ಹೊನ್ನಾವರ: ಉತ್ತರ ಕನ್ನಡದಲ್ಲಿ ಕಾಂಗ್ರೆಸ್ಸಿಗೆ ಶಾಕ್‌, ಶಿವಾನಂದ ಹೆಗಡೆ ಇಂದು ಬಿಜೆಪಿಗೆ ಸೇರ್ಪಡೆ

ಕುಮಟಾ : ಉತ್ತರ ಕನ್ನಡ ಜಿಲ್ಲೆಯ ಕುಮಟಾ – ಹೊನ್ನಾವರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಶಿವಾನಂದ ಹೆಗಡೆ ಅವರು ಹೊರಗಿನವರಿಗೆ ಟಿಕೆಟ್‌ ನೀಡಿದ್ದಕ್ಕೆ ಅಸಮಾಧಾನಗೊಂಡು ಕಾಂಗ್ರೆಸ್ ಬಿಟ್ಟು, ನಾಳೆ (ಮೇ 1) ಬಿಜೆಪಿ ಸೇರ್ಪಡೆಯಾಗಲಿದ್ದಾರೆ.
ಹೊನ್ನಾವರ ಸಮೀಪದ ಕರ್ಕಿಯ ಶ್ರೀಕುಮಾರ ಸಮೂಹ ಸಂಸ್ಥೆಯ ಕಾರ್ಯಾಲಯದ ಆವರಣದಲ್ಲಿ ಸೋಮವಾರ ಮೇ 1 ರಂದು ಸಂಜೆ 4:30 ಕ್ಕೆ ನಡೆಯುವ ಕಾರ್ಯಕ್ರಮದಲ್ಲಿ ಶಿವಾನಂದ ಹೆಗಡೆ ಅವರು ಜಿಲ್ಲಾ ಉಸ್ತುವಾರಿ ಸಚಿವ ಶ್ರೀನಿವಾಸ ಪೂಜಾರಿ ಹಾಗೂ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಈ ಸಂದರ್ಭದಲ್ಲಿ ಹಲವಾರು ಕಾಂಗ್ರೆಸ್‌ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರು ಸಹ ಬಿಜೆಪಿ ಸೇರಲಿದ್ದಾರೆ ಎಂದು ಶಿವಾನಂದ ಹೆಗಡೆ ತಿಳಿಸಿದ್ದಾರೆ.

ಸೇರ್ಪಡೆ ಕಾರ್ಯಕ್ರಮದಲ್ಲಿ ಕುಮಟಾ ಶಾಸಕರಾದ ದಿನಕರ ಶೆಟ್ಟಿ, ಭಟ್ಕಳ ಶಾಸಕರಾದ ಸುನಿಲ ನಾಯ್ಕ ಮೊದಲಾದವರು ಸಹ ಪಾಲ್ಗೊಳ್ಳಲಿದ್ದಾರೆ. ಸಹಕಾರಿ ಧುರೀಣರು ಹಾಗೂ ಕುಮಟಾ ಮತಕ್ಷೇತ್ರದ ಪ್ರಭಾವಿ ಕಾಂಗ್ರೆಸ್ ಮುಖಂಡರಾಗಿದ್ದ ಶಿವಾನಂದ ಹೆಗಡೆ ಕಡತೋಕಾ ಅವರು ಚುನಾವಣೆ ಹೊಸ್ತಿಲಿನಲ್ಲಿ ಬಿಜೆಪಿ ಸೇರುತ್ತಿರುವುದು ಕಾಂಗ್ರೆಸ್‌ಗೆ  ಅಹಿತಕರ ಸುದ್ದಿಯಾಗಿದೆ. ಕುಮಟಾ ಹೊನ್ನಾವರ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಟಿಕೆಟ್‌ ಘೋಷಣೆಯಾದ ತಕ್ಷಣವೇ ಅವರು ಕಾಂಗ್ರೆಸ್‌ನ ಕಿಸಾನ ಘಟಕದ ಜಿಲ್ಲಾ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ಮಾಜಿ ಶಾಸಕಿ ಹಾಗೂ ಕಾಂಗ್ರೆಸ್‌ ನಾಯಕಿಯಾಗಿದ್ದ ಶಾರದಾ ಶೆಟ್ಟಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಅವರಿಗೆ ಬೆಂಬಲ ಘೋಷಿಸಿದ್ದರು. ನಂತರ ಶಾರದಾ ಶೆಟ್ಟಿ ಅವರು ದಿಢೀರ್‌ ಆಗಿ ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ ನಂತರ ಶಿವಾನಂದ ಹೆಗಡೆ ಅವರು ಬಿಜೆಪಿ ಸೇರುತ್ತಾರೆ ಎಂದು ಹೇಳಲಾಗಿತ್ತು. ಇದಕ್ಕೆ ಪುಷ್ಟಿ ನೀಡುವಂತೆ ಶಾಸಕ ದಿನಕರ ಶೆಟ್ಟಿ ಅವರು ಕಡತೋಕಾದ ಶಿವಾನಂದ ಹೆಗಡೆ ಅವರ ಮನೆಗೆ ಭೇಟಿ ನೀಡಿದ್ದರು.

ಪ್ರಮುಖ ಸುದ್ದಿ :-   ಬೆಂಗಳೂರು: ರೈಲಿಗೆ ಸಿಲುಕಿ ಮೂವರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement