ಚುನಾವಣೆ ಹೊತ್ತಲ್ಲೇ ಸಂಕಷ್ಟ:  ಡಿ.ಕೆ.ಶಿವಕುಮಾರ ವಿರುದ್ಧ ಸಿಬಿಐ ತನಿಖೆ ಪ್ರಶ್ನಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಬೆಂಗಳೂರು: ಚುನಾವಣೆ ಹೊಸ್ತಿಲಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಅವರಿಗೆ ಸಂಕಷ್ಟ ಎದುರಾಗಿದೆ. ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿದ್ದನ್ನು ಪ್ರಶ್ನಿಸಿ ಡಿ.ಕೆ. ಶಿವಕುಮಾರ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ವಜಾಗೊಳಿಸಿದೆ.
ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿಗಳಿಕೆ ಆರೋಪದ ಮೇಲೆ ಸಿಬಿಐ ತನಿಖೆಗೆ ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಆದರೆ ತನಿಖೆಗೆ ತಡೆ ನೀಡುವಂತೆ ಕೋರಿ ಡಿ.ಕೆ ಶಿವಕುಮಾರ ಅವರು ಹೈಕೋರ್ಟ್‌ ಮೆಟ್ಟಿಲೇರಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ತನ್ನ ತೀರ್ಪುನ್ನು ಕಾಯ್ದಿರಿಸಿತ್ತು. ಇಂದು (ಗುರುವಾರ) ತೀರ್ಪು ಪ್ರಕಟಿಸಿರುವ ಹೈಕೋರ್ಟ್‌ ಏಕಸದಸ್ಯ ಪೀಠ ಡಿ.ಕೆ ಶಿವಕುಮಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಈ ಹಿಂದೆ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ಏಕಸದಸ್ಯ ಪೀಠವು ಡಿ.ಕೆ.ಶಿವಕುಮಾರ ಮತ್ತು ಸಿಬಿಐ ವಕೀಲರ ವಾದವನ್ನು ಆಲಿಸಿ, ತನ್ನ ಆದೇಶ ಕಾಯ್ದಿರಿಸಿತ್ತು. ಹಾಗೂ ಸಿಬಿಐ ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ವಿಸ್ತರಿಸಿತ್ತು.
ನ್ಯಾಯಾಧಿಶರು ಈ ಮೊದಲು ಫೆ. 24ರವರೆಗೂ ಸಿಬಿಐ ತನಿಖೆಗೆ ಮಧ್ಯಂತರ ತಡೆ ನೀಡಿತ್ತು. ಬಳಿಕ ಮಾ.31, ಏ.6, ಏ.13 ಹಾಗೂ ಏ.17ರ ವರೆಗೆ ಮಧ್ಯಂತರ ತಡೆ ನೀಡಿತ್ತು. ಪ್ರಸ್ತುತ ವಿಚಾರಣೆ ಅಂತ್ಯಗೊಂಡಿದ್ದರಿಂದ ತನ್ನ ತೀರ್ಪುನ್ನು ಕಾಯ್ದಿರಿಸಿತ್ತು. ಇದೀಗ, ಅರ್ಜಿಯನ್ನು ರದ್ದುಗೊಳಿಸಿದ್ದಾರೆ.
2019 ರಲ್ಲಿ ರಾಜ್ಯ ಸರ್ಕಾರ ಶಿವಕುಮಾರ ವಿರುದ್ಧದ ತನಿಖೆಗೆ ಅನುಮತಿ ನೀಡಿತ್ತು. ಆಗ ರಾಜ್ಯ ಸರ್ಕಾರದ ಅನುಮತಿ ಮೇರೆಗೆ ಸಿಬಿಐ ಎಫ್‌ಐಆರ್ ದಾಖಲಿಸಿತ್ತು.

ಪ್ರಮುಖ ಸುದ್ದಿ :-   ಬೆಳಗಾವಿ| ಕಬ್ಬು ದರ ನಿಗದಿ ; ಸಿಎಂ ಸಭೆಗೂ ಮುನ್ನ ಕೈಕೈ ಮಿಲಾಯಿಸಿದ ಇಬ್ಬರು ರೈತ ನಾಯಕರ ಬೆಂಬಲಿಗರು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement