ಭೂ ಮಂಜೂರಾತಿ ಅಕ್ರಮ: ಜೆಡಿಎಸ್‌ ಶಾಸಕ ಲಿಂಗೇಶ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರ್ಟ್‌ ಆದೇಶ

ಬೆಂಗಳೂರು: ಭೂ ಮಂಜೂರಾತಿ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆ ಬೇಲೂರು ಕ್ಷೇತ್ರದ ಜೆಡಿಎಸ್‌ ಶಾಸಕ ಕೆ .ಎಸ್‌. ಲಿಂಗೇಶ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ನಗರದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಗುರುವಾರ ಆದೇಶಿಸಿದೆ.
ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ.ಪ್ರೀತ್‌ ಅವರು ಆದೇಶಿಸಿದ್ದು, ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 156 (3)ರ ಅನುಸಾರ ತನಿಖೆ ನಡೆಸಿ 2023ರ ಜುಲೈ 7ಕ್ಕೆ ವರದಿ ಸಲ್ಲಿಸುವಂತೆ ಬೇಲೂರು ಪೊಲೀಸ್ ಠಾಣಾಧಿಕಾರಿಗೆ ನಿರ್ದೇಶಿಸಿದ್ದಾರೆ ಎಂದು ಬಾರ್‌ & ಬೆಂಚ್‌ ವರದಿ ಮಾಡಿದೆ.
ಬೇಲೂರು ತಾಲೂಕಿನ ಅಂದಾಜು ಮಾರುಕಟ್ಟೆ ಮೌಲ್ಯ ₹775 ಕೋಟಿಗೂ ಹೆಚ್ಚಿನ ಮೌಲ್ಯದ 2,750 ಎಕರೆ 86 ಗುಂಟೆಯಷ್ಟು ಸರ್ಕಾರಿ ಜಮೀನನ್ನು ಬಲಾಢ್ಯ, ಅನರ್ಹ ಮತ್ತು ಬೆಂಗಳೂರಿನ ವ್ಯಕ್ತಿಗಳಿಗೆ ನಕಲಿ ದಾಖಲೆ ಸೃಷ್ಟಿಸಿ ಮಂಜೂರು ಮಾಡಲಾಗಿದೆ. ಶಾಸಕ ಕೆ.ಎಸ್‌. ಲಿಂಗೇಶ್‌ ಸೇರಿದಂತೆ ಒಟ್ಟು 15 ಜನರು ಈ ಕೃತ್ಯದಲ್ಲಿ ಭಾಗಿಯಾಗಿದ್ದು ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೋಲಾರ ಗಾಂಧಿನಗರದ ನಿವಾಸಿ ಕೆ ಸಿ ರಾಜಣ್ಣ ಅವರು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

ಮಾಹಿತಿ ಹಕ್ಕು ಕಾಯಿದೆ ಅಡಿ ಪಡೆಯಲಾದ ವಿವರಗಳ ಪ್ರಕಾರ ಬೇಲೂರು ತಾಲ್ಲೂಕು ಕಸಬಾ ಹೋಬಳಿಯ ಪುರಸಭೆ ವ್ಯಾಪ್ತಿಯ 3 ಕಿ ಮೀ ಒಳಗಿನ ಮಾವಿನಕೆರೆ, ಬಂಟೇನಹಳ್ಳಿ, ಡಣಾಯ್ಕನಹಳ್ಳಿ, ಮುದಿಗೆರೆ ಹಾಗೂ ರಾಯಪುರದ ಸರ್ವೇ ನಂಬರ್‌ಗಳ ಪೈಕಿ 18 ಜನರಿಗೆ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕಾನೂನು ಬಾಹಿರವಾಗಿ ಮಂಜೂರು ಮಾಡಲಾಗಿದೆ. 2016ರ ಅಕ್ಟೋಬರ್ 28ರಿಂದ 2022ರ ಡಿಸೆಂಬರ್‌ 11ರ ಮಧ್ಯದ ಅವಧಿಯಲ್ಲಿ ನಡೆದ ಭೂ ಸಕ್ರಮೀಕರಣದ 26 ಸಭೆಗಳಲ್ಲಿ ಒಟ್ಟು 1,430 ಅರ್ಜಿದಾರರ ಪೈಕಿ 2,750 ಎಕರೆ 86 ಗುಂಟೆ ಜಮೀನಿನ ಅಕ್ರಮ ಮಂಜೂರಾತಿ ಪ್ರಕ್ರಿಯೆ ನಡೆದಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

ಹೇಮಾವತಿ, ಯಗಚಿ, ಜಲಾಶಯ ಯೋಜನೆಯಡಿ ಮುಳುಗಡೆ ಸಂತ್ರಸ್ತ ರೈತರು, ಯೋಧರಿಗೆ ಕಾಯ್ದಿರಿಸಿದ್ದ ಈ ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದನ್ನು ಬೆಂಗಳೂರು ಹಾಗೂ ಬೇರೆ ಬೇರೆ ತಾಲೂಕಿನ, ಹೊರಗಿನ ನಿವಾಸಿಗಳಿಗೆ ಅಕ್ರಮವಾಗಿ ಮಂಜೂರು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮಂಜೂರಾದ ಅರ್ಜಿದಾರರ ಪೈಕಿ 1,260 ಮಂದಿಗೆ ಸಾಗುವಳಿ ಚೀಟಿ ವಿತರಿಸಲಾಗಿದ್ದು, 1,260 ಅರ್ಜಿದಾರರಿಗೆ ಖಾತೆ ಮಾಡಲಾಗಿದೆ. ಇವುಗಳ ಪೈಕಿ ಬಹುತೇಕ ಭೂ ಮಂಜೂರಾತಿ ಪ್ರಕ್ರಿಯೆಯಲ್ಲಿ ಅಧಿಕಾರಿಗಳು, ಭೂ ಮಂಜೂರಾತಿ ಸಮಿತಿ ಅಧ್ಯಕ್ಷ, ಸದಸ್ಯರು, ಸದಸ್ಯ ಕಾರ್ಯದರ್ಶಿಗಳು ತಮ್ಮ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಸುಳ್ಳು ದಸ್ತಾವೇಜುಗಳನ್ನು ಸೃಷ್ಟಿಸಿರುವ ಈ ಸರ್ಕಾರಿ ನೌಕರರು ನಂಬಿಕೆ ದ್ರೋಹ ಎಸಗಿದ್ದಾರೆ. ಆದ್ದರಿಂದ, ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ದೂರುದಾರರು ಕೋರಿದ್ದರು

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement