ಪ್ರಧಾನಿ ಮೋದಿ ಪದವಿ ಪ್ರಕರಣ: ಪಿಎಂಒ ಪ್ರಮಾಣಪತ್ರ ನೀಡುವ ಅಗತ್ಯವಿಲ್ಲ ಎಂದ ಗುಜರಾತ್ ಹೈಕೋರ್ಟ್ ; ಅರವಿಂದ್ ಕೇಜ್ರಿವಾಲ್‌ ಗೆ 25,000 ರೂ. ದಂಡ

ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣ ಪತ್ರಗಳನ್ನು ಪ್ರಧಾನ ಮಂತ್ರಿ ಕಾರ್ಯಾಲಯ ಮಾಹಿತಿ ಹಕ್ಕು ಕಾಯಿದೆ ಅಡಿ ಒದಗಿಸುವ ಅಗತ್ಯವಿಲ್ಲ ಎಂದು ಶುಕ್ರವಾರ ಗುಜರಾತ್‌ ಹೈಕೋರ್ಟ್‌ ಆದೇಶಿಸಿದೆ.
ಮೋದಿ ಪದವಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಪ್ರಧಾನಿ ಕಾರ್ಯಾಲಯದ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಒ) ಮತ್ತು ಗುಜರಾತ್‌ ಹಾಗೂ ದೆಹಲಿ ವಿಶ್ವವಿದ್ಯಾಲಯಗಳಿಗೆ ಆದೇಶಿಸಿದ್ದ 2016ರ ಮುಖ್ಯ ಮಾಹಿತಿ ಆಯೋಗ (Chief Information Commission)ದ ಆದೇಶವನ್ನು ನ್ಯಾಯಮೂರ್ತಿ ಬಿರೇನ್‌ ವೈಷ್ಣವ್‌ ಅವರಿದ್ದ ಏಕಸದಸ್ಯ ಪೀಠವು ಬದಿಗೆ ಸರಿಸಿದೆ.
ಅಲ್ಲದೆ, ಪ್ರಧಾನಿ ಮೋದಿಯವರ ಪದವಿ ಪ್ರಮಾಣ ಪತ್ರ ಮಾಹಿತಿ ಕೋರಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ನ್ಯಾಯಾಲಯವು ₹25,000 ದಂಡ ವಿಧಿಸಿದೆ. ಸಿಐಸಿ (CIC) ಆದೇಶ ಪ್ರಶ್ನಿಸಿ ಗುಜರಾತ್‌ ವಿಶ್ವವಿದ್ಯಾಲಯ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ ಗುಜರಾತ್‌ ಹೈಕೋರ್ಟ್‌ ಈ ಆದೇಶ ಮಾಡಿದೆ.
ಪ್ರಧಾನಿ ಮೋದಿಯವರ ಪದವಿ ಪ್ರಮಾಣಪತ್ರದ ವಿವರಗಳನ್ನು ಕೋರಿದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಗುಜರಾತ್ ಹೈಕೋರ್ಟ್ 25,000 ರೂಪಾಯಿ ವೆಚ್ಚವನ್ನು ವಿಧಿಸಿದೆ. ಕೇಜ್ರಿವಾಲ್ ಅವರು ನಾಲ್ಕು ವಾರಗಳಲ್ಲಿ ಗುಜರಾತ್ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಮೊತ್ತವನ್ನು ಠೇವಣಿ ಮಾಡಬೇಕಾಗುತ್ತದೆ.

ಪ್ರಮುಖ ಸುದ್ದಿ :-   ಗೂಢಲಿಪಿ ಬಹಿರಂಗಗೊಳಿಸಲು ಒತ್ತಾಯಿಸಿದರೆ ಭಾರತದಿಂದ ನಿರ್ಗಮಿಸಬೇಕಾಗ್ತದೆ ಎಂದ ವಾಟ್ಸಾಪ್

ಕಳೆದ ತಿಂಗಳು ನಡೆದ ವಿಚಾರಣೆಯಲ್ಲಿ ಗುಜರಾತ್‌ ವಿಶ್ವವಿದ್ಯಾಲಯ ಪ್ರತಿನಿಧಿಸಿದ್ದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು “ಇಲ್ಲಿ ಮುಚ್ಚಿಡುವಂಥದ್ದೇನು ಇಲ್ಲ. ಆದರೆ, ವಿಶ್ವವಿದ್ಯಾಲಯವನ್ನು ಮಾಹಿತಿ ನೀಡುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಧಿಕಾರ ಹಿಡಿದಿರುವ ವ್ಯಕ್ತಿ ಡಾಕ್ಟರೇಟ್‌ ಪಡೆದಿರಲಿ ಅಥವಾ ಅನಕ್ಷರಸ್ಥನಾಗಿರಲಿ ಅದರಿಂದ ಯಾವುದೇ ವ್ಯತ್ಯಾಸವಾಗುವುದಿಲ್ಲ. ಈ ಪ್ರಕರಣದಲ್ಲಿ ಯಾವುದೇ ತೆರನಾದ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಅಲ್ಲದೆ, ಇದರಿಂದ ಪ್ರಧಾನಿಯವರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂದು ವಾದಿಸಿದ್ದರು.
ಯಾರದೋ ಬೇಜವಾಬ್ದಾರಿಯುತ ಕುತೂಹಲ ತಣಿಸುವುದಕ್ಕೆ ನಮ್ಮನ್ನು ಮಾಹಿತಿ ನೀಡುವಂತೆ ಸೂಚಿಸಲಾಗದು. ಕೇಳಲಾಗಿರುವ ಮಾಹಿತಿಗೂ ಮೋದಿಯವರ ಸಾರ್ವಜನಿಕ ವ್ಯಕ್ತಿತ್ವಕ್ಕೂ ಸಂಬಂಧವಿಲ್ಲ. ಒಂದೊಮ್ಮೆ ರಾಷ್ಟ್ರಪತಿಯವರ ಎತ್ತರವೆಷ್ಟು, ಇತ್ಯಾದಿ ಮಾಹಿತಿಯನ್ನು ಆರ್‌ಟಿಐ ಅಡಿ ಕೇಳಿದರೆ ಅದಕ್ಕೆ ತರ್ಕವಿದೆಯೇ? ಅದರಲ್ಲಿ ಸಾರ್ವಜನಿಕ ಹಿತಾಸಕ್ತಿ ಇದೆಯೇ? ನಾನು ಏನು ತಿಂಡಿ ತಿಂದೆ ಎಂದು (ಆರ್‌ಟಿಐ ಅಡಿ) ಕೇಳಲಾಗದು. ಆದರೆ, ತಿಂಡಿ ತಿನ್ನಲು ಎಷ್ಟು ಹಣ ವ್ಯಯಿಸಿದ್ದೇನೆ ಎಂಬುದನ್ನು ಕೇಳಬಹುದಾಗಿದೆ” ಎಂದು ವಾದಿಸಿದ್ದರು.

ಅರವಿಂದ ಕೇಜ್ರಿವಾಲ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪೆರ್ಸಿ ಕವಿನಾ ಅವರು “ಮೋದಿ ಅವರು ಚುನಾವಣೆಯ ಸಂದರ್ಭದಲ್ಲಿ ಸಲ್ಲಿಸಿರುವ ಉಮೇದುವಾರಿಕೆಯಲ್ಲಿ ಶೈಕ್ಷಣಿಕ ಅರ್ಹತೆ ಉಲ್ಲೇಖಿಸಲಾಗಿದೆ. ಹೀಗಾಗಿ, ನಾವು ಪದವಿ ಪ್ರಮಾಣ ಪತ್ರದ ಪ್ರತಿಗಳನ್ನು ಕೇಳುತ್ತಿದ್ದೇವೆಯೇ ವಿನಃ ಅಂಕಪಟ್ಟಿಯನ್ನಲ್ಲ. ರಾಜೀವ್‌ ಶುಕ್ಲಾ ಎಂಬವರ ಜೊತೆ ಮೋದಿಯವರು ನೀಡಿರುವ ಸಂದರ್ಶನ ಅಂತರ್ಜಾಲದಲ್ಲಿದೆಯೇ ಹೊರತು ಪದವಿ ಪ್ರಮಾಣ ಪತ್ರವು ಅಂತರ್ಜಾಲದಲ್ಲಿ ಇಲ್ಲ. ಇದಕ್ಕಾಗಿ ನಾವು ಪದವಿ ಪ್ರಮಾಣ ಪತ್ರದ ಪ್ರತಿ ಕೇಳಿದ್ದೇವೆ” ಎಂದು ವಾದಿಸಿದ್ದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2024 : 2ನೇ ಹಂತದ 88 ಕ್ಷೇತ್ರಗಳಲ್ಲಿ 63% ಮತದಾನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement