ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವಿಗಾಗಿ ಪ್ರಧಾನಿ ಮೋದಿಯವರ ಪ್ರಚಾರದ ಯೋಜನೆ ಸಿದ್ಧಗೊಂಡಿದೆ. ಕರ್ನಾಟಕದಲ್ಲಿ ಒಟ್ಟು 6 ದಿನ ಪ್ರಚಾರಕ್ಕೆ ಬರಲಿರುವ ಮೋದಿ, 180 ಕ್ಷೇತ್ರಗಳ ವ್ಯಾಪ್ತಿ ಒಳಗೊಂಡಂತೆ 21 ಕಡೆ ಬೃಹತ್ ಚುನಾವಣಾ ಸಮಾವೇಶ ಹಾಗೂ ರೋಡ್ ಶೋ ನಡೆಸಲಿದ್ದಾರೆ.
ಮೈಸೂರು, ಬೆಂಗಳೂರು ರೋಡ್ ಶೋ ನಿಗದಿಯಾಗಿದ್ದು, ಉಳಿದೆಡೆ ಪ್ರಚಾರಕ್ಕಾಗಿ ರೂಪು ರೇಷೆ ಸಿದ್ಧಗೊಂಡಿದೆ. ಪ್ರತಿ ಭೇಟಿ ವೇಳೆಯಲ್ಲೂ ತಲಾ 2 ದಿನ ಪ್ರಚಾರ ಮಾಡಲು ಯೋಜನೆ ಸಿದ್ಧಪಡಿಸಲಾದೆ.
ಯಾವ ದಿನ ಎಲ್ಲೆಲ್ಲಿ ಕಾರ್ಯಕ್ರಮ
ಏಪ್ರಿಲ್ 29ರಂದು ಹುಮ್ನಾಬಾದ್, ವಿಜಯಪುರ, ಕುಡಚಿ, ಬೆಂಗಳೂರು ಉತ್ತರ, ಏಪ್ರಿಲ್ 30ರಂದು ಕೋಲಾರ, ಚನ್ನಪಟ್ಟಣ, ಬೇಲೂರು, ಮೈಸೂರು, ಮೇ 2ರಂದು ಚಿತ್ರದುರ್ಗ, ವಿಜಯನಗರ, ಸಿಂಧನೂರು, ಕಲಬುರಗಿ ಮೇ 3ರಂದು ಮೂಡುಬಿದಿರೆ, ಕಾರವಾರ, ಕಿತ್ತೂರು, ಮೇ 6ರಂದು ಚಿತ್ತಾಪುರ, ನಂಜನಗೂಡು, ತುಮಕೂರು ಗ್ರಾಮಾಂತರ, ಬೆಂಗಳೂರು ದಕ್ಷಿಣ ಹಾಗೂ ಮೇ 7ರಂದು ಬಾದಾಮಿ, ಹಾವೇರಿ, ಶಿವಮೊಗ್ಗ ಗ್ರಾಮಾಂತರ, ಬೆಂಗಳೂರು ಕೇಂದ್ರದಲ್ಲಿ ಸಮಾವೇಶ ನಡೆಸಲು ಯೋಜನೆ ರೂಪಿಸಲಾಗಿದೆ.
50 ಲಕ್ಷ ಬೂತ್ ಕಾರ್ಯಕರ್ತರ ಜೊತೆ ಮೋದಿ ಸಂವಾದ
ಇದಲ್ಲದೆ, ರಾಜ್ಯದ 50 ಲಕ್ಷ ಬೂತ್ ಕಾರ್ಯಕರ್ತರ ಜೊತೆ ಮೋದಿ ಸಂವಾದ ನಡೆಸಲಿದ್ದಾರೆ. ಡಿಜಿಟಲ್ ಮೂಲಕ 58,112 ಬೂತ್ ಗಳಲ್ಲಿ 1680 ಜಿಲ್ಲಾ ಪಂಚಾಯತ ಕ್ಷೇತ್ರದ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಾಹಿತಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮಾಹಿತಿ ನೀಡಿದ್ದಾರೆ.
650 ಎಲ್ಇಡಿ ಪರದೆಗಳ ಅಳವಡಿಕೆ ಮಾಡಲಾಗುತ್ತದೆ. 24 ಲಕ್ಷ ಕಾರ್ಯಕರ್ತರಿಗೆ ಮೋದಿ ಆ್ಯಪ್ ನ ಲಿಂಕ್ ಕಳುಹಿಸಲಾಗಿದೆ. ಈ ಆ್ಯಪ್ ಮೂಲಕವೂ ಜನರು ಮೋದಿಯವರ ಸಂವಾದ ವೀಕ್ಷಣೆ ಮಾಡಲಿದ್ದಾರೆ ಎಂದರು.
ನಿಮ್ಮ ಕಾಮೆಂಟ್ ಬರೆಯಿರಿ