ಗೂಗಲ್‌ ಮ್ಯಾಪ್‌ ಯಡವಟ್ಟು..: ಪತ್ನಿ ಕಾಟದಿಂದ ತಪ್ಪಿಸಿಕೊಳ್ಳಲು ₹26 ಲಕ್ಷದೊಂದಿಗೆ ಗೋವಾಕ್ಕೆ ಹೊರಟ ವ್ಯಕ್ತಿ ಬೆಳಗಾವಿಯಲ್ಲಿ ಸಿಕ್ಕಿಬಿದ್ದ..!

ಬೆಳಗಾವಿ : ಇದೊಂದು ವಿಚಿತ್ರ ವಿದ್ಯಮಾನ. ಬರೋಬ್ಬರಿ  26 ಲಕ್ಷ ರೂ.ಗಳನ್ನು ನಗದು ತೆಗೆದುಕೊಂಡು ಮುಂಬೈನಿಂದ ಗೋವಾಕ್ಕೆ ಕಾರಲ್ಲಿ ಹೊರಟಿದ್ದ ಮುಂಬೈ ಮೂಲದ ಗುತ್ತಿಗೆದಾರನೊಬ್ಬ ಬೆಳಗಾವಿಯಲ್ಲಿ ಸಿಕ್ಕಿಬಿದ್ದಿರುವ ಘಟನೆ ನಡೆದಿದ್ದು, ತಾನು ಹೆಂಡತಿಯ ಕಾಟದಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಗಿ ಹೇಳಿಕೊಂಡಿದ್ದಾನೆ.
ಕರ್ನಾಟಕದಲ್ಲಿ ಚುನಾವಣೆ ನಡೆಯುತ್ತಿರುವ ಸಂಬಂಧ ಬೆಳಗಾವಿಯ ಕರ್ನಾಟಕ ಚೌಕ್ ಬಳಿ ಸ್ಥಾಪಿಸಲಾದ ಚೆಕ್ ಪೋಸ್ಟ್ ನಲ್ಲಿ ಈತನ ಕಾರು ತಡೆದು ತಪಾಸಣೆ ಮಾಡಿದಾಗ 26 ಲಕ್ಷ ರೂ. ಹಣ ಪತ್ತೆಯಾಗಿದ್ದು, ಅದನ್ನು ಜಪ್ತಿ ಮಾಡಿಕೊಳ್ಳಲಾಗಿದೆ.
ಗೂಗಲ್ ಮ್ಯಾಪ್ ಆಧರಿಸಿ ಗೋವಾಕ್ಕೆ ತಾನು ಹಣದೊಂದಿಗೆ ಹೊರಟಿದ್ದಾಗಿ ಈ ವೇಳೆ ಗುತ್ತಿಗೆದಾರ ಪೊಲೀಸರಿಗೆ ತಿಳಿಸಿದ್ದಾನೆ. ಈ ಕುರಿತು ಪೊಲೀಸರಿಗೆ ಮಾಹಿತಿ ನೀಡಿರುವ ಗುತ್ತಿಗೆದಾರ ತಾನು ಒಯ್ಯುತ್ತಿದ್ದ ಹಣಕ್ಕೆ ದಾಖಲೆ ಇದೆ. ತಾನು ಮುಂಬೈಯಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಎಂದು ಹೇಳೀಕೊಂಡಿದ್ದಾನೆ.

ಈ ಸಂದರ್ಭದಲ್ಲಿ ಪೊಲೀಸರು ಇಷ್ಟು ದೊಡ್ಡ ಮೊತ್ತದ ಹಣ ಒಯ್ಯುತ್ತಿದ್ದ ಬಗ್ಗೆ ಆತನನ್ನು ಪ್ರಶ್ನಿಸಿದ್ದಾರೆ. ಆಗ ತಾನು ಪತ್ನಿ ಕಾಟ ತಾಳಲಾರದೆ ಕೌಟುಂಬಿಕ ಜಂಜಾಟದಿಂದ ಹೊರಬಂದು ನೆಮ್ಮದಿಗಾಗಿ ಗೋವಾಕ್ಕೆ ತೆರಳುತ್ತಿದ್ದೇನೆ. ಗೂಗಲ್ ಮ್ಯಾಪ್ ಅನುಸರಿಸಿ ಮುಂಬೈನಿಂದ ಗೋವಾಗೆ ಬರುತ್ತಿದ್ದೆ. ಆದರೆ ತಪ್ಪಾಗಿ ಬೆಳಗಾವಿಗೆ ಬಂದೆ ಎಂದು ಹೇಳಿಕೊಂಡಿದ್ದಾನೆ.
ಆನ್ಲೈನ್ ಪೇಮೆಂಟ್ ಮಾಡಿದರೆ ಬ್ಯಾಂಕ್ ಟ್ರಾನ್ಸಕ್ಷನ್ಸ್ ಮೂಲಕ ಅದು ಗೊತ್ತಾಗಿ ಬಿಡುತ್ತದೆ. ಹೀಗಾಗಿ ತಾನು ಕಾರಿನಲ್ಲಿ ಹಣದೊಂದಿಗೆ ಗೋವಾಕ್ಕೆ ಹೊರಟಿದ್ದಾಗಿ ತಿಳಿಸಿದ್ದಾನೆ. ಗೂಗಲ್‌ ಮ್ಯಾಪ್‌ ಅನುಸರಿಸಿ ಗೋವಾಕ್ಕೆ ಹೊರಟ ತಾನು ಗೊತ್ತಿಲ್ಲದೆ ಬೆಳಗಾವಿಗೆ ಬಂದುಬಿಟ್ಟಿದ್ದೇನೆ ಎಂದು ಹೇಳಿಕೊಂಡಿದ್ದಾನೆ. ಆತನಿಗೆ ಕರ್ನಾಟಕದ ಚುನಾವಣೆ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲೆಡೆ ಚೆಕ್‌ಪೋಸ್ಟ್‌ ತೆರೆಯಲಾಗಿದೆ. ಹೀಗಾಗಿ ಚೆಕ್‌ಪೋಸ್ಟ್‌ನಲ್ಲಿ ಪೊಲೀಸರಿಗೆ ಈತ ಸಿಕ್ಕಿಬಿದ್ದಿದ್ದಾನೆ. ಹಣದ ಮೂಲದ ಬಗ್ಗೆ ಪೊಲೀಸರು ಹಾಗೂ ಆದಾಯ ತೆರಿಗೆ ಇಲಾಖೆಗಳು ಹೆಚ್ಚಿನ ತನಿಖೆ ನಡೆಸುತ್ತಿದ್ದು ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಪ್ರಮುಖ ಸುದ್ದಿ :-   ಧರ್ಮಸ್ಥಳ ಪ್ರಕರಣದ ತನಿಖಾ ತಂಡದ ವಾಹನ ಚಾರ್ಮಾಡಿಯಲ್ಲಿ ಪಲ್ಟಿ

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement