ಕಾಂಗ್ರೆಸ್ ನನ್ನನ್ನು 91 ಬಾರಿ ನಿಂದಿಸಿದೆ, ಆದರೆ ನಾನು… : ಮೋದಿ ವಿಷದ ಹಾವಿದ್ದಂತೆ ಎಂಬ ಖರ್ಗೆ ಹೇಳಿಕೆಗೆ ತಿರುಗೇಟು ನೀಡಿದ ಪ್ರಧಾನಿ ಮೋದಿ

ಬೀದರ: ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ‘ವಿಷಪೂರಿತ ಹಾವು ಇದ್ದಂತೆ’ ಎಂದು ಗೇಲಿ ಮಾಡಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶನಿವಾರ ತಿರುಗೇಟು ನೀಡಿದ್ದಾರೆ.
ಬೀದರಿನ ಹುಮನಾಬಾದ್‌ನಲ್ಲಿ ಶನಿವಾರ ಬೆಳಿಗ್ಗೆ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ತಮ್ಮ ವಿರುದ್ಧ ನೀಡಿದ್ದ ‘ವಿಷಪೂರಿತ ಹಾವು’ ಹೇಳಿಕೆ ಉಲ್ಲೇಖಿಸಿ ಕಾಂಗ್ರೆಸ್ ತಮ್ಮನ್ನು “91 ಬಾರಿ” ನಿಂದಿಸಿದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತೆ ನನ್ನನ್ನು ನಿಂದಿಸಲು ಮುಂದುವರಿಸಿದೆ. ಪ್ರತಿ ಬಾರಿ ಕಾಂಗ್ರೆಸ್ ನನ್ನನ್ನು ನಿಂದಿಸಿದಾಗ ಕಾಂಗ್ರೆಸ್‌ ಅನ್ನು ಜನ ಸೋಲಿಸಿದ್ದಾರೆ. ಯಾರೋನನಗೆ ಮಾಡಿದ ಇಂತಹ ನಿಂದನೆಗಳ ಪಟ್ಟಿ ಮಾಡಿ ಕಳುಹಿಸಿದ್ದಾರೆ. ಇದುವರೆಗೆ ಕಾಂಗ್ರೆಸ್ ನವರು ನನ್ನನ್ನು 91 ಬಾರಿ ನಿಂದಿಸಿದ್ದಾರೆ. ಕಾಂಗ್ರೆಸ್ ನನ್ನನ್ನು ನಿಂದಿಸಲಿ, ನಾನು ಕರ್ನಾಟಕದ ಜನರಿಗಾಗಿ ಕೆಲಸ ಮಾಡುತ್ತಲೇ ಇರುತ್ತೇನೆ ಎಂದು ಅವರು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.

ಕಾಂಗ್ರೆಸ್ ಸಂವಿಧಾನಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೂ ನಿಂದಿಸಿತ್ತು. ಸ್ವಾಂತಂತ್ರ್ಯ ಸೇನಾನಿ ವೀರ್ ಸಾವರ್ಕರ್ ಅವರನ್ನು ನಿಂದಿಸುವುದನ್ನೂ ನಾವು ನೋಡುತ್ತೇವೆ. ಕರ್ನಾಟಕದ ಚುನಾವಣೆ ವೇಳೆ ಲಿಂಗಾಯತ ಸಮಾಜಕ್ಕೆ ಕಳ್ಳರು ಎಂದರು. “ಈ ರೀತಿ ನಿಂದನೆಗೆ ಒಳಗಾದವ ನಾನೊಬ್ಬನೇ ಅಲ್ಲ. ಕಳೆದ ಚುನಾವಣೆಯಲ್ಲಿ, ಅವರು “ಚೌಕಿದಾರ್ ಚೋರ್ ಹೈ (ಕಾವಲುಗಾರ ಕಳ್ಳ)” ಎಂಬ ಅಭಿಯಾನವನ್ನು ನಡೆಸಿದರು; ಆಗ ಅವರು ಮೋದಿ ಚೋರ್ ಎಂದರು; ಆಗ ಅವರು ಹಿಂದುಳಿದ ಸಮುದಾಯವೊಂದನ್ನು ಕಳ್ಳರು ಎಂದು ಹೇಳಿದರು; ಮತ್ತು ಈಗ ಕರ್ನಾಟಕದಲ್ಲಿ ಚುನಾವಣೆ ವೇಳೆ ಅವರು ನನ್ನ ಲಿಂಗಾಯತ ಸಹೋದರ ಸಹೋದರಿಯರನ್ನು ಕಳ್ಳರು ಎಂದು ಕರೆಯುವ ದಾರ್ಷ್ಟ್ಯ ತೋರಿಸಿದ್ದಾರೆ. ಬಡವರಿಗಾಗಿ ಮತ್ತು ದೇಶಕ್ಕಾಗಿ ದುಡಿಯುವವರನ್ನು ಅವಮಾನಿಸುವುದು ಕಾಂಗ್ರೆಸ್‌ನ ಇತಿಹಾಸ ಎಂದು ಮೋದಿ ಹೇಳಿದರು.
ಗುರುವಾರ (ಏಪ್ರಿಲ್ 27) ಪ್ರಚಾರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ಖರ್ಗೆ ಅವರು ಮೋದಿಯನ್ನು ವಿಷಪೂರಿತ ಹಾವಿಗೆ ಹೋಲಿಸಿದ್ದರು. ವಿವಾದ ಭುಗಿಲೆದ್ದ ನಂತರ ಅವರು ಹೇಳಿಕೆಯಿಂದ ಹಿಂದೆ ಸರಿದಿದ್ದು, ಯಾರ ಭಾವನೆಗಳಿಗೂ ಧಕ್ಕೆ ತರುವುದು ಅವರ ಉದ್ದೇಶವಲ್ಲ ಮತ್ತು “ಈ ಹೇಳಿಕೆ ಪ್ರಧಾನಿ ಮೋದಿ ಉದ್ದೇಶಿಸಿ ಹೇಳಿದ್ದಲ್ಲ ಬದಲಿಗೆ ಅವರು ಪ್ರತಿನಿಧಿಸುವ ಸಿದ್ಧಾಂತ ಹಾಗೂ ಪಕ್ಷವನ್ನು ಉದ್ದೇಶಿಸಿ ಹೇಳಿದ್ದು ಎಂದು ನಂತರ ಸಮಜಾಯಿಷಿ ನೀಡಿದ್ದರು.

ಪ್ರಮುಖ ಸುದ್ದಿ :-   ಎಚ್.ಡಿ. ರೇವಣ್ಣಗೆ ನ್ಯಾಯಾಂಗ ಬಂಧನ

‘ಜನರು ಮತಗಳ ಮೂಲಕ ಕಾಂಗ್ರೆಸ್‌ಗೆ ಉತ್ತರಿಸ್ತಾರೆ’
“ಕಾಂಗ್ರೆಸ್‌ನವರು ನನ್ನ ವಿರುದ್ಧ ನಿಂದನೆಯ ನಿಘಂಟನ್ನು ರಚಿಸುವ ಬದಲು ಜನರಿಗೆ ಉತ್ತಮ ಆಡಳಿತವನ್ನು ನೀಡಲು ಅದೇ ಸಮಯ ನೀಡಿದ್ದರೆ, ಅವರ ಸ್ಥಿತಿ ಇಷ್ಟು ದಯನೀಯವಾಗಿರುತ್ತಿರಲಿಲ್ಲ” ಎಂದು ಮೋದಿ ಲೇವಡಿ ಮಾಡಿದರು. ಕರ್ನಾಟಕದ ಜನರು ಕಾಂಗ್ರೆಸ್ ನಿಂದನೆಗೆ ತಮ್ಮ ಮತಗಳ ಮೂಲಕವೇ ಉತ್ತರಿಸುತ್ತಾರೆ ಎಂದರು.
“ಕಾಂಗ್ರೆಸ್‌ಗೆ ಬಡವರ ನೋವು ಹಾಗೂ ಹೋರಾಟ ಎಂದಿಗೂ ಅರ್ಥವಾಗುವುದಿಲ್ಲ. ಕಾಂಗ್ರೆಸ್ ಕರ್ನಾಟಕದಲ್ಲಿ ಮನೆಗಳ ನಿರ್ಮಾಣವನ್ನು ನಿಧಾನಗೊಳಿಸಿತು. ಆದರೆ ಬಿಜೆಪಿ ಇಲ್ಲಿ ಮಹಿಳೆಯರಿಗೆ ಮನೆಗಳ ಮಾಲೀಕತ್ವವನ್ನು ನೀಡಿದೆ. ಕಾಂಗ್ರೆಸ್ ಕೇವಲ ತುಷ್ಟೀಕರಣದ ರಾಜಕೀಯ ಮಾಡಿದೆ. ಅದು ಕೇವಲ ಸೀಟುಗಳ ಬಗ್ಗೆ ಮಾತ್ರ ಕಾಳಜಿ ವಹಿಸುತ್ತದೆ. ರಾಜ್ಯದ ಜನರ ಬಗ್ಗೆ ಅಲ್ಲ ಎಂದು ಅವರು ವಾಗ್ದಾಳಿ ನಡೆಸಿದರು.
ಕರ್ನಾಟಕದಲ್ಲಿ ಮುಂಬರುವ ಚುನಾವಣೆಗಳು ಕೇವಲ ಗೆಲ್ಲಲು ಮಾತ್ರವಲ್ಲ, ಕರ್ನಾಟಕವನ್ನು ದೇಶದಲ್ಲೇ ನಂ.1 ರಾಜ್ಯವನ್ನಾಗಿ ಮಾಡುವುದು ನಮ್ಮ ಗುರಿ ಎಂದು ಹೇಳಿದರು.

 

 

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement