ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ಮಹಾತ್ಮ ಗಾಂಧಿ ಉಲ್ಲೇಖಿಸಿ ರಾಹುಲ್‌ ಗಾಂಧಿ ಟ್ವೀಟ್‌

“ಮೋದಿ ಉಪನಾಮ”  ಕುರಿತು ರಾಹುಲ್‌ ಗಾಂಧಿ ಹೇಳಿಕೆಗಳಿಗೆ ಸಂಬಂಧಿಸಿದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಗುರುವಾರ ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದ ನಂತರ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಸತ್ಯ ಮತ್ತು ಅಹಿಂಸೆಯ ಕುರಿತು ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದೆ. ಸತ್ಯವೇ ನನ್ನ ದೇವರು, ಅದನ್ನು ಪಡೆಯುವ ಸಾಧನ ಅಹಿಂಸೆ. — ಮಹಾತ್ಮ ಗಾಂಧಿ ಎಂದು ನ್ಯಾಯಾಲಯದ ತೀರ್ಪಿನ ನಂತರ ರಾಹುಲ್‌ ಗಾಂಧಿ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
2019 ರ ಲೋಕಸಭೆ ಚುನಾವಣೆಗೆ ಮುನ್ನ ಕರ್ನಾಟಕದಲ್ಲಿ ಚುನಾವಣಾ ರ್ಯಾಲಿಯಲ್ಲಿ ಗಾಂಧಿಯವರ ‘ಮೋದಿ ಉಪನಾಮ” ಕುರಿತು ಹೇಳಿಕೆಗಾಗಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಎಚ್‌ಹೆಚ್ ವರ್ಮಾ ಅವರ ನ್ಯಾಯಾಲಯವು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ನ್ಯಾಯಾಲಯವು ಅವರಿಗೆ ಜಾಮೀನು ಮಂಜೂರು ಮಾಡಿದೆ ಮತ್ತು ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲ ಶಿಕ್ಷೆಯನ್ನು ಅಮಾನತುಗೊಳಿಸಿದೆ ಎಂದು ರಾಹುಲ್‌ ಗಾಂಧಿ ವಕೀಲ ಬಾಬು ಮಂಗುಕಿಯಾ ತಿಳಿಸಿದ್ದಾರೆ.
ಗುರುವಾರ 2019ರ ಕ್ರಿಮಿನಲ್ ಮಾನನಷ್ಟ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಸೂರತ್ ನ್ಯಾಯಾಲಯವು ಎರಡು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸುವುದರೊಂದಿಗೆ, ಅವರು ಲೋಕಸಭೆಯಿಂದ ಅನರ್ಹತೆ ಭೀತಿ ಎದುರಿಸುತ್ತಿದ್ದಾರೆ. ಹೈಕೋರ್ಟ್‌ ಶಿಕ್ಷೆಗೆ ತಡೆ ನೀಡಿದರೆ ಇದರಿಂದ ಪಾರಾಗಬಹುದು.

ಕಾಂಗ್ರೆಸ್ ವಕ್ತಾರ ಅಭಿಷೇಕ್ ಸಿಂಘ್ವಿ ಅವರು ನ್ಯಾಯಾಲಯದ ಆದೇಶವನ್ನು “ಕಾನೂನಿನಲ್ಲಿ ಸಮರ್ಥನೀಯವಲ್ಲ” ಎಂದು ಕರೆದಿದ್ದಾರೆ ಮತ್ತು ನಾವು ಅದನ್ನು ಪ್ರಶ್ನಿಸುತ್ತೇವೆ ಮತ್ತು ಶಿಕ್ಷೆಗೆ ತಡೆ ನೀಡುವುದು ಖಚಿತ ಎಂದು ಹೇಳಿದರು.
ಆದರೆ ಅಲ್ಲಿಯವರೆಗೆ ಗಾಂಧಿಯವರು ಲೋಕಸಭೆಗೆ ಹಾಜರಾಗಲು ಸಾಧ್ಯವಾಗುವುದಿಲ್ಲ ಏಕೆಂದರೆ ಅವರ ಅನರ್ಹತೆ, ಪ್ರಸ್ತುತ ಕಾನೂನಿನ ಅಡಿಯಲ್ಲಿ, ಅವರ ಎರಡು ವರ್ಷಗಳ ಶಿಕ್ಷೆಯೊಂದಿಗೆ ತಕ್ಷಣವೇ ಬರುತ್ತದೆ.
ಈ ಕಾನೂನು ಜುಲೈ 2013 ರ ಸುಪ್ರೀಂ ಕೋರ್ಟ್‌ ತೀರ್ಪಿನ ನಂತರ ಜಾರಿಗೆ ಬಂದಿದೆ.
ಗುರುವಾರದ ಬೆಳವಣಿಗೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರಿ ವಾಗ್ವಾದಕ್ಕೆ ಕಾರಣವಾಗಿದ್ದು, ಎರಡೂ ಪಕ್ಷದವರು ಪರಸ್ಪರ ಆರೋಪ ಮಾಡುತ್ತಿದ್ದಾರೆ.
ಮಹಾತ್ಮ ಗಾಂಧಿಯವರ ಮಾತುಗಳನ್ನು ಉಲ್ಲೇಖಿಸಿ ಟ್ವೀಟ್ ಮಾಡಿದ ರಾಹುಲ್ ಗಾಂಧಿ, “ನನ್ನ ಧರ್ಮವು ಸತ್ಯ ಮತ್ತು ಅಹಿಂಸೆಯನ್ನು ಆಧರಿಸಿದೆ. ಸತ್ಯವೇ ನನ್ನ ದೇವರು, ಅಹಿಂಸೆಯೇ ಇದನ್ನು ಸಾಧಿಸುವ ಸಾಧನ ಎಂದು ಟ್ವೀಟ್‌ನಲ್ಲಿ ಬರೆದಿದ್ದಾರೆ.
ಗಾಂಧಿಯವರ ಧರ್ಮ ಎಂದರೆ ಅವರು ಜನರನ್ನು ಮಾನಹಾನಿ ಮಾಡುವ, ದೇಶ, ಪ್ರಜಾಪ್ರಭುತ್ವ ಮತ್ತು ಹುತಾತ್ಮರನ್ನು ದೂಷಿಸುತ್ತಾರೆಯೇ ಎಂದು ಬಿಜೆಪಿ ಇದಕ್ಕೆ ತಿರುಗೇಟು ನೀಡಿದೆ.
ಬಿಜೆಪಿ ಮಾಜಿ ಸಚಿವ ರವಿಶಂಕರಪ್ರಸಾದ ಅವರು, “ರಾಹುಲ್ ಗಾಂಧಿ ಅವರು ಸತ್ಯ ಮತ್ತು ಅಹಿಂಸೆಯನ್ನು ನಂಬುತ್ತೇನೆ ಎಂದು ಹೇಳುತ್ತಾರೆ. ಇದರರ್ಥ ಅವನು ಜನರನ್ನು ಮಾನಹಾನಿ ಮಾಡಬಹುದು, ಅವರ ಮೇಲೆ ಜಾತಿವಾದಿ ನಿಂದನೆಗಳನ್ನು ಮಾಡಬಹುದು ಎಂದೇ ಎಂದು ಪ್ರಶ್ನಿಸಿದ್ದಾರೆ.

ರಾಹುಲ್‌ ಅವರಿಗೆ ಜನರನ್ನು ನಿಂದಿಸುವ ಹಕ್ಕು ಇದ್ದರೆ, ಅವರ ನಿಂದನೆಯಿಂದ ನೋವಾದವರೂ ನ್ಯಾಯಾಲಯದ ಮೆಟ್ಟಿಲೇರುವ ಹಕ್ಕು ಹೊಂದಿದ್ದಾರೆ ಎಂದು ಹೇಳಿದ್ದಾರೆ.
ದೇಶದ ಕಾನೂನೆಂದರೆ, ಒಬ್ಬ ವ್ಯಕ್ತಿಯು ಅಶ್ಲೀಲ, ಮಾನಹಾನಿಕರ ಕಾಮೆಂಟ್‌ಗಳಿಂದ ಮಾನನಷ್ಟಕ್ಕೆ ಗುರಿಯಾಗಿದ್ದರೆ, ಆತ ಪರಿಹಾರದ ಹಕ್ಕನ್ನು ಹೊಂದಿದ್ದಾನೆ ಮತ್ತು ನಾಲ್ಕು ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಇಂದು ಶಿಕ್ಷೆಯನ್ನು ನೀಡಲಾಗಿದೆ ಎಂದು ಹೇಳಿದರು.
ರವಿಶಂಕರಪ್ರಸಾದ ಅವರು ರಾಹುಲ್‌ ಗಾಂಧಿಯವರ ಹಿಂದಿನ ಟೀಕೆಗಳನ್ನು ಉಲ್ಲೇಖಿಸಿ, ಅವರ ಹೇಳಿಕೆಗಳು ಭಾರತದ ಪ್ರಜಾಪ್ರಭುತ್ವದ ಅವನತಿ ಬಗೆಗಿನ ಹೇಳಿಕೆಗಳು ಮತ್ತು ಚೀನಾದ ವಿದೇಶಾಂಗ ನೀತಿಯ ಸಾಮರಸ್ಯದ ಬಗ್ಗೆ ಲಂಡನ್‌ನಲ್ಲಿ ಮಾಡಿದ ಹೇಳಿಕೆಗಳನ್ನು ಒಳಗೊಂಡಿವೆ; ನ್ಯಾಯಾಲಯಕ್ಕೆ ಕ್ಷಮೆಯಾಚಿಸುವುದಾಗಿ ಹೇಳಿದ್ದ ರಫೇಲ್ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಬಗ್ಗೆ ಟೀಕೆಗಳು; ಅವರ ಫೋನ್‌ನಲ್ಲಿ ಪೆಗಾಸಸ್ ಸಾಫ್ಟ್‌ವೇರ್ ಆರೋಪಗಳು ಹೀಗೆ ಅನೇಕ ಆರೋಪಗಳನ್ನು ಮಾಡಿದ್ದಾರೆ ಎಂದು ರವಿಶಂಕರ ಪ್ರಸಾದ ಹೇಳಿದರು.
ನ್ಯಾಯಾಧೀಶರನ್ನು (ಅನುಕೂಲಕರ ಆದೇಶಗಳನ್ನು ಪಡೆಯಲು) ಬದಲಾಯಿಸಲಾಗುತ್ತಿದೆ” ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಈ ಹಿಂದೆ ಆರೋಪಿಸಿದ್ದರು. ಕಾಂಗ್ರೆಸ್ ಮುಖ್ಯಸ್ಥರ ಹೇಳಿಕೆಗಳನ್ನು “ನ್ಯಾಯಾಂಗ ನಿಂದನೆ” ಎಂದು ಬಣ್ಣಿಸಿದ ಬಿಜೆಪಿ ಇದಕ್ಕೆ ತೀಕ್ಷ್ಣ ಪ್ರತಿಕ್ರಿಯೆ ನೀಡಿತು.

ಪ್ರಮುಖ ಸುದ್ದಿ :-   ಚಲಾವಣೆಯಾದ ಒಟ್ಟು ಮತದ ಮಾಹಿತಿ 48 ಗಂಟೆಗಳಲ್ಲಿ ಏಕೆ ವೆಬ್‌ಸೈಟ್‌ನಲ್ಲಿ ಹಾಕುತ್ತಿಲ್ಲ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಪ್ರಶ್ನೆ

ಲೋಕಸಭೆ ಸ್ಪೀಕರ್ ರಾಹುಲ್‌ ಗಾಂಧಿಯನ್ನು ಅನರ್ಹಗೊಳಿಸಲು ಮುಂದಾಗಬಹುದೇ ಎಂಬ ಪ್ರಶ್ನೆಗೆ, ರವಿಶಂಕರ ಪ್ರಸಾದ ಅವರು, ಅದನ್ನು ಸ್ಪೀಕರ್ ನಿರ್ಧರಿಸಬೇಕು ಎಂದರು.
ಜನತಾ ಪ್ರಾತಿನಿಧ್ಯ ಕಾಯಿದೆಯ 8ನೇ ಪರಿಚ್ಛೇದವು ಶಿಕ್ಷೆಗೊಳಗಾದ ಸಂಸದರು ಮತ್ತು ಶಾಸಕರನ್ನು ಅನರ್ಹಗೊಳಿಸಲು ಅವಕಾಶ ಒದಗಿಸುತ್ತದೆ. RPA ಯ ಸೆಕ್ಷನ್ 8 (3) ಸ್ಪಷ್ಟವಾಗಿ ಹೇಳುತ್ತದೆ, ಯಾವುದೇ ಅಪರಾಧಕ್ಕೆ ತಪ್ಪಿತಸ್ಥ ಮತ್ತು ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಜೈಲು ಶಿಕ್ಷೆಗೆ ಗುರಿಯಾದ ವ್ಯಕ್ತಿಯನ್ನು ಅಂತಹ ಅಪರಾಧದ ದಿನಾಂಕದಿಂದ ಅನರ್ಹಗೊಳಿಸಲಾಗುತ್ತದೆ ಮತ್ತು ಆತನ ಬಿಡುಗಡೆಯ ದಿನಾಂಕದ ಮುಂದಿನ ಆರು ವರ್ಷಗಳ ಅವಧಿಗೆ ಅನರ್ಹಗೊಳಿಸಲಾಗುತ್ತದೆ.
ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಗಾಂಧಿಯನ್ನು ಅನರ್ಹಗೊಳಿಸುವ ಅಧಿಸೂಚನೆಯನ್ನು ತಕ್ಷಣವೇ ಹೊರಡಿಸಬಹುದು ಮತ್ತು ವಯನಾಡ್ ಸ್ಥಾನವನ್ನು ಖಾಲಿ ಎಂದು ಘೋಷಿಸಬಹುದು ಆದರೆ ಅದು ಕೇವಲ ಔಪಚಾರಿಕ ಎಂದು ಮೂಲಗಳು ತಿಳಿಸಿವೆ.

0 / 5. 0

ನಿಮ್ಮ ಕಾಮೆಂಟ್ ಬರೆಯಿರಿ

advertisement