ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ: ಬಜರಂಗದಳ, ಪಿಎಫ್‌ಐ ಸೇರಿದಂತೆ ಮತೀಯ ದ್ವೇಷ ಬಿತ್ತುವ ಸಂಘಟನೆಗಳ ನಿಷೇಧದ ಭರವಸೆ

ಬೆಂಗಳೂರು : ಕರ್ನಾಟಕದಲ್ಲಿ ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯ ತನ್ನ ಪ್ರಣಾಳಿಕೆಯಲ್ಲಿ, ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಹಾಗೂ ಬಜರಂಗದಳ ನಿಷೇಧಿಸುವುದಾಗಿ ಕಾಂಗ್ರೆಸ್‌ ಹೇಳಿದೆ.
ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮತ್ತು ಬಜರಂಗದಳದಂತಹ “ಹಗೆತನ ಅಥವಾ ದ್ವೇಷವನ್ನು ಉತ್ತೇಜಿಸುವ” ಸಂಘಟನೆಗಳ ಮೇಲೆ ನಿಷೇಧವನ್ನು ಅದು ಪ್ರಸ್ತಾಪಿಸಿದೆ. ಜಾತಿ ಅಥವಾ ಧರ್ಮದ ಆಧಾರದ ಮೇಲೆ ಸಮುದಾಯಗಳ ನಡುವೆ ದ್ವೇಷವನ್ನು ಹರಡುವ ವ್ಯಕ್ತಿಗಳು ಮತ್ತು ಸಂಘಟನೆಗಳ ವಿರುದ್ಧ ದೃಢವಾದ ಮತ್ತು ನಿರ್ಣಾಯಕ ಕ್ರಮವನ್ನು ತೆಗೆದುಕೊಳ್ಳಲು ಕಾಂಗ್ರೆಸ್ ಪಕ್ಷವು ಬದ್ಧವಾಗಿದೆ ಎಂದು ಹೇಳಿದೆ.
ಅಧಿಕಾರಕ್ಕೆ ಬಂದ 1 ವರ್ಷದೊಳಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿರುವ ಎಲ್ಲಾ ಅನ್ಯಾಯದ ಕಾನೂನುಗಳು ಮತ್ತು ಇತರ ಜನವಿರೋಧಿ ಕಾನೂನುಗಳನ್ನು ರದ್ದುಗೊಳಿಸುವುದಾಗಿ ಭರವಸೆ ನೀಡಿದೆ.
ಕಾಂಗ್ರೆಸ್‌ ಪಕ್ಷವು ಉಚಿತ ಉಡುಗೊರೆಗಳ ಗ್ಯಾರಂಟಿಯನ್ನು ಪುನರುಚ್ಚರಿಸಿದೆ. ಗೃಹ ಜ್ಯೋತಿ (ಎಲ್ಲರಿಗೂ 200 ಯೂನಿಟ್ ಉಚಿತ ವಿದ್ಯುತ್ ಭರವಸೆ), ಗೃಹ ಲಕ್ಷ್ಮಿ (ಕುಟುಂಬದ ಪ್ರತಿಯೊಬ್ಬ ಮಹಿಳೆಗೆ ಮಾಸಿಕ ರೂ 2,000), ಅನ್ನ ಭಾಗ್ಯ (ಬಿಪಿಎಲ್‌ ಕುಟುಂಬದ ಪ್ರತಿ ಸದಸ್ಯರಿಗೆ 10 ಕೆಜಿ ಆಹಾರ ಧಾನ್ಯಗಳು), ಯುವ ನಿಧಿ (ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಗಳವರೆಗೆ ಭತ್ಯೆಯಾಗಿ ಪ್ರತಿ ತಿಂಗಳು 3,000 ರೂ. ಮತ್ತು ನಿರುದ್ಯೋಗಿ ಡಿಪ್ಲೊಮಾ ಹೊಂದಿರುವವರಿಗೆ ಪ್ರತಿ ತಿಂಗಳು ₹ 1,500 ), ಮತ್ತು ಶಕ್ತಿ (ಸಾಮಾನ್ಯ KSRTC/BMTC ಬಸ್ಸುಗಳಲ್ಲಿ ರಾಜ್ಯದಾದ್ಯಂತ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣ) ಗ್ಯಾರಂಟಿ ಯೋಜನೆಗಳನ್ನು ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಿದೆ.
‘ಆರನೇ ಗ್ಯಾರಂಟಿ’ ಎಂಬಂತೆ ರಾಜ್ಯದಲ್ಲಿ ಗೆಲುವು ಸಾಧಿಸಿದರೆ ಸರ್ಕಾರ ರಚನೆಯ ಮೊದಲ ದಿನದ ಮೊದಲ ಸಂಪುಟ ಸಭೆಯಲ್ಲಿ ಈ ಭರವಸೆಗಳನ್ನು ಜಾರಿಗೆ ತರಲಾಗುವುದು ಎಂದು ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರನಾಳಿಕೆ ಬಿಡುಗಡೆ ಮಾಡಿ ಹೇಳಿದರು.
ಕಲ್ಯಾಣ ಕರ್ನಾಟಕ, ಕಿತ್ತೂರು ಕರ್ನಾಟಕ, ಕರಾವಳಿ ಕರ್ನಾಟಕ, ಮಲೆನಾಡು ಪ್ರದೇಶ ಹಾಗೂ ಬೆಂಗಳೂರು ನಗರಗಳಿಗೆ ಪ್ರತ್ಯೇಕ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಈ ಪ್ರಣಾಳಿಕೆಯಲ್ಲಿ ಮುಖ್ಯವಾಗಿ ಕಾಂಗ್ರೆಸ್​, ಈಗಿರುವ ಒಟ್ಟಾರೆ ಮೀಸಲಾತಿಯನ್ನು ಶೇ.50ರಿಂದ ಶೇ75ಕ್ಕೆ ಹೆಚ್ಚಿಸುವುದಾಗಿ ಭರವಸೆ ನೀಡಿದೆ.

ಪ್ರಮುಖ ಸುದ್ದಿ :-   ಭಾರತೀಯ ನೌಕಾಪಡೆಯ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ದಿನೇಶ ತ್ರಿಪಾಠಿ ನೇಮಕ

ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿನ ಪ್ರಮುಖ ಭರವಸೆಗಳು…
* 2006 ರ ನಂತರ ನೇಮಕಗೊಂಡ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆ (OPS) ಅಡಿಯಲ್ಲಿ ಪಿಂಚಣಿ
* ನಿಷೇಧಿತ ಇಸ್ಲಾಮಿಕ್ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಅನ್ನು ಸಂಘ-ಸಂಯೋಜಿತ ವಿಶ್ವ ಹಿಂದೂ ಪರಿಷತ್‌ನ ಬಜರಂಗದಳದೊಂದಿಗೆ ಸಮೀಕರಿಸಿದ ಕಾಂಗ್ರೆಸ್, “ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತ ಸಮುದಾಯಗಳಲ್ಲಿ ದ್ವೇಷವನ್ನು” ಉತ್ತೇಜಿಸುವ ಅಂತಹ ಸಂಘಟನೆಗಳನ್ನು ನಿಷೇಧಿಸುವ ಭರವಸೆ.
* ಪ್ರತಿ ಗ್ರಾಮ ಪಂಚಾಯತಗಳಲ್ಲಿ ಭಾರತ ಜೋಡೋ ಸಾಮಾಜಿಕ ಸಾಮರಸ್ಯ ಸಮಿತಿ ರಚನೆ
* ಪಕ್ಷ ಅಧಿಕಾರಕ್ಕೆ ಬಂದರೆ ತಪ್ಪಿತಸ್ಥರನ್ನು ಶಿಕ್ಷಿಸಲು ವಿಶೇಷ ಕಾನೂನು ಜಾರಿಗೊಳಿಸುವ ಮೂಲಕ ಪಿಡಬ್ಲ್ಯೂಡಿ, ಗ್ರಾಮೀಣಾಭಿವೃದ್ಧಿ, ನೀರಾವರಿ, ನಗರಾಭಿವೃದ್ಧಿ ಮತ್ತು ವಿದ್ಯುತ್ ಕ್ಷೇತ್ರದಲ್ಲಿನ ಭ್ರಷ್ಟಾಚಾರವನ್ನು ನಿರ್ಮೂಲನೆ
* ರಾತ್ರಿ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ತಿಂಗಳಿಗೆ 5000 ರೂಪಾಯಿ ವಿಶೇಷ ಭತ್ಯೆ
*‘ಹಾಲು ಕ್ರಾಂತಿ’ ಜಾರಿಗೆ, ದಿನಕ್ಕೆ 1.5 ಕೋಟಿ ಲೀಟರ್ ಹಾಲು ಉತ್ಪಾದನೆ
* ರೈತರಿಗೆ ಹಾಲಿನ ಮೇಲಿನ ಸಬ್ಸಿಡಿಯನ್ನು 5 ರೂ.ಗಳಿಂದ 7 ರೂ.ಗಳಿಗೆ ಹೆಚ್ಚಿಸುವುದಾಗಿ ಭರವಸೆ
* ರಾಜ್ಯದ ಎಲ್ಲಾ ನ್ಯಾಯಾಲಯಗಳನ್ನು ಆಧುನೀಕರಿಸಲು 2,000 ಕೋಟಿ ರೂಪಾಯಿಗಳ ಮೀಸಲಾದ ನಿಧಿ ಸ್ಥಾಪನೆ
* ರಾಜ್ಯದ ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ಹೈಸ್ಪೀಡ್ ವೈ-ಫೈ ಹಾಟ್‌ಸ್ಪಾಟ್‌ಗಳನ್ನು ಸ್ಥಾಪಿಸುವ ಭರವಸೆ
* ಮಹಾತ್ಮಾ ಗಾಂಧಿ ಗ್ರಾಮ ಸ್ವರಾಜ್ ಯೋಜನೆಯಡಿ, ಶುದ್ಧ ಕುಡಿಯುವ ನೀರು, ನೈರ್ಮಲ್ಯ, ಮೂಲ ಶಿಕ್ಷಣ, ಆರೋಗ್ಯ ಮತ್ತು ಎಲ್ಲಾ ಹವಾಮಾನ ರಸ್ತೆಗಳನ್ನು ಒದಗಿಸುವ ಗ್ರಾಮಗಳನ್ನು ಸುಧಾರಿಸಲು ಐದು ವರ್ಷಗಳಲ್ಲಿ 50,000 ಕೋಟಿ ರೂಪಾಯಿ ಹೂಡಿಕೆ ಮಾಡುವುದಾಗಿ ಭರವಸೆ
* ಪ್ರಣಾಳಿಕೆಯಲ್ಲಿ ಪ್ರಸ್ತಾಪಿಸಲಾದ ಕೃಷಿ ಸರ್ವೋದಯ ನಿಧಿ ಅಡಿಯಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಐದು ವರ್ಷಗಳಲ್ಲಿ ಕೃಷಿ, ಸಬ್ಸಿಡಿ, ಸಾಲ ಮತ್ತು ವಿಮೆಯ ಆಧುನೀಕರಣಕ್ಕೆ 1.50 ಲಕ್ಷ ಕೋಟಿ ರೂ.ನಿಗದಿ
* ಪ್ರತಿ ವರ್ಷ 5,000 ಮಹಿಳಾ ಉದ್ಯಮಿಗಳನ್ನು ಬೆಂಬಲಿಸುವುದಾಗಿ ಭರವಸೆ, ಆಹಾರ ಸಂಸ್ಕರಣೆ, ಅಡುಗೆ, ಮೊಬೈಲ್ ಕ್ಯಾಂಟೀನ್‌ಗಳು, ಘನತ್ಯಾಜ್ಯ ನಿರ್ವಹಣೆ ಮುಂತಾದ ಆಧುನಿಕ ಅಗತ್ಯಗಳನ್ನು ತೆಗೆದುಕೊಳ್ಳಲು ಮಹಿಳೆಯರನ್ನು ಉತ್ತೇಜಿಸಲು ಐದು ವರ್ಷಗಳಲ್ಲಿ 5,000 ಸ್ತ್ರೀ-ಶಕ್ತಿ ಸೂಕ್ಷ್ಮ ಉದ್ಯಮಗಳನ್ನು ಪೋಷಿಸುವ ಘೋಷಣೆ
* ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ಭರವಸೆ
* ಗೃಹ ಲಕ್ಷ್ಮಿ ಯೋಜನೆಯಡಿ ಕುಟುಂಬದ ಪ್ರತಿ ಮಹಿಳೆಗೆ 2,000 ರೂ. ಮತ್ತು ನಿರುದ್ಯೋಗಿ ಪದವೀಧರರಿಗೆ ಎರಡು ವರ್ಷಕ್ಕೆ 3,000 ರೂ. ಭತ್ಯೆ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಕ್ತಾರ ಪವನ್ ಖೇರಾ ಅವರ ಸಮ್ಮುಖದಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಯಿತು. ಸರ್ವಜನಾಂಗದ ಶಾಂತಿಯ ತೋಟಕ್ಕೆ ಕಾಂಗ್ರೆಸ್ ಬದ್ಧತೆ ಈ ಘೋಷ ವಾಕ್ಯದೊಂದಿಗೆ ಪ್ರಣಾಳಿಕೆ ತಯಾರು ಮಾಡಿದ್ದೇವೆ ಎಂದು ಪ್ರಣಾಳಿಕೆ ಸಮಿತಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹೇಳಿದರು.
ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆ ಬಿಡುಗಡೆ ಬಳಿಕ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನ ಪ್ರಣಾಳಿಕೆ ಜನರಿಗೆ ಸಾಕಷ್ಟು ರಿಲೀಫ್ ಕೊಡಲಿದೆ. ನಾವು ಏನು ಹೇಳುತ್ತೇವೆ. ಅದನ್ನು ಮಾಡುತ್ತೇವೆ. ನಾವು ಈ ಹಿಂದೆ ಕಾಂಗ್ರೆಸ್ ಸರ್ಕಾರದಲ್ಲಿ ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ನಮ್ಮ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಹೇಳಿದ್ದಾರೆ.
ಕೇಂದ್ರವು ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆಯಡಿ ಕೇಂದ್ರ ಸರ್ಕಾರವು ಪಿಎಫ್‌ ಐ ಅನ್ನು ನಿಷೇಧಿಸಿತ್ತು.
ಮೇ 10 ರಂದು ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಪ್ರಮುಖ ಸುದ್ದಿ :-   ಈ ಹಳ್ಳಿಯಲ್ಲಿರುವ ಮತದಾನ ಕೇಂದ್ರದ ಒಬ್ಬರೇ ಒಬ್ಬರು ಮತದಾರರಿಗಾಗಿ 40 ಕಿಮೀ ನಡೆದುಕೊಂಡು ಹೋದ ಚುನಾವಣಾ ಸಿಬ್ಬಂದಿ...!

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement