ಕಲಬುರಗಿ ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಸ್ಥಾನಕ್ಕೆ ಚುನಾವಣೆ: ಎರಡೂ ಸ್ಥಾನಗಳಲ್ಲಿ ಬಿಜೆಪಿಗೆ ಜಯ

ಕಲಬುರಗಿ: ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ ತೀವ್ರ ಕುತೂಹಲ ಕೆರಳಿದ್ದ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್‌ ಆಯ್ಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರೂರಿನಲ್ಲಿ ಕಾಂಗ್ರೆಸ್‌ಗೆ ಶಾಕ್ ನೀಡಿದೆ. ಬಿಜೆಪಿ ಕಡಿಮೆ ಸಂಖ್ಯೆ ಹೊಂದಿದ್ದರೂ ಕಲಬುರಗಿ ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಎರಡೂ ಸ್ಥಾನಗಳನ್ನು ಗೆದ್ದುಕೊಂಡಿದೆ.
ಇದೇ ಮೊದಲ ಬಾರಿಗೆ ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಗೆಲುವು ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿಗಳು ಕೇವಲ ಒಂದೇ ಒಂದು ಮತದಿಂದ ಗೆಲುವು ಸಾಧಿಸಿದ್ದಾರೆ. ವಾರ್ಡ್ ಸಂಖ್ಯೆ 46 ಪ್ರತಿನಿಧಿಸುವ ವಿಶಾಲ ದರ್ಗಿ ಮೇಯರ್‌ ಆಗಿ ಮತ್ತು ವಾರ್ಡ್ ಸಂಖ್ಯೆ 25 ರಿಂದ ಶಿವಾನಂದ ಪಿಸ್ತಿ ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.

ಮೇಯರ್‌ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ವಿಶಾಲ್ ದರ್ಗಿ 33 ಮತಗಳನ್ನು ಪಡೆದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಕಪನೂರ್ 32 ಮತಗಳನ್ನು ಪಡೆದಿದ್ದಾರೆ. ಇನ್ನು ಉಪಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿಯ ಶಿವಾನಂದ್ ಪಿಸ್ತಿ 33 ಮತಗಳನ್ನು ಪಡೆದರೆ ಕಾಂಗ್ರೆಸ್ ನ ವಿಜಯಲಕ್ಷ್ಮಿ 32 ಮತಗಳನ್ನು ಪಡೆದಿದ್ದಾರೆ. 12 ವರ್ಷಗಳ ಬಳಿಕ ಬಿಜೆಪಿ ಕಲಬುರಗಿ ಪಾಲಿಕೆಯ ಅಧಿಕಾರ ಹಿಡಿದಿದೆ. 2021ರ ಸೆಪ್ಟೆಂಬರ್ ತಿಂಗಳಲ್ಲಿ ಕಲಬುರಗಿ ಪಾಲಿಕೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 23, ಕಾಂಗ್ರೆಸ್ 27, ಜೆಡಿಎಸ್ 4, ಓರ್ವ ಪಕ್ಷೇತರ ಅಭ್ಯರ್ಥಿ ಗೆಲುವು ಸಾಧಿಸಿದ್ದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಯ ಹೊರತಾಗಿಯೂ ಅಂತಿಮವಾಗಿ ಬಿಜೆಪಿ 1 ಮತದ ಅಂತರದಿಂದ ಸ್ವತಂತ್ರವಾಗಿ ಪಾಲಿಕೆಯ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಯಶಸ್ವಿಯಾಯಿತು. ವಿಧಾನ ಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಲೋಕಸಭಾ ಸದಸ್ಯರು, ರಾಜ್ಯ ಸಭಾ ಸದಸ್ಯರು ಎಲ್ಲರೂ ಸೇರಿ ಒಟ್ಟು ಮತದಾರರ ಸಂಖ್ಯೆ 68 ಆಗಿದ್ದು ಬಹುಮತಕ್ಕೆ 35 ಸ್ಥಾನಗಳ ಅಗತ್ಯವಿತ್ತು.ಗುರುವಾರ ಚುನಾವಣೆಗೆ ರಾಜ್ಯ ಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ, ಬಿಜೆಪಿಯಿಂದ ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಮತ್ತು ಜೆಡಿಎಸ್ ಸದಸ್ಯ ಅಲೀಮ್ ಪಟೇಲ್ ಮತದಾನಕ್ಕೆ ಗೈರಾಗಿದ್ದರು. ಹೀಗಾಗಿ ಒಟ್ಟು ಸಂಖ್ಯಾ ಬಲ 65ಕ್ಕೆ ಕುಸಿಯಿತು. ಹೀಗಾಗಿ 33 ಮ್ಯಾಜಿಕ್ ನಂಬರ್ ಆಗಿ ಪರಿಗಣಿತವಾಯಿತು.

ಕಲಬುರಗಿ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಆಯ್ಕೆಗೊಂಡ ವಿಶಾಲ ದರ್ಗಿ ಮತ್ತು ಉಪ-ಮಹಾಪೌರರಾಗಿ ಆಯ್ಕೆಗೊಂಡ ಶಿವಾನಂದ ಪಿಸ್ತಿ ಅವರಿಗೆ ಅಭಿನಂದನೆಗಳನ್ನು ತಿಳಿಸಿದೆ. ಜೊತೆಗೆ ಕಾಂಗ್ರೆಸ್‌ನ ಸುಳ್ಳು ಗ್ಯಾರಂಟಿಗಳಿಗೆ ಮರಳಾಗದೆ ಸ್ವಾಭಿಮಾನಿ ಕನ್ನಡಿಗರು ‘ಕಾಂಗ್ರೆಸ್ ಹಠಾವೋ’ ಗ್ಯಾರಂಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಪ್ರಮುಖ ಸುದ್ದಿ :-   ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ , ಭೂ ಕುಸಿತದ ಸಾಧ್ಯತೆ ; ಹವಾಮಾನ ಇಲಾಖೆ ಮುನ್ನೆಚ್ಚರಿಕೆ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement