ಕರ್ನಾಟಕ ವಿಧಾನಸಭೆ ಚುನಾವಣೆ : ಸುಮಾರು 100 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಕಾಂಗ್ರೆಸ್‌, ಘೋಷಣೆ ಮಾತ್ರ ಬಾಕಿ

ನವದೆಹಲಿ : ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಸುಮಾರು 100 ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು, ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ.
ಶುಕ್ರವಾರ ಸಂಜೆ ನಡೆದ ಪಕ್ಷದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಪ್ರತಿ ಸ್ಥಾನದ ಬಗ್ಗೆ ಚರ್ಚೆ ನಡೆಸಿತು. ಶೀಘ್ರದಲ್ಲೇ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಅವರು, ರಾಜ್ಯದಲ್ಲಿ ಪಕ್ಷ ಯಾವ ಪಕ್ಷದ ಜೊತೆಗೂ ಮೈತ್ರಿಗೆ ಹೋಗುವುದಿಲ್ಲ ಹೋಗುವುದಿಲ್ಲ ಎಂದು ಹೇಳಿದ್ದಾರೆ.
ಇದೇ ವೇಳೆ ಕೆಲವು ಹಾಲಿ ಶಾಸಕರಿಗೆ ಟಿಕೆಟ್ ಸಿಗದಿರಬಹುದು ಎಂದು ಮೂಲಗಳು ತಿಳಿಸಿವೆ. 224 ಸದಸ್ಯ ಬಲದ ಸದನದಲ್ಲಿ ಕಾಂಗ್ರೆಸ್ ಪ್ರಸ್ತುತ 68 ಶಾಸಕರನ್ನು ಹೊಂದಿದ್ದು, ರಾಜ್ಯ ಸ್ಕ್ರೀನಿಂಗ್ ಕಮಿಟಿ ಈಗಾಗಲೇ ಬಹುತೇಕ ಕ್ಷೇತ್ರಗಳಿಗೆ ಹೆಸರುಗಳನ್ನು ಒಳಗೊಂಡ ಪಟ್ಟಿಯನ್ನು ಸಿದ್ಧಪಡಿಸಿದೆ.

100ಕ್ಕೂ ಹೆಚ್ಚು ಕ್ಷೇತ್ರಗಳಿಗೆ ಒಂದೇ ಹೆಸರು ಹಾಗೂ ಇತರೆ ಕ್ಷೇತ್ರಗಳಿಗೆ ಎರಡು ಅಥವಾ ಮೂರು ಹೆಸರುಗಳನ್ನು ಸಮಿತಿ ಶಿಫಾರಸು ಮಾಡಿದೆ. ಎಸ್‌ಸಿ/ಎಸ್‌ಟಿ ಮತ್ತು ಇತರೆ ಹಿಂದುಳಿದ ವರ್ಗದ ಉಪಜಾತಿಗಳಿಗೂ ಪಕ್ಷ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ರಾಜ್ಯ ನಾಯಕರು ಒತ್ತಾಯಿಸಿದ್ದಾರೆ. 224 ಸ್ಥಾನಗಳಿಗೆ ಕಾಂಗ್ರೆಸ್ 1,300ಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, ಬಿಜೆಪಿ ಸರಕಾರದ ಭ್ರಷ್ಟಾಚಾರದಿಂದ ಬೇಸತ್ತಿರುವ ರಾಜ್ಯದ ಜನತೆ ಬದಲಾವಣೆಗೆ ಮನಸ್ಸು ಮಾಡಿದ್ದಾರೆ ಎಂದು ಶಿವಕುಮಾರ ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೋಲನ್ನು ಖಾತ್ರಿಪಡಿಸಿಕೊಳ್ಳಲು ಕಾಂಗ್ರೆಸ್ ಶಿಗ್ಗಾಂವಿ ಕ್ಷೇತ್ರದಲ್ಲಿ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ರಣತಂತ್ರ ರೂಪಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಬೊಮ್ಮಾಯಿ ವಿರುದ್ಧ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಕಣಕ್ಕಿಳಿಸುವ ಕುರಿತು ಪಕ್ಷವು ಶೀಘ್ರದಲ್ಲೇ ನಿರ್ಧರಿಸಲಿದೆ. ಕುಲಕರ್ಣಿ ಲಿಂಗಾಯತ ಸಮುದಾಯದ ಪಂಚಮಸಾಲಿ ಉಪಜಾತಿಗೆ ಸೇರಿದರೆ ಬೊಮ್ಮಾಯಿ ಸಾದರ್ ಉಪಜಾತಿಗೆ ಸೇರಿದವರು ಎಂಬುದು ಕಾಂಗ್ರೆಸ್‌ ಲೆಕ್ಕಾಚಾರವಾಗಿದೆ.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement