ಆರೋಪ ಗಂಭೀರವಾದದ್ದು….: ಭಾರತ ಕುಸ್ತಿ ಒಕ್ಕೂಟದ ಅಧ್ಯಕ್ಷರ ವಿರುದ್ಧದ ಲೈಂಗಿಕ ಕಿರುಕುಳದ ದೂರು ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

ನವದೆಹಲಿ: ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಭಾರತ ಕುಸ್ತಿ ಒಕ್ಕೂಟದ (ಡಬ್ಲ್ಯುಎಫ್‌ಐ) ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೋರಿ ಕುಸ್ತಿಪಟುಗಳು ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಮಂಗಳವಾರ ಸಮ್ಮತಿಸಿದೆ. ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಿಚಾರಣೆ ನಡೆಸಲಿದೆ.
ಕುಸ್ತಿಪಟುಗಳು ಎತ್ತಿರುವ ಆರೋಪಗಳು ಗಂಭೀರವಾಗಿದ್ದು, ಅದನ್ನು ಸುಪ್ರೀಂ ಕೋರ್ಟ್ ಪರಿಗಣಿಸುವ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ ನೇತೃತ್ವದ ಪೀಠ ತಿಳಿಸಿದೆ.
ಭಾರತವನ್ನು ಪ್ರತಿನಿಧಿಸಿರುವ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ (ಬ್ರಿಜ್‌ ಭೂಷಣ್) ಎಂದು ಗಂಭೀರ ಸ್ವರೂಪದ ಆರೋಪಗಳು ಅರ್ಜಿಯಲ್ಲಿವೆ. ಹೀಗಾಗಿ ಪ್ರಕರಣವನ್ನು ನ್ಯಾಯಾಲಯ (ವಿಚಾರಣೆಗೆ) ಪರಿಗಣಿಸುವ ಅಗತ್ಯವಿದೆ” ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣವನ್ನು ನ್ಯಾಯಾಲಯದೆದುರು ಪ್ರಸ್ತಾಪಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌ ಸಂತ್ರಸ್ತರಲ್ಲಿ ಅಪ್ರಾಪ್ತ ವಯಸ್ಕರೂ ಸೇರಿದ್ದಾರೆ ಎಂದರು. “ಇವರು (ಸಂತ್ರಸ್ತರು) ಮಹಿಳಾ ಕುಸ್ತಿಪಟುಗಳು. ಅಪ್ರಾಪ್ತ ವಯಸ್ಕರೂ ಸೇರಿದಂತೆ ಏಳು ಮಂದಿ ಇದ್ದಾರೆ. ಸಮಿತಿಯ ವರದಿ ಬಹಿರಂಗಗೊಂಡಿಲ್ಲ. ಎಫ್‌ಐಆರ್ ದಾಖಲಾಗುತ್ತಿಲ್ಲ. ದಯವಿಟ್ಟು ಅಪ್ರಾಪ್ತೆ ನೀಡಿರುವ ಕೊನೆಯ ದೂರನ್ನು ನೋಡಿ .. ಆಕೆ ಚಿನ್ನದ ಪದಕ ಗೆದ್ದಿದ್ದಾಳೆ ” ಎಂದು ಕಪಿಲ್ ಸಿಬಲ್ ಹೇಳಿದರು. ಈ ವಿಷಯವು ಲೈಂಗಿಕ ಕಿರುಕುಳವನ್ನು ಒಳಗೊಂಡಿರುವ ಕಾರಣ, ಪೊಲೀಸರು ಪ್ರಕರಣವನ್ನು ದಾಖಲಿಸಬೇಕಾಗುತ್ತದೆ ಎಂದು ಸಿಬಲ್ ವಾದಿಸಿದರು.

ಪ್ರಮುಖ ಸುದ್ದಿ :-   ಭೀಕರ ದುರಂತ : ಭಾರತೀಯ ವಾಯುಪಡೆಯ AN-32 ವಿಮಾನ ಪತನ ; ಐವರು ಸಿಬ್ಬಂದಿ ಸಾವು

ಪ್ರಕರಣವನ್ನು ವಿಚಾರಣೆಗೆ ಪರಿಗಣಿಸುವ ಮುನ್ನ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಾಲಯ ಮನವಿಯನ್ನು ಪುರಸ್ಕರಿಸಲಾಗಿದೆ ಎಂದು ತಿಳಿಸಿತು. ಸಂವಿಧಾನದ 32 ನೇ ವಿಧಿಯ ಅಡಿಯಲ್ಲಿ ಮೂಲಭೂತ ಹಕ್ಕುಗಳನ್ನು ರಕ್ಷಿಸುವ ತನ್ನ ಕರ್ತವ್ಯದ ಬಗ್ಗೆ ನ್ಯಾಯಾಲಯವು ಜಾಗೃತವಾಗಿದೆ ಎಂದು ಸಿಜೆಐ ಚಂದ್ರಚೂಡ ಅವರು ಹೇಳಿದರು. ಇದು ವ್ಯಕ್ತಿಗಳು ನ್ಯಾಯವನ್ನು ಪಡೆಯಲು ಉನ್ನತ ನ್ಯಾಯಾಲಯಕ್ಕೆ ತೆರಳಲು ಅನುವು ಮಾಡಿಕೊಡುತ್ತದೆ. (ದೂರಿನೊಂದಿಗೆ ನೀಡಿರುವ) ಅರ್ಜಿದಾರರ ಗುರುತನ್ನು ಮರೆಮಾಚಬೇಕು. ಹಾಗೆ ಮರೆಮಾಚಿದ ಪ್ರತಿ ಮಾತ್ರವೇ ಸಾರ್ವಜನಿಕವಾಗಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು. ಶುಕ್ರವಾರದೊಳಗೆ (ಪ್ರತಿವಾದಿ) ಪ್ರತಿಕ್ರಿಯಿಸುವಂತೆ ನೋಟಿಸ್‌ ನೀಡಬೇಕು ಎಂದು ಸೂಚಿಸಿದೆ. ದೂರುಗಳನ್ನು ಮೊಹರು ಮಾಡಿದ ಲಕೋಟೆಯಲ್ಲಿಟ್ಟು ಮತ್ತೆ ಮೊಹರು ಮಾಡಿ ಸಂವಿಧಾನದ 32ನೇ ವಿಧಿಗೆ ಸಂಬಂಧಿಸಿದ ಅರ್ಜಿಯೊಂದಿಗೆ ಸಲ್ಲಿಸತಕ್ಕದ್ದು” ಎಂದು ನ್ಯಾಯಾಲಯ ಆದೇಶಿಸಿದೆ.
ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕುಸ್ತಿಪಟುಗಳು ದೆಹಲಿಯ ಜಂತರ್‌ ಮಂತರ್ ನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement