಆತನನ್ನು ಬಿಟ್ಟು ಬೆಂಗಳೂರಿಗೆ ಬಂದು ಇಂತಿಕಾಬ್‌ ಎಂಬಾತನನ್ನು ಮದುವೆಯಾಗಿ ಆನೇಕಲ್‌ ಜಿಗಣಿಯಲ್ಲಿ ನೆಲೆಸಿದ್ದಳು ಎನ್ನಲಾಗಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಅಭ್ಯರ್ಥಿಗಳ 7ನೇ ಪಟ್ಟಿ ಪ್ರಕಟ : ಚಿತ್ರದುರ್ಗದಲ್ಲಿ ಹಾಲಿ ಸಂಸದರಿಗೆ ಕೊಕ್, ಯಡಿಯೂರಪ್ಪ ಆಪ್ತನಿಗೆ ಟಿಕೆಟ್‌

ನವಾಬ್ ಮತ್ತು ಇಂತಿಕಾಬ್ ಸ್ವಂತ ಸಹೋದರರು. ಈ ಪೈಕಿ ಇಂತಿಕಾಬ್‌ ಪುಸಲಾಯಿಸಿ ತಮನ್ನಾ ಮದುವೆಯಾಗಿದ್ದಳು. ನವಾಬ್ ಕಲಾಸಿಪಾಳ್ಯದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದಾನೆ.
ತಮ್ಮನನ್ನು ಪುಸಲಾಯಿಸಿ ತಮನ್ನಾ ಮದುವೆಯಾಗಿದ್ದರಿಂದ ಸಹೋದರ ನವಾಬ್ ಕೋಪಗೊಂಡಿದ್ದನು. ತನ್ನ ತಮ್ಮನ ಬಾಳು ಹಾಳು ಮಾಡಿದ ಈಕೆಯನ್ನು ಹೇಗಾದರೂ ಮಾಡಿ ಕೊಲೆ ಮಾಡಬೇಕೆಂದು ನಿರ್ಧರಿಸಿದ ನವಾಬ್, ಮಾತನಾಡಬೇಕೆಂದು ಅವಳನ್ನು ಕಲಾಸಿಪಾಳ್ಯದ ತನ್ನ ರೂಮಿಗೆ ಕರೆಸಿಕೊಂಡಿದ್ದಾನೆ.
ಅವಳು ಬಂದ ನಂತರ ತನ್ನ ಎಂಟು ಮಂದಿ ಸಹಚರರೊಂದಿಗೆ ಸೇರಿಕೊಂಡು ಆಕೆಯ ವೇಲ್‌ನಿಂದಲೇ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಶವವನ್ನು ಡ್ರಮ್ಮಿನಲ್ಲಿ ಹಾಕಿ ಆಟೋದಲ್ಲಿ ಡ್ರಮ್ ತೆಗೆದುಕೊಂಡು ಹೋಗಿ ಬೈಯಪ್ಪನಹಳ್ಳಿ ರೈಲ್ವೆ ನಿಲ್ದಾಣದ ಮುಂದಿಟ್ಟು ಪರಾರಿಯಾಗಿದ್ದರು ಎನ್ನಲಾಗಿದೆ. ಈಗ ಮೂವರನ್ನು ಬಂಧಿಸಿರುವ ಪೊಲೀಸರು ಪ್ರಮುಖ ಆರೋಪಿ ನವಾಬ್ ಸೇರಿದಂತೆ ಉಳಿದ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement