ಕರ್ನಾಟಕ ವಿಧಾನಸಭೆ ಚುನಾವಣೆ 2023 : ಜೆಡಿಎಸ್-ಎಐಎಂಐಎಂ ಚುನಾವಣಾ ಪೂರ್ವ ಮೈತ್ರಿ ಮಾತುಕತೆ-ಮೈತ್ರಿ ಕಾಂಗ್ರೆಸ್‌ ಆತಂಕ ಹೆಚ್ಚಿಸಲಿದೆಯೇ..?

ಬೆಂಗಳೂರು : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ಪೂರ್ವಭಾವಿಯಾಗಿ, ಅಸಾದುದ್ದೀನ್ ಓವೈಸಿ ಅವರ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಚುನಾವಣಾ ಪೂರ್ವ ಮೈತ್ರಿ ಕುರಿತು ಜೆಡಿಎಸ್‌ ಜೊತೆ ಮಾತುಕತೆ ನಡೆಸುತ್ತಿದೆ.
ಒಟ್ಟು 224 ಸ್ಥಾನಗಳಲ್ಲಿ ಕನಿಷ್ಠ 25 ಸ್ಥಾನಗಳಲ್ಲಿ ಎಐಎಂಐಎಂ ಸ್ಪರ್ಧಿಸಲು ಬಯಸುತ್ತಿದೆ ಎಂದು ಹೇಳಲಾಗಿದೆ. ಇದು ಮುಸ್ಲಿಂ ಬಾಹುಳ್ಯದ ವಿಧಾನಸಭೆ ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಈ ಭಾಗಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸದಂತೆ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳಲಿದೆ ಹಾಗೂ ಉಳಿದೆಡೆ ಜೆಡಿಎಸ್‌ಗೆ ಬೆಂಬಲ ನೀಡಲಿದೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಪಕ್ಷವು ಸಹ ಹಲವಡೆ ಸ್ಪರ್ಧಿಸುತ್ತಿರುವುದರಿಂದ ಮುಸ್ಲಿಂ ಮತಗಳನ್ನು ಸೆಳೆಯುವ ಕಾಂಗ್ರೆಸ್‌ಗೆ ಆತಂಕಕ್ಕೆ ಕಾರಣವಾಗಬಹುದು. ಎಐಎಂಐಎಂ ಈಗಾಗಲೇ ವಿಜಯಪುರ ಮತ್ತು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಎಐಎಂಐಎಂ ಕೆಲವು ಸ್ಥಾನಗಳನ್ನು ಗೆದ್ದುಕೊಂಡಿದೆ.
2018 ರ ವಿಧಾನಸಭಾ ಚುನಾವಣೆಯಲ್ಲಿ, ಎಐಎಂಐಎಂ ಸ್ಪರ್ಧಿಸಿಲ್ಲ, ಬದಲಿಗೆ ಜೆಡಿಎಸ್‌ ಅನ್ನು ಬೆಂಬಲಿಸಲು ತೀರ್ಮಾನ ಮಾಡಿತು. ಜೆಡಿಎಸ್ ಈಗಾಗಲೇ 93 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದು, ಎಐಎಂಐಎಂ ಜೊತೆ ಯಾವುದೇ ಸೀಟು ಹಂಚಿಕೆ ಒಪ್ಪಂದವನ್ನು ಇನ್ನೂ ಘೋಷಿಸಿಲ್ಲ. ಆದರೆ ಎರಡನೇ ಪಟ್ಟಿಯನ್ನು ಪ್ರಕಟಿಸಿಲ್ಲ.
ಎಐಎಂಐಎಂ ಜೊತೆಗೆ, ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಸುಮಾರು 65-70 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸಿದೆ. ನಿಷೇಧಿತ ಪಿಎಫ್‌ಐನ ರಾಜಕೀಯ ಅಂಗ ಪಕ್ಷವಾದ ಎಸ್‌ಡಿಪಿಐ ಈಗಾಗಲೇ 19 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಘೋಷಿಸಿದೆ. ಎಸ್‌ಡಿಪಿಐ ಕೂಡ ಮುಸ್ಲಿಂ ಮತಗಳನ್ನು ವಿಭಜಿಸುವ ಸಾಧ್ಯತೆಯಿದೆ.
ಆದಾಗ್ಯೂ, ಅಲ್ಪಸಂಖ್ಯಾತರು ತಮ್ಮೊಂದಿಗೆ ಉಳಿಯುತ್ತಾರೆ ಎಂದು ಕಾಂಗ್ರೆಸ್ ಇನ್ನೂ ನಂಬುತ್ತದೆ. ಸ್ಥಳೀಯ ಚುನಾವಣೆಗಳಲ್ಲಿ ಮುಸ್ಲಿಮರು ಎಐಎಂಐಎಂ (AIMIM) ಮತ್ತು ಎಸ್‌ಡಿಪಿಐ (SDPI ಪಕ್ಷಗಳನ್ನು ಬೆಂಬಲಿಸಿದರೂ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಎಂದು ಪಕ್ಷ ನಂಬುತ್ತದೆ.
ಕರ್ನಾಟಕದ ಜನಸಂಖ್ಯೆಯಲ್ಲಿ ಅಂದಾಜಿ ಶೇ 12ರಷ್ಟು ಮುಸ್ಲಿಮರಿದ್ದಾರೆ. ಎಐಎಂಐಎಂ ಮತ್ತು ಜೆಡಿಎಸ್ ನಡುವಿನ ಸೀಟು ಹಂಚಿಕೆ ಮಾತುಕತೆ ಹೇಗೆ ನಡೆಯುತ್ತಿದೆ ಮತ್ತು ರಾಜ್ಯದಲ್ಲಿ ಅಲ್ಪಸಂಖ್ಯಾತರ ಮತಗಳ ಮೇಲೆ ಕಾಂಗ್ರೆಸ್ ತನ್ನ ಹಿಡಿತವನ್ನು ಉಳಿಸಿಕೊಳ್ಳಬಹುದೇ ಎಂದು ನೋಡಬೇಕಾಗಿದೆ.
ಕರ್ನಾಟಕದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ರಂದು ಫಲಿತಾಂಶ ಹೊರಬೀಳಲಿದೆ.

ಪ್ರಮುಖ ಸುದ್ದಿ :-   ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ ಭಾಗವತ್ ಪ್ರಯಾಣಿಸುತ್ತಿದ್ದ ರೈಲಿನ ಮೇಲೆ ಕಲ್ಲು ತೂರಾಟ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement