ಮಂಗಳೂರು : ಕೋಳಿ ಸಾಂಬಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಗುತ್ತಿಗಾರು ಗ್ರಾಮದ ಮೊಗ್ರ ಏರಣ ಗುಡ್ಡೆ ಎಂಬಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಸುಳ್ಯ ತಾಲೂಕಿನ ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನಪ್ಪ ಎಂಬವರಿಗೂ ಅವರ ಪುತ್ರ ಶಿವರಾಮ ಎಂಬುವರಿಗೂ ಮಂಗಳವಾರ ತಡರಾತ್ರಿ ಕೋಳಿ ಪದಾರ್ಥದ ವಿಚಾರವಾಗಿ ಜಗಳ ಆರಂಭವಾಗಿದೆ. ಮೃತ ಶಿವರಾಮ ಮಧ್ಯರಾತ್ರಿ ಮನೆಗೆ ಬಂದು ಈ ಹಿಂದಿನ ಮಾಡಿದ ಕೋಳಿ ಸಾರು ಇಲ್ಲವೇ ಎಂದು ಕೇಳಿದ್ದಾನೆ. ಅಲ್ಲದೆ, ನನಗೆ ಈಗಲೇ ಕೋಳಿ ಸಾರು ಬೇಕು ಎಂದು ಹಠ ಹಿಡಿದಿದ್ದಾನೆ. ಅಲ್ಲದೆ, ಕೋಳಿಸಾರಿಗಾಗಿ ಮನೆಯಲ್ಲಿರುವ ಕೋಳಿಯನ್ನೇ ಹಿಡಿಯಲು ಹೋಗಿದ್ದಾನೆ. ಆಗ ತಂದೆ ಶೀನಪ್ಪ ಆಕ್ಷೇಪಿಸಿದ್ದಾರೆ. ಇದರಿಂದ ಜಗಳ ಆರಂಭವಾಗಿದ್ದು,ಇದನ್ನು ಆಕ್ಷೇಪಿಸಿ ಆತ ಕೂಗಾಡತೊಡಗಿದಾಗ ತಂದೆ ಶೀನಪ್ಪನಿಗೂ ಆತನಿಗೂ ಮಾತಿಗೆ ಮಾತು ಬೆಳೆದು ಜಗಳವಾಗಿದೆ. ಜಗಳ ವಿಕೋಪಕ್ಕೆ ಹೋಗಿ ಶೀನಪ್ಪ ಬಡಿಗೆಯಿಂದ ಮಗನ ತಲೆಗೆ ಹೊಡೆದಿದ್ದಾನೆ ಎಂದು ಆರೋಪಿಸಲಾಗಿದೆ. ಕುಸಿದುಬಿದ್ದ ಶಿವರಾಮನನ್ನು ಅಕ್ಕಪಕ್ಕದವರ ಸಹಾಯದಿಂದ 108 ಆಂಬುಲೆನ್ಸ್ ಮೂಲಕ ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಒಯ್ಯಲಾಯಿತು. ಆದರೆ, ದಾರಿ ಮಧ್ಯೆಯೇ ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದಾರೆ. ಶಿವರಾಮನಿಗೆ ಆರು ಮತ್ತು ಒಂದು ವರ್ಷದ ಇಬ್ಬರು ಮಕ್ಕಳಿದ್ದಾರೆ. ಬಲವಾದ ಏಟು ಬಿದ್ದು ತಲೆ ಒಡೆದ ಪರಿಣಾವಾಗಿ ಶಿವರಾಮ (35) ಸ್ಥಳದಲ್ಲೆ ಕುಸಿದು ಬಿದ್ದು ಸಾವಿಗೀಡಾಗಿದ್ದಾನೆ. ಮೃತನ ಪತ್ನಿ ಕವಿತಾ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ಸುಳ್ಯ ಸರ್ಕಲ್ ಇನ್‌ಸ್ಪೆಕ್ಟರ್ ರವೀಂದ್ರ, ಸುಬ್ರಹ್ಮಣ್ಯ ಠಾಣಾಧಿಕಾರಿ ಮಂಜುನಾಥ್ ಸೇರಿ ಪೊಲೀಸ್ ಸಿಬ್ಬಂದಿ ಆಗಮಿಸಿ ಆರೋಪಿ ಶೀನಪ್ಪನನ್ನು ಬಂಧಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ