ನವದೆಹಲಿ: ಮುಸ್ಲಿಂ ಸಮುದಾಯಕ್ಕೆ ಹಿಂದುಳಿದ ವರ್ಗದ ಅಡಿ ಕಲ್ಪಿಸಿದ್ದ ಶೇ. 4 ರಷ್ಟು ಮೀಸಲಾತಿ ಹಿಂಪಡೆದಿರುವ ಹಿಂದಿನ ಸಕಾರಣದ ಕುರಿತು ಕರ್ನಾಟಕ ಸರ್ಕಾರವನ್ನು ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನಿಸಿದೆ.
ಅಂತಿಮ ವರದಿ ವರೆಗೂ ಕಾಯದೇ ಮಧ್ಯಂತರ ವರದಿ ಆಧರಿಸಿ ರಾಜ್ಯ ಸರ್ಕಾರ ನಿರ್ಧಾರ ಕೈಗೊಂಡಿದೆ. ಆಯೋಗದ ಅಂತಿಮ ವರದಿ ಬರುವವರೆಗೂ ಸರ್ಕಾರ ಕಾಯಬಹುದಿತ್ತು ಎಂದು ನ್ಯಾಯಮೂರ್ತಿಗಳಾದ ಕೆ.ಎಂ. ಜೋಸೆಫ್ ಮತ್ತು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ನೇತೃತ್ವದ ವಿಭಾಗೀಯ ಪೀಠವು ಮೌಖಿಕವಾಗಿ ಹೇಳಿತು.
ಸರ್ಕಾರದ ಈ ಆದೇಶವು ಸಂಪೂರ್ಣವಾಗಿ ತಪ್ಪಾದ ಊಹೆಗಳನ್ನು ಆಧರಿಸಿದೆ… ನಿರ್ಧಾರದ ಹಿಂದಿನ ಅಡಿಪಾಯ ಅಭದ್ರವಾಗಿದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ” ಎಂದು ನ್ಯಾ. ಜೋಸೆಫ್ ಹೇಳಿದರು. ಅಲ್ಲದೇ, ಈ ಸಂಬಂಧ ಆಕ್ಷೇಪಣೆ ಸಲ್ಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿತು.
ಆಕ್ಷೇಪಣೆ ಸಲ್ಲಿಸಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ಮುಕುಲ್ ರೋಹಟಗಿ ಕಾಲಾವಕಾಶ ಕೋರಿದರು. ಏಪ್ರಿಲ್ 17ರ ವರೆಗೆ ಕಾಲಾವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 18ರಂದು ಮೊದಲ ಪ್ರಕರಣವನ್ನಾಗಿ ಪಟ್ಟಿ ಮಾಡಲು ನಿರ್ದೇಶಿಸಲಾಗಿದೆ. ಏಪ್ರಿಲ್ 18ರವರೆಗೆ ಯಾವುದೇ ನೇಮಕಾತಿ ಅಥವಾ ಪ್ರವೇಶ ಕಲ್ಪಿಸುವುದಿಲ್ಲ ಎಂಬ ಮೆಹ್ತಾ ಅವರ ಹೇಳಿಕೆಯನ್ನು ಆದೇಶದಲ್ಲಿ ನ್ಯಾಯಾಲಯ ದಾಖಲಿಸಿದೆ.
ಮುಸ್ಲಿಂ ಸಮುದಾಯದ ಪರವಾಗಿ ಹಾಜರಿದ್ದ ಹಿರಿಯ ವಕೀಲ ಕಪಿಲ್ ಸಿಬಲ್, ದುಷ್ಯಂತ್ ದವೆ ಹಾಗೂ ಗೋಪಾಲ್ ಶಂಕರನಾರಾಯಣನ್ ಅವರು “ಮುಸ್ಲಿಂ ಮೀಸಲಾತಿ ರದ್ದುಗೊಳಿಸುವ ಮೊದಲು ರಾಜ್ಯ ಸರ್ಕಾರ ಯಾವುದೇ ಅಧ್ಯಯನ ನಡೆಸಿಲ್ಲ ಮತ್ತು ಯಾವುದೇ ದತ್ತಾಂಶವನ್ನು ಆಧರಿಸಿ ಈ ನಿರ್ಧಾರ ಕೈಗೊಳ್ಳಲಾಗಿಲ್ಲ” ಎನ್ನುವ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತಂದರು. ಹಿರಿಯ ವಕೀಲ ದುಷ್ಯಂತ್ ದವೆ ಅವರು “ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಿಸಲು ಎರಡು ದಿನ ಬಾಕಿ ಇರುವಾಗ ಕರ್ನಾಟಕ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಇದಕ್ಕೆ ತಡೆ ನೀಡಬೇಕು. ಈ ಕುರಿತು ಯಾವುದೇ ಚರ್ಚೆ ನಡೆಸಲಾಗಿಲ್ಲ… ಅಲ್ಪಸಂಖ್ಯಾತರಿಗೆ ನ್ಯಾಯಾಲಯದ ರಕ್ಷಣೆ ಅಗತ್ಯವಾಗಿದೆ” ಎಂದು ಕೋರಿದರು.
ಮತ್ತೊಬ್ಬ ಹಿರಿಯ ವಕೀಲ ಕಪಿಲ್ ಸಿಬಲ್ “ಮುಸ್ಲಿಮರಿಗೆ ಮೀಸಲಾಗಿದ್ದ ಕೋಟಾ ಹಿಂಪಡೆದಿರುವುದು ಸಂವಿಧಾನದ 14ನೇ ವಿಧಿಯ ಉಲ್ಲಂಘನೆಯಾಗಿದೆ ಎಂದರು.
ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಧರ್ಮದ ಕಾರಣಕ್ಕಾಗಿ ಮುಸ್ಲಿಮರನ್ನು ಏಕಾಂಗಿಯಾಗಿಸಲಾಗಿದೆ. ಶೈಕ್ಷಣಿಕ ಸಂಸ್ಥೆಗಳು ಪ್ರವೇಶಾತಿ ಕಲ್ಪಿಸುವ ಸಂದರ್ಭದಲ್ಲಿ ಮೀಸಲಾತಿಯನ್ನು ತುರ್ತಾಗಿ ಹಿಂಪಡೆಯಲಾಗಿದೆ” ಎಂದು ಆಕ್ಷೇಪಿಸಿದರು.
ಕರ್ನಾಟಕ ಸರ್ಕಾರವನ್ನು ಪ್ರತಿನಿಧಿಸಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ “ಅರ್ಜಿದಾರರು ತಪ್ಪು ಹೇಳಿಕೆ ನೀಡುತ್ತಿದ್ದು, ಅವರ ಪರವಾಗಿ ತಡೆಯಾಜ್ಞೆ ಮಾಡುವ ನಿಟ್ಟಿನಲ್ಲಿ ನ್ಯಾಯಾಲಯವು ಮೇಲ್ನೋಟದ ನಿರ್ಧಾರಕ್ಕೆ ಬರಬಾರದು. ತಡೆ ನೀಡುವುದಕ್ಕೂ ಮುನ್ನ ಆಕ್ಷೇಪಣೆ ಸಲ್ಲಿಸಲಾಗುವುದು. ಇದಕ್ಕೂ ಮುನ್ನ, ಯಾವುದೇ ಪ್ರವೇಶಾತಿ ಅಥವಾ ನೇಮಕಾತಿ ಮಾಡಲಾಗುವುದಿಲ್ಲ ಎಂದು ತಿಳಿಸಿದರು.
ಮಧ್ಯಪ್ರವೇಶ ಕೋರಿದ್ದ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು ಮುಂದಿನ ಮಂಗಳವಾರದವರೆಗೆ ವಿಚಾರಣೆ ಮುಂದೂಡುವಂತೆ ಪೀಠಕ್ಕೆ ಮನವಿ ಮಾಡಿದರು.
ಮುಸ್ಲಿಮ್ ಸಮುದಾಯವು ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ (ಇಡಬ್ಲುಎಸ್) ಮೀಸಲಾಗಿರುವ ಶೇ.10 ಕೋಟಾದ ಅಡಿ ಮೀಸಲಾತಿ ನೀಡಲಾಗಿದೆ. ಮುಸ್ಲಿಮ್ ಸಮುದಾಯದಿಂದ ಹಿಂಪಡೆಯಲಾಗಿರುವ ಶೇ. 4 ಮೀಸಲಾತಿಯನ್ನು ಒಕ್ಕಲಿಗ ಮತ್ತು ವೀರಶೈವ-ಲಿಂಗಾಯತ ಸಮುದಾಯಗಳಿಗೆ ಸಮಾನವಾಗಿ ಹಂಚಿಕೆ ಮಾಡಿ ರಾಜ್ಯ ಸರ್ಕಾರದ ಆದೇಶ ಮಾಡಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ