ನಮ್ಮಲ್ಲಿ ಯಾವುದೇ ವೈಯಕ್ತಿಕ ಪ್ರತಿಷ್ಠೆ ಇಲ್ಲ: ನಿತೀಶ ಜೊತೆಗಿನ ಸಭೆಯ ನಂತರ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: 2024ರ ಲೋಕಸಭಾ ಚುನಾವಣೆ ಮುಂಚಿತವಾಗಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಮಹಾಮೈತ್ರಿ ರೂಪಿಸಲು ಯತ್ನಿಸುತ್ತಿರುವ ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಹಾಗೂ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಇಂದು, ಸೋಮವಾರ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ಭೇಟಿಯಾಗಿದ್ದಾರೆ.
ಭೇಟಿಯ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಮತಾ ಬ್ಯಾನರ್ಜಿ, ನಮ್ಮಲ್ಲಿ ಯಾವುದೇ ವೈಯಕ್ತಿಕ ಪ್ರತಿಷ್ಠೆ ಇಲ್ಲ. ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಲು ಬಯಸುತ್ತೇವೆ ಎಂದರು.
ನಾನು ನಿತೀಶ ಅವರಿಗೆ ಒಂದು ಮನವಿ ಮಾಡಿದ್ದೇನೆ. ಜಯಪ್ರಕಾಶ ನಾರಾಯಣ ಅವರ ಅವರ ಚಳುವಳಿ ಬಿಹಾರದಿಂದ ಪ್ರಾರಂಭವಾಗಿತ್ತು. ಬಿಹಾರದಲ್ಲಿ ಸರ್ವಪಕ್ಷ ಸಭೆ ನಡೆಸಿದರೆ, ಮುಂದೆ ಎಲ್ಲಿಗೆ ಹೋಗಬೇಕು ಎಂಬುದನ್ನು ನಂತರ ನಿರ್ಧರಿಸಬಹುದು. ಆದರೆ ಎಲ್ಲಕ್ಕಿಂತ ಮೊದಲು ನಾವು ಒಗ್ಗಟ್ಟಾಗಿದ್ದೇವೆ ಎಂಬ ಸಂದೇಶವನ್ನು ನೀಡಬೇಕಾಗಿದೆ. ನನ್ನ ಅಭ್ಯಂತರವಿಲ್ಲ ಎಂದು ಮೊದಲೇ ಹೇಳಿದ್ದೇನೆ ಎಂದರು.
ಬಿಹಾರ ಮುಖ್ಯಮಂತ್ರಿ ನಿತೀಶಕುಮಾರ ಅವರು ಮಾತನಾಡಿ, ಇಂದು ಸಕಾರಾತ್ಮಕ ಚರ್ಚೆಯಾಗಿದೆ. ಆದರೆ ವಿರೋಧ ಪಕ್ಷಗಳು ಒಟ್ಟಿಗೆ ಕುಳಿತು ಕಾರ್ಯತಂತ್ರ ರೂಪಿಸುವ ಅಗತ್ಯವಿದೆ ಎಂದು ಹೇಳಿದರು.
ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಪ್ರತಿಪಕ್ಷಗಳ ಪಡೆಗಳನ್ನು ಒಗ್ಗೂಡಿಸುವ ಕಾರ್ಯದ ಜವಾಬ್ದಾರಿ ವಹಿಸಿಕೊಂಡಿರುವ ಬಿಹಾರ ಮುಖ್ಯಮಂತ್ರಿ ನಿತೀಶ ಅವರು ಸೋಮವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ ಯಾದವ್ ಅವರನ್ನು ಭೇಟಿಯಾಗಲಿದ್ದಾರೆ.
ತೃಣಮೂಲ ಕಾಂಗ್ರೆಸ್ ಮತ್ತು ಎಸ್‌ಪಿ ಎರಡೂ ಕಾಂಗ್ರೆಸ್‌ ಪಕ್ಷದೊಂದಿಗೆ ಮೈತ್ರಿಗೆ ಉತ್ಸುಕರಾಗಿಲ್ಲ. ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಸೇರಿದಂತೆ ಸಮಾನ ಮನಸ್ಕ ವಿರೋಧ ಪಕ್ಷಗಳೊಂದಿಗೆ ಕೆಲವು ಸಭೆಗಳಲ್ಲಿ ಪಾಲ್ಗೊಳ್ಳುವ ಕಾಂಗ್ರೆಸ್ ಅನ್ನು ಒಳಗೊಂಡಿರುವ ಒಂದು ಒಕ್ಕೂಟದಲ್ಲಿ ನನಗೆ ಯಾವುದೇ ಆಸಕ್ತಿ ಇಲ್ಲ ಎಂದು ಅಖಿಲೇಶ್ ಯಾದವ್ ಸ್ಪಷ್ಟಪಡಿಸಿದ್ದಾರೆ. 2017ರ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿ ಸೋತ ನಂತರ ಅವರ ಹೇಳಿಕೆ ಮಹತ್ವ ಪಡೆದಿದೆ.

ಪ್ರಮುಖ ಸುದ್ದಿ :-   ʼಗೋವಾದ ಮೇಲೆ ಬಲವಂತವಾಗಿ ಭಾರತದ ಸಂವಿಧಾನದ ಹೇರಿಕೆ ; ಕಾಂಗ್ರೆಸ್ ಅಭ್ಯರ್ಥಿ ಹೇಳಿಕೆಯಿಂದ ಭುಗಿಲೆದ್ದ ವಿವಾದ : ದೇಶ ಒಡೆಯುವ ಹುನ್ನಾರ ಎಂದ ಪ್ರಧಾನಿ ಮೋದಿ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement