ವಿನಯ ಕುಲಕರ್ಣಿ ಧಾರವಾಡ ಪ್ರವೇಶಕ್ಕೆ ಇಲ್ಲ ಅನುಮತಿ : ಅರ್ಜಿ ವಜಾಗೊಳಿಸಿದ ಹೈಕೋರ್ಟ್​​

ಬೆಂಗಳೂರು: ಬಿಜೆಪಿ ಮುಖಂಡ ಯೋಗೀಶ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡ ಪ್ರವೇಶಕ್ಕೆ ಅನುಮತಿ ಕೋರಿ ಕಾಂಗ್ರೆಸ್​ ನಾಯಕ ವಿನಯ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ಶುಕ್ರವಾರ ವಜಾಗೊಳಿಸಿದೆ.
ತಾನು ಚುನಾವಣೆಗೆ ಸ್ಪರ್ಧಿಸಿದ್ದರಿಂದ ಧಾರವಾಡಕ್ಕೆ ಪ್ರವೇಶಿಸಲು ಅನುಮತಿ ನೀಡುವಂತೆ ವಿನಯ​ ಕುಲಕರ್ಣಿ ಪರ ವಕೀಲರು ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಿದ್ದರು.
ಕಾಂಗ್ರೆಸ್ ಅಭ್ಯರ್ಥಿಯಾಗಿರುವ ವಿನಯ್ ಕುಲಕರ್ಣಿ 30 ದಿನಗಳ ಕಾಲ ಧಾರವಾಡದಲ್ಲಿ ನೆಲೆಸಲು ಅನುಮತಿ ನೀಡುವಂತೆ ಕೋರಿದ್ದ ಹಾಗೂ ಸಾಕ್ಷ್ಯ ನಾಶ ಸಂಬಂಧ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ವಿನಾಯಿತಿ ಕೋರಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಕೆ. ನಟರಾಜನ್‌ ಅವರಿದ್ದ ನೇತೃತ್ವದ ಏಕಸದಸ್ಯ ಪೀಠವು ವಜಾ ಮಾಡಿತು.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ.ಎಚ್‌. ಜಾಧವ “ವಿನಯ್ ಕುಲಕರ್ಣಿ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಲಾಗಿದೆ. ಇದೀಗ ಧಾರವಾಡ ವಿಧಾನಸಭಾ ಕ್ಷೇತ್ರದಲ್ಲಿ ಕುಲಕರ್ಣಿ ಅವರು ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದಾರೆ. ನ್ಯಾಯಸಮ್ಮತ ಚುನಾವಣೆಯ ದೃಷ್ಟಿಯಿಂದ ಅವರಿಗೆ ಧಾರವಾಡ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ಪೀಠವನ್ನು ಕೋರಿದರು.

ಇದಕ್ಕೆ ಪೀಠವು “ಟಿಕೆಟ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್‌ಗೆ ಅರ್ಜಿದಾರರು ಧಾರವಾಡ ಪ್ರವೇಶಕ್ಕೆ ನಿರ್ಬಂಧ ವಿಧಿಸಿರುವ ಅಂಶ ಗೊತ್ತಿಲ್ಲವೇ? ಹೇಗೆ ಟಿಕೆಟ್ ನೀಡಿದರು” ಎಂದು ಪ್ರಶ್ನಿಸಿತು.
ಸಿಬಿಐ ಪ್ರತಿನಿಧಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕರಾದ ಪಿ ಪ್ರಸನ್ನಕುಮಾರ ಅವರು “ವಿನಯ ಕುಲಕರ್ಣಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ಪ್ರಕರಣದಲ್ಲಿ 45 ಸಾಕ್ಷಿಗಳಿದ್ದು, ಅವರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ. ಪ್ರಕರಣ ಗಂಭೀರವಾಗಿರುವುದರಿಂದ ಅವರಿಗೆ ಧಾರವಾಡ ಪ್ರವೇಶ ನಿರ್ಬಂಧಿಸಿರುವುದು ಸೇರಿ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದೆ. ಹೀಗಾಗಿ ಅವರಿಗೆ ಪ್ರವೇಶಕ್ಕೆ ಅವಕಾಶ ನೀಡಬಾರದು ಎಂದು ವಾದಿಸಿದರು.
ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ವಿಚಾರಣಾಧೀನ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಹೀಗಿರುವಾಗ, ನೀವು ಸುಪ್ರೀಂ ಕೋರ್ಟ್‌ನಲ್ಲಿ ಇದನ್ನು ಪ್ರಶ್ನೆ ಮಾಡಬಹುದು. ಇಲ್ಲೇಕೆ ಪ್ರಶ್ನೆ ಮಾಡಿದ್ದೀರಿ? ಎಂದು ಕೇಳಿದ ಪೀಠವು ಅರ್ಜಿಗಳನ್ನು ವಜಾಗೊಳಿಸಿತು.
ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಬೇಕು ಎಂದು ಕೋರಿ ವಿನಯ ಕುಲಕರ್ಣಿ ಅರ್ಜಿ ಸಲ್ಲಿಸಿದ್ದರು. ಅದರಂತೆ ಈ ಅರ್ಜಿಯನ್ನು ಬೆಂಗಳೂರು ಜನಪ್ರತಿನಿಧಿಗಳ ವಿಶೇಷ ನ್ಯಾಯಲಯ ಏಪ್ರಿಲ್‌ 17 ರಂದು ವಿಚಾರಣೆ ನಡೆಸಿತ್ತು. ವಾದ-ಪ್ರತಿವಾದವನ್ನು ಆಲಿಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ​​ ಏಪ್ರಿಲ್‌ 18 ರಂದು ವಿನಯ ಕುಲಕರ್ಣಿ ಅರ್ಜಿಯನ್ನು ವಜಾಗೊಳಿಸಿತ್ತು

ಪ್ರಮುಖ ಸುದ್ದಿ :-   ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement