ಪ್ರಧಾನಿ ಮೋದಿ ‘ಮೋದಿʼ ಉಪನಾಮದ ಬಗ್ಗೆ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿಗೆ 2 ವರ್ಷ ಜೈಲು, ಮೇಲ್ಮನವಿ ಸಲ್ಲಿಸಲು 30 ದಿನಗಳ ಅವಕಾಶ

ಸೂರತ್: ಪ್ರಧಾನಿ ನರೇಂದ್ರ ಮೋದಿ  ಉಪನಾಮದ ವಿರುದ್ಧ  ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದೋಷಿ ಎಂದು ಸೂರತ್ ಕೋರ್ಟ್ ತೀರ್ಪು ನೀಡಿದೆ.
ಗುಜರಾತ್‌ನ ಸೂರತ್‌ನ ನ್ಯಾಯಾಲಯವು ಪ್ರಧಾನಿ ನರೇಂದ್ರ ಮೋದಿ ಅವರ ಉಪನಾಮದ (surname) ಬಗ್ಗೆ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ 2019 ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಗುರುವಾರ ತಪ್ಪಿತಸ್ಥರೆಂದು ಘೋಷಿಸಿದೆ. ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಆದರೆ ಅವರಿಗೆ 30 ದಿನಗಳ ಜಾಮೀನು ನೀಡಿದ್ದು, ತೀರ್ಪಿನ ಬಗ್ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ರಾಹುಲ್ ಗಾಂಧಿ ಅವರು ಇಂದು ಗುರುವಾರ ಮುಂಜಾನೆ ಸೂರತ್‌ಗೆ ಆಗಮಿಸಿದರು ಮತ್ತು ಕಾಂಗ್ರೆಸ್‌ನ ಗುಜರಾತ್ ಘಟಕದ ಉನ್ನತ ನಾಯಕರು ಅವರನ್ನು ಬರಮಾಡಿಕೊಂಡರು. ಪಕ್ಷದ ಬೆಂಬಲಿಗರು ಮತ್ತು ಸದಸ್ಯರು ಅವರನ್ನು ‘ಶೇರ್-ಎ-ಹಿಂದುಸ್ತಾನ್’ (ಭಾರತದ ಸಿಂಹ) ಎಂದು ಹೊಗಳಿದ ಪೋಸ್ಟರ್‌ಗಳು ಮತ್ತು “ಕಾಂಗ್ರೆಸ್” ಎಂಬ ಘೋಷಣೆಯ ಫಲಕಗಳನ್ನು ಪ್ರದರ್ಶಿಸಿದರು

“ಎಲ್ಲಾ ಕಳ್ಳರು ಮೋದಿ ಉಪನಾಮವನ್ನೇ ಯಾಕೆ ಹಂಚಿಕೊಳ್ಳುತ್ತಾರೆ?” ಎಂದು ಹೇಳಿಕೆ ನೀಡಿದ್ದ ರಾಹುಲ್‌ ಗಾಂಧಿ ವಿರುದ್ಧ ಬಿಜೆಪಿ ಶಾಸಕ ಮತ್ತು ಗುಜರಾತ್ ಮಾಜಿ ಸಚಿವ ಪೂರ್ಣೇಶ್ ಮೋದಿ ಪ್ರಕರಣ ದಾಖಲಿಸಿದ್ದರು. 2019 ರ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ರಾಃಉಲ್‌ ಗಾಂಧಿ ಅವರು ಇಡೀ ಮೋದಿ ಸಮುದಾಯವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಶಾಸಕ ಪೂರ್ಣೇಶ್ ಮೋದಿ ದೂರಿನಲ್ಲಿ ಆರೋಪಿಸಿದ್ದಾರೆ.
ಭೂಪೇಂದ್ರ ಪಟೇಲ್ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ ಪೂರ್ಣೇಶ್ ಮೋದಿ ಸಚಿವರಾಗಿದ್ದರು. ಡಿಸೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಸೂರತ್ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಮರು ಆಯ್ಕೆಯಾದರು.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

2019 ರ ಲೋಕಸಭಾ ಚುನಾವಣೆಗೆ ಮುನ್ನ ಕರ್ನಾಟಕದ ಕೋಲಾರದಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ರಾಹುಲ್‌ ಗಾಂಧಿ ಈ ಹೇಳಿಕೆಗಳನ್ನು ನೀಡಿದ್ದಾರೆ, ಅವರು ಪರಾರಿಯಾದ ಉದ್ಯಮಿಗಳಾದ ನೀರವ್ ಮೋದಿ ಮತ್ತು ಲಲಿತ್ ಮೋದಿ ಹಂಚಿಕೊಳ್ಳುವ ಉಪನಾಮ (ಅಡ್ಡ ಹೆಸರಿನ)ದ ಮೇಲೆ ಪ್ರಧಾನಿ ಮೋದಿಯನ್ನು ಗುರಿಯಾಗಿಸಿಕೊಂಡು ಮಾತನಾಡಿದ್ದರು. “ಎಲ್ಲಾ ಕಳ್ಳರು ಮೋದಿ ಉಪನಾಮವನ್ನೇ ಯಾಕೆ ಹಂಚಿಕೊಳ್ಳುತ್ತಾರೆ?” ಎಂದು ಕೇಳಿದ್ದರು.
ರಾಹುಲ್‌ ಗಾಂಧಿ ಅವರು ತಮ್ಮ ಹೇಳಿಕೆಯನ್ನು ದಾಖಲಿಸಲು ಅಕ್ಟೋಬರ್ 2021 ರಲ್ಲಿ ಈ ಪ್ರಕರಣದಲ್ಲಿ ಕೊನೆಯದಾಗಿ ಸೂರತ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ರಾಹುಲ್‌ ಗಾಂಧಿಯವರ ವಕೀಲರು ನ್ಯಾಯಾಲಯದ ಪ್ರಕ್ರಿಯೆಗಳು ಮೊದಲಿನಿಂದಲೂ “ದೋಷಪೂರಿತ” ಎಂದು ವಾದಿಸಿದ್ದಾರೆ. ಗಾಂಧಿ ಅವರ ಭಾಷಣದ ಪ್ರಮುಖ ಗುರಿಯಾಗಿರುವುದು ಪ್ರಧಾನಿ ನರೇಂದ್ರ ಮೋದಿಯೇ ಹೊರತು ಶಾಸಕ ಪೂರ್ಣೇಶ್ ಮೋದಿ ಅಲ್ಲ ಎಂದು ವಕೀಲರು ವಾದಿಸಿದ್ದರು.

5 / 5. 3

ನಿಮ್ಮ ಕಾಮೆಂಟ್ ಬರೆಯಿರಿ

advertisement