ದ್ವೇಷ ಭಾಷಣಗಳ ವಿರುದ್ಧ ದೂರು ನೀಡದಿದ್ದರೂ ಪ್ರಕರಣ ದಾಖಲಿಸಿ; ಎಲ್ಲ ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ನಿರ್ದೇಶನ

ನವದೆಹಲಿ: ದ್ವೇಷ ಭಾಷಣ ಮಾಡುವವರ ವಿರುದ್ಧ ಯಾವುದೇ ದೂರು ಸಲ್ಲಿಕೆಯಾಗದಿದ್ದರೂ ಪ್ರಕರಣ ದಾಖಲಿಸಬೇಕು ಎಂದು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್‌ ಶುಕ್ರವಾರ ನಿರ್ದೇಶನ ನೀಡಿದೆ.
ದ್ವೇಷ ಭಾಷಣ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶ, ದೆಹಲಿ ಹಾಗೂ ಉತ್ತರಾಖಂಡ ರಾಜ್ಯಗಳಿಗೆ ಕಳೆದ ವರ್ಷ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿ ಆದೇಶಿಸಿತ್ತು. ಈಗ, ಆದೇಶವನ್ನು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಅದನ್ನು ವಿಸ್ತರಿಸಿದೆ.
‘ದ್ವೇಷ ಭಾಷಣಗಳನ್ನು ಮಾಡುವುದು ಗಂಭೀರ ಸ್ವರೂಪದ ಅಪರಾಧವಾಗಿದ್ದು, ಅಂತಹ ಭಾಷಣಗಳು ದೇಶದ ಜಾತ್ಯತೀತ ರಚನೆಗೆ ಧಕ್ಕೆ ತರುವ ಸಾಮರ್ಥ್ಯವನ್ನು ಹೊಂದಿವೆ’ ಎಂದು ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌ ಹಾಗೂ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ವ್ಯಾಖ್ಯಾನಿಸಿದೆ.
‘ದ್ವೇಷ ಭಾಷಣ ಮಾಡಿರುವುದು ಕಂಡುಬಂದಾಗ, ಯಾವುದೇ ದೂರು ಇಲ್ಲದಿದ್ದರೂ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿ ತಪ್ಪಿತಸ್ಥರ ವಿರುದ್ಧ ತ್ವರಿತವಾಗಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂಬುದನ್ನು ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಖಾತರಿಪಡಿಸಬೇಕು’ ಎಂದು ನ್ಯಾಯಪೀಠ ಸೂಚಿಸಿದೆ. ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಐಜಿಪಿಗಳು ತಮ್ಮ ಅಧೀನ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಆದೇಶಿಸಿದೆ.

ಪ್ರಮುಖ ಸುದ್ದಿ :-   ಬಿಜೆಪಿ ಸೇರಿದ ದೆಹಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅರವಿಂದರ್ ಸಿಂಗ್ ಲವ್ಲಿ

‘ದ್ವೇಷ ಭಾಷಣಗಳಿಗೆ ಸಂಬಂಧಿಸಿ ಕಳೆದ ವರ್ಷ ಅಕ್ಟೋಬರ್‌ 21ರಂದು ನೀಡಿದ್ದ ಆದೇಶವು ಎಲ್ಲ ಧರ್ಮದವರಿಗೂ ಅನ್ವಯಿಸುತ್ತದೆ. ಇದಕ್ಕೆ ಸಂಬಂಧಿಸಿ ಪ್ರಕರಣ ದಾಖಲಿಸಲು ವಿಳಂಬವಾದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು’ ಎಂದು ನ್ಯಾಯಪೀಠ ಎಚ್ಚರಿಸಿದೆ. ವಿಚಾರಣೆಯನ್ನು ಮೇ 12ಕ್ಕೆ ಮುಂದೂಡಿತು.
ಅರ್ಜಿ ವಿಚಾರಣೆ ವೇಳೆ, ಅರ್ಜಿದಾರ ಶಾಹೀನ್‌ ಅಬ್ದುಲ್ಲಾ ಪರ ವಾದ ಮಂಡಿಸಿದ ವಕೀಲ ನಿಜಾಮ್ ಪಾಷಾ, ‘ಕಳೆದ ವರ್ಷ ಸುಪ್ರೀಂಕೋರ್ಟ್‌ ನೀಡಿದ್ದ ಆದೇಶವನ್ನು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಅನುಷ್ಠಾನಕ್ಕೆ ತರಬೇಕು ಎಂದು ಕೋರಿದರು. ದ್ವೇಷ ಭಾಷಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿ ಶಿಫಾರಸು ಮಾಡಲು ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಕ ಮಾಡಬೇಕು’ ಎಂದು ಮನವಿ ಮಾಡಿದರು.

ಸ್ವಯಂಸೇವಾ ಸಂಸ್ಥೆ ಪಿಯುಸಿಎಲ್‌ನ ಮಹಾರಾಷ್ಟ್ರ ಶಾಖೆ ಪರ ಹಾಜರಿದ್ದ ಹಿರಿಯ ವಕೀಲ ಸಂಜಯ ಪಾರೀಖ್, ‘ಸಂಸದರು, ಶಾಸಕರು ಪಾಲ್ಗೊಂಡಿರುವ ಸಾರ್ವಜನಿಕ ಸಭೆಗಳಲ್ಲಿ ದ್ವೇಷ ಭಾಷಣ ಮಾಡುವವರ ವಿರುದ್ಧ ಪೊಲೀಸರು ಕ್ರಮ ತೆಗೆದುಕೊಳ್ಳುತ್ತಿಲ್ಲ. ಈ ಬಗ್ಗೆ ಸುಪ್ರೀಂಕೋರ್ಟ್‌ನ ಸ್ಪಷ್ಟ ಆದೇಶವಿದ್ದರೂ ಇಂಥ ಘಟನೆಗಳು ವರದಿಯಾಗುತ್ತಲೇ ಇವೆ’ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ‘ಪ್ರತಿಯೊಂದು ಘಟನೆ ಕುರಿತು ವಿಚಾರಣೆ ನಡೆಸುವುದು ಸಾಧ್ಯವಿಲ್ಲ. ಈ ಕಾರಣಕ್ಕಾಗಿಯೇ ಆದೇಶ ನೀಡಿದ್ದೇವೆ. ಅದರಂತೆ ಕ್ರಮ ತೆಗೆದುಕೊಳ್ಳುವ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗದ್ದಾಗಿದೆ ‘ ಎಂದು ನ್ಯಾಯಮೂರ್ತಿ ನಾಗರತ್ನ ಹೇಳಿದರು.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ : ಕಾಂಗ್ರೆಸ್​​​ಗೆ ಮತ್ತೊಂದು ಶಾಕ್ ; ಸ್ಪರ್ಧಿಸಲು ನಿರಾಕರಿಸಿ ಟಿಕೆಟ್‌ ವಾಪಸ್‌ ಮಾಡಿದ ಕಾಂಗ್ರೆಸ್​​ ಅಭ್ಯರ್ಥಿ...!

 

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement