ಟಿಕೆಟ್ ಸಿಗದ ಹಿನ್ನೆಲೆ ಬಿಜೆಪಿಗೆ ರಾಜೀನಾಮೆ ನೀಡಲು ಮುಂದಾದ ಲಕ್ಷ್ಮಣ ಸವದಿ

ಬೆಳಗಾವಿ: ಬಿಜೆಪಿ ವಿಧಾನ ಪರಿಷತ್‌ ಸದಸ್ಯ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಟಿಕೆಟ್‌ ಕೈತಪ್ಪಿದ ಹಿನ್ನೆಲೆಯಲ್ಲಿ ಬಿಜೆಪಿಗೆ ರಾಜೀನಾಮೆ ಸಲ್ಲಿಸುವ ಮಾತನ್ನಾಡಿದ್ದಾರೆ.
ಅಥಣಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬಿಜೆಪಿ ನಾಯಕರು ಟಿಕೆಟ್‌ ನೀಡುವ ಆಶ್ವಾಸನೆ ನೀಡಿದ್ದರು. ಆದರೆ, ಕೊಟ್ಟ ಮಾತಿನಂತೆ ಅವರು ನಡೆದುಕೊಂಡಿಲ್ಲ. ಬಿಜೆಪಿಯಲ್ಲಿ ತತ್ವ ಸಿದ್ಧಾಂತಗಳು ಉಳಿದಿಲ್ಲ. ನಾಳೆ (ಗುರುವಾರ) ಕ್ಷೇತ್ರದ ಮತದಾರರ ಹಾಗೂ ಬೆಂಬಲಿಗರ ಅಭಿಪ್ರಾಯವನ್ನು ಕೇಳಿ ಮುಂದಿನ ತೀರ್ಮಾನವನ್ನು ಕೈಗೊಳ್ಳುತ್ತೇನೆ ಎಂದು ಸವದಿ ತಿಳಿಸಿದ್ದಾರೆ.
ಕೊನೆ ಗಳಿಗೆವರೆಗೂ ನಿನ್ನ ಜೊತೆ ಇದ್ದೇವೆ ಹೇಳಿ ಬಿಜೆಪಿ ನಾಯಕರು ಟಿಕೆಟ್‌ ಕೊಡಿಸುವ ಭರವಸೆ ನೀಡಿದ್ದರು. ಅವರು ನನ್ನ ಜೊತೆಗೆ ಇದ್ದಾರೆ ಎಂದು ಭಾವಿಸಿದ್ದೆ. ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತ. ಪಕ್ಷವನ್ನ ತಾಯಿಯ ಸ್ಥಾನದಲ್ಲಿ ಇಟ್ಟಿದ್ದೆ, ಆದರೆ ತಾಯಿ ಕೂಡ ಭ್ರಷ್ಟಳಾಗಿದ್ದಾಳೆ ಎನ್ನುವ ಭಾವನೆ ಬರುತ್ತಿದೆ. ಅವತ್ತಿನ ಬಿಜೆಪಿ ಇಂದಿನ ಬಿಜೆಪಿಗೆ ಬಹಳ ವ್ಯತ್ಯಾಸ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಬಸವರಾಜ ಬೊಮ್ಮಾಯಿ ಕಾಂಗ್ರೆಸ್‌ ಸೇರಲು ಸಿದ್ಧವಾಗಿದ್ದರು. ನಾವೇ ಅವರನ್ನು ತಡೆದಿದ್ದೆವು. ಈಗ ಅವರು ಮುಖ್ಯಮಂತ್ರಿಯಾಗಿದ್ದಾರೆ, ಟಿಕೆಟ್‌ ನೀಡದಿರುವ ಬಗ್ಗೆ ಹೈಕಮಾಂಡ್‌ ಮೊದಲೇ ಮಾಹಿತಿ ನೀಡಬೇಕಿತ್ತು. ಬಿಜೆಪಿ ತನ್ನ ಸಿದ್ಧಾಂತ ಮೀರಿ ಬೇರೆ ದಿಕ್ಕಿನತ್ತ ಹೋಗುತ್ತಿದೆ. ಬಸವರಾಜ ಬೊಮ್ಮಾಯಿ ಅವರು ಪ್ರಧಾನಿಯೂ ಆಗಬಹುದು ಅವರಿಗೆ ಒಳ್ಳೆಯ ಭವಿಷ್ಯವಿದೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವ್ಯಂಗ್ಯವಾಡಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದ 7 ಜಿಲ್ಲೆಗಳಲ್ಲಿ ನಾಳೆಯಿಂದ ಮತ್ತೆ ಮಳೆ ಅಬ್ಬರ ; ಉಳಿದ ಜಿಲ್ಲೆಗಳಲ್ಲಿ ಚುರುಕು

ಅಥಣಿ ಕ್ಷೇತ್ರದಲ್ಲಿ ಜನರೇ ಹೈಕಮಾಂಡ್‌. ಬಿಜೆಪಿ ಟಿಕೆಟ್​ ಸಿಗದ ಮೇಲೆ ಪಕ್ಷದಲ್ಲಿ ಇರಲು ಸಾಧ್ಯವೇ? ಅಥಣಿ ಕ್ಷೇತ್ರದ ಜನರ ರಕ್ಷಣೆ ಮಾಡುವುದು ನನ್ನ ಜವಾಬ್ದಾರಿ. ನಾಳೆ ಸಂಜೆ ಕ್ಷೇತ್ರದ ಜನರ ಜತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ. ಟಿಕೆಟ್‌ಗಾಗಿ ನಾನು ಭಿಕ್ಷೆ ಬೇಡಬೇಕಾ?   ನಿನಗೆ ಟಿಕೆಟ್​ ಕೊಡುವುದಕ್ಕೆ ಆಗಲ್ಲ ಸುಮ್ಮನೆ ಬಿದ್ದುಕೊಂಡು ಇರು ಎಂದು ಹೇಳಿದ್ದರೆ  ಕೇಳುತ್ತಿದ್ದೆ. ಅವರು ಸೌಜನ್ಯಕ್ಕಾದರೂ ಮೊದಲು ನನ್ನ ಜೊತೆ ಚರ್ಚೆ ಮಾಡಬೇಕಿತ್ತು. ಆದರೆ ಮಾಡಿಲ್ಲ. 20 ವರ್ಷದಿಂದ ಬಿಜೆಪಿ ಪಕ್ಷಕ್ಕೆ ನನ್ನಿಂದ ಸಮಸ್ಯೆಯಾಗಿದ್ದರೆ ಕ್ಷಮೆ ಇರಲಿ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement