ಅಥಣಿಯಲ್ಲಿ ಸವದಿಗೆ ಬಿಗ್ ಶಾಕ್ : ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿ ಸೇರ್ಪಡೆಯಾದ ಟಿಕೆಟ್ ಆಕಾಂಕ್ಷಿಯಾಗಿದ್ದ ಕಾಂಗ್ರೆಸ್‌ ನಾಯಕ…!

ಅಥಣಿ : ಅಥಣಿಯಲ್ಲಿ ಈ ಬಾರಿ ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಸೇರ್ಪಡೆಗೊಂಡು ಚುನಾವಣಾ ಕಣಕ್ಕೆ ಇಳಿದಿರುವ ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಪ್ರಭಾವಿ ಪಂಚಮಸಾಲಿ ಯುವನಾಯಕ ಧರೆಪ್ಪ ಠಕ್ಕಣ್ಣವರ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬುಧವಾರ ಬಿಜೆಪಿ ಸೇರ್ಪಡೆಯಾಗಿದ್ದಾರೆ.
ಧರೆಪ್ಪ ಅವರು ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಕಟ್ಟಾ ಬೆಂಬಲಿಗರೆಂದೇ ಗುರುತಿಸಿಕೊಂಡಿದ್ದರು. ಇಂತಹ ನಿಷ್ಠಾವಂತ ನಾಯಕನನ್ನು ಸೆಳೆಯುವಲ್ಲಿ ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಯಶಸ್ವಿಯಾಗಿರುವುದು ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಾಲಿಗೆ ತೀವ್ರ ಹಿನ್ನಡೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅಥಣಿಯಲ್ಲಿ ಈಗಾಗಲೇ ರಮೇಶ ಜಾರಕಿಹೊಳಿ ಅವರು ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರನ್ನು ಬಿಜೆಪಿಗೆ ಸೆಳೆಯುತ್ತಿದ್ದಾರೆ. 39 ವರ್ಷ ವಯಸ್ಸಿನ ಧರೆಪ್ಪ ಅವರು ಅಥಣಿ ಭಾಗದ ಅತ್ಯಂತ ಜನಪ್ರಿಯ ನಾಯಕರು. ತಮ್ಮ ಸಮಾಜ ಸೇವಾ ಕಾರ್ಯದಿಂದ ಅಥಣಿ ತಾಲೂಕಿನ ಎಲ್ಲೆಡೆ ಗುರುತಿಸಿಕೊಂಡಿದ್ದಾರೆ. ಕೊರೊನಾ ಹಾಗೂ ಅಥಣಿ ತಾಲೂಕಿನಲ್ಲಿ ಪ್ರವಾಹ ಬಂದಾಗ ಅವರು ಬಡವರ ಮನೆ ಮನೆಗೆ ತೆರಳಿ ಅಗತ್ಯ ಸಹಾಯ ನೀಡಿ ಜನರ ಮನ ಗೆದ್ದಿದ್ದರು.
ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಪಕ್ಷದ ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರಿಂದ ಧರೆಪ್ಪ ಅವರಿಗೆ ಟಿಕೆಟ್ ಕೈ ತಪ್ಪಿದೆ. ಟಿಕೆಟ್ ಸಿಗದೇ ಇದ್ದುದರಿಂದ ತೀವ್ರ ಅಸಮಾಧಾನಗೊಂಡಿದ್ದ ಅವರನ್ನು ಸೆಳೆಯುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಬಿಜೆಪಿಯಿಂದ ಮಹೇಶ ಕುಮಟಳ್ಳಿ ಸ್ಪರ್ಧಿಸಿದ್ದಾರೆ.

ಪ್ರಮುಖ ಸುದ್ದಿ :-   ಜೂನ್ 21ರಿಂದ 10 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುವ ಮುನ್ಸೂಚನೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement